ಬೀಟ್‌ರೂಟ್: ಬಣ್ಣ ನೋಡಿ ಹೆದರಬೇಡಿ
ಇದು ನಿಮ್ಮ ಆರೋಗ್ಯಮಿತ್ರ

ನಿರುಪದ್ರವಿ ಬೀಟ್‌ರೂಟ್ ನಿಮ್ಮ ತರಕಾರಿ ಶೆಲ್ಫ್‌ನಲ್ಲಿ ಕಾಯಂ ಸ್ಥಾನ ಪಡೆಯದಿರಬಹುದು. ಆದರೆ ಇದರ ಆರೋಗ್ಯ ಪ್ರಯೋಜನಗಳನ್ನು ಯಾರೂ ಅಲ್ಲಗಳೆಯುವಂತಿಲ್ಲ. ದೇಹಕ್ಕೆ ಕೊರತೆ ಇರುವ ಹಲವು ಅಂಶಗಳನ್ನು ಇದು ನಿಮಗೆ ನೀಡುವ ಅಪರೂಪದ ತರಕಾರಿ ಇದು. ಕೇವಲ ಸಲಾಡ್‌ಗಳ ಅಲಂಕಾರಕ್ಕೆ ಇದನ್ನು ಬಳಸುವ ದಿನ ಕಳೆದುಹೋಗಿದೆ. ಇದೀಗ ಹಲವು ಮಂದಿ ಪೌಷ್ಟಿಕಾಂಶ ತಜ್ಞರು ಇದರ ಬಳಕೆಗೆ ಜನರಿಗೆ ಉತ್ತೇಜನ ನೀಡುತ್ತಿದ್ದಾರೆ. ಇದನ್ನು ನಿಮ್ಮ ಆಹಾರ ಕ್ರಮದ ಕಾಯಂ ಅಂಶವಾಗಿ ಉಳಿಸಿಕೊಳ್ಳಿ. ಬೀಟ್‌ರೂಟ್ ಸೇವನೆ ಏಕೆ ಮುಖ್ಯ? ಅದರ ಆರೋಗ್ಯ ಪ್ರಯೋಜನಗಳು ಇಲ್ಲಿವೆ ನೋಡಿ.
ಬೀಟ್‌ರೂಟ್‌ನಲ್ಲಿ ಹೇರಳ ಪೌಷ್ಟಿಕಾಂಶಗಳಿವೆ. ಇದು ನೈಟ್ರಿಕ್ ಆಕ್ಸೈಡ್ ಆಗಿ ಬದಲಾಗುತ್ತದೆ. ಇದು ದೇಹದ ರಕ್ತನಾಳಗಳನ್ನು ವಿಕಸನಗೊಳ್ಳುವಂತೆ ಮಾಡುತ್ತದೆ. ಅಂದರೆ ನಿಮ್ಮ ರಕ್ತಪರಿಚಲನೆ ಸರಾಗವಾಗುವಂತೆ ಮಾಡುತ್ತದೆ. ಪರಿಣಾಮವಾಗಿ ರಕ್ತದ ಒತ್ತಡ ನಿಯಂತ್ರಣಕ್ಕೆ ಬರುತ್ತದೆ. ಈಗ ಹೇಳಿ ಬೀಟ್‌ರೂಟ್ ಬೇಯಿಸಿ ತಿನ್ನುವುದನ್ನು ನೀವು ಇಷ್ಟಪಡುವುದಿಲ್ಲವೇ?
ಕನಿಷ್ಠ ವಾರಕ್ಕೆ ಮೂರು ಬಾರಿಯಾದರೂ ಬೀಟ್‌ರೂಟ್ ರಸ ಸೇವಿಸಿ.
ಇದು ನಿಮ್ಮ ಹೃದಯಕ್ಕೂ ಆಪ್ಯಾಯಮಾನ. ಬಿ ವಿಟಮಿನ್ ಫೊಲೇಟ್ ಹಾಗೂ ಬೀಟೈನ್ ಹೊಂದಿರುವ ಇದು ಹೃದಯವನ್ನೂ ಸುಸ್ಥಿತಿಯಲ್ಲಿಡುತ್ತದೆ. ಇದರ ಜತೆಗೆ ಹೊಮೊಸಿಸ್ಟೈನ್ ಎಂಬ ಅಮಿನೊ ಆಮ್ಲವನ್ನು ಕಡಿಮೆ ಮಾಡಿ ಹೃದ್ರೋಗ ತಡೆಯುತ್ತದೆ.
ನಿತ್ರಾಣ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಬೀಟ್‌ರೂಟ್ ನಿಮ್ಮ ಸಹಾಯಕ್ಕೆ ಬರುತ್ತದೆ. ಇದರಲ್ಲಿನ ಉಪಯುಕ್ತ ಪೌಷ್ಟಿಕಾಂಶಗಳು ನಿಮ್ಮ ಸಾಮರ್ಥ್ಯ ವೃದ್ಧಿಸುತ್ತವೆ. ನಿಮ್ಮ ಕ್ಷಮತೆ ಹೆಚ್ಚಿಸುತ್ತದೆ. ಇದು ಮೆದುಳಿನ ಕ್ರಿಯೆಯನ್ನು ಕೂಡಾ ಚುರುಕುಗೊಳಿಸುತ್ತದೆ ಎಂದು ಅಧ್ಯಯನಗಳು ದೃಢಪಡಿಸಿವೆ.
ಇದು ನಿಮ್ಮ ಲಿವರ್ ಚಟುವಟಿಕೆ ಉದ್ದೀಪಿಸುವ ಹಾಗೂ ವಿಷಕಾರಿ ಅಂಶವನ್ನು ದೇಹದಿಂದ ಹೊರಹಾಕುವಲ್ಲೂ ಇದು ಮಹತ್ವದ ಪಾತ್ರ ವಹಿಸುತ್ತದೆ. ಇದು ಲಿವರ್‌ನಲ್ಲಿ ಕೊಬ್ಬು ಶೇಖರಣೆಯಾಗುವುದನ್ನು ತಡೆಯುತ್ತದೆ.







