ಸುಳ್ಯ: ಎಪ್ರಿಲ್ 17ರಂದು ಗೌಡ ನೌಕರರ ಸಮಾವೇಶ
ಸುಳ್ಯ: ಸುಳ್ಯ ತಾಲೂಕು ಗೌಡ ಯುವ ಸೇವಾ ಸಂಘದ ನೇತೃತ್ವದಲ್ಲಿ ಎಪ್ರಿಲ್ 17ರಂದು ಕೊಡಿಯಾಲ್‌ಬೈಲಿನ ಗೌಡ ಸಮುದಾಯ ಭವನದಲ್ಲಿ ಸರಕಾರಿ, ಖಾಸಗಿ, ಸಹಕಾರಿ ಹಾಗೂ ಸರಕಾರ ಸಹಭಾಗಿತ್ವದ ಸಂಸ್ಥೆ ಹಾಗೂ ಇಲಾಖೆಗಳಲ್ಲಿ ಗೌಡ ನೌಕರರ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಗೌಡ ಯುವ ಸೇವಾ ಸಂಘದ ಅಧ್ಯಕ್ಷ ದಿನೇಶ್ ಮಡಪ್ಪಾಡಿ ಈ ವಿಷಯ ತಿಳಿಸಿದರು. ಗೌಡ ನೌಕರರೆಲ್ಲರನ್ನು ಒಂದೆಡೆ ಸೇರಿಸಿ, ಸಂಘವು ನಡೆಸುತ್ತಿರುವ ಸಮಾಜ ಚಟುವಟಿಕೆ ಮತ್ತು ಸಮುದಾಯ ಭವನದ ಕೆಲಸ ಕಾರ್ಯಗಳ ಬಗ್ಗೆ ಮಾಹಿತಿ ನೀಡಲು ಮತ್ತು ಇದಕ್ಕೆಲ್ಲಾ ಅವರ ಸಹಕಾರ, ಪ್ರೋತ್ಸಾಹ ಮತ್ತು ಮಾರ್ಗದರ್ಶನವನ್ನು ಪಡೆಯಲು ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಈ ಸಮಾವೇಶದಲ್ಲಿ ವಿಶೇಷ ಪ್ರತಿಭೆ ಹಾಗೂ ಸಾಧನೆಗಾಗಿ ರಾಷ್ಟ್ರ ಮಟ್ಟದ ಸಾಧನೆಗೈದಿರುವ 6 ಮಕ್ಕಳನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.
ಸಮಾವೇಶವನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ನಿನ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಉದ್ಘಾಟಿಸಲಿದ್ದು, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಡಾ.ಕೆ.ವಿ.ರೇಣುಕಾ ಪ್ರಸಾದ್, ಪುತ್ತೂರು ಒಕ್ಕಲಿಗರ ಸಂಘದ ಗೌರವಾಧ್ಯಕ್ಷ ಮೋಹನ್ ಗೌಡ ಇಡ್ಯಡ್ಕ, ಮೈಸೂರಿನ ಕೆಎಸ್‌ಆರ್‌ಪಿ ಬೆಟಾಲಿಯನ್ ಕಮಾಂಡೆಂಟ್ ಎಸ್.ರಾಮದಾಸ ಗೌಡ ಪುತ್ತೂರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಾಧನೆಗೈದ ಮಕ್ಕಳನ್ನು ಆರ್ಥಿಕ ಇಲಾಖೆಯ ನಿವೃತ್ತ ನಿಯಂತ್ರಕ ಕಾನಡ್ಕ ಶಿವರಾಮ ಗೌಡ ಗೌರವಿಸಲಿದ್ದಾರೆ ಎಂದವರು ಹೇಳಿದರು.
ಸಂಘದ ವತಿಯಿಂದ ಗೌಡ-ವಧೂವರರ ನೋಂದಣಿ ಯೋಜನೆಯು ಕಳೆದ ಒಂದು ವರ್ಷದಿಂದ ನಡೆಯುತ್ತಿದ್ದು, ಸಾಕಷ್ಟು ಆಸಕ್ತರು ಇದರ ಪ್ರಯೋಜನ ಪಡೆದಿದ್ದಾರೆ. ಈ ವರೆಗೆ 54 ವಿವಾಹ ನಡೆದಿದೆ. ಈ ಸಮಾವೇಶದಲ್ಲಿ ಎರಡನೇ ಬಾರಿಗೆ ಗೌಡ ವಧೂವರರ ವಿವಾಹ ನೋಂದಣಿ ಮತ್ತು ಮುಖಾಮುಖಿ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿದೆ. ಅಪರಾಹ್ನ ಸಂಘದ ವಾರ್ಷಿಕ ಮಹಾಸಭೆಯೂ ನಡೆಯಲಿದೆ ಎಂದವರು ಹೇಳಿದರು.
ಸಮಾವೇಶ ನಿರ್ದೇಶಕ ದೊಡ್ಡಣ್ಣ ಬರೆಮೇಲು, ಪಿ.ಎಸ್.ಗಂಗಾಧರ್, ಡಿ.ಟಿ.ದಯಾನಂದ, ಕೆ.ಜಿ.ಸತೀಶ್, ಮಾಧವ ಗೌಡ ಮಡಪ್ಪಾಡಿ, ಸಾಂತಪ್ಪ ಗೌಡ ಮೋಂಟಡ್ಕ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.







