‘ಮಧುಮೇಹ ರೋಗದ ಬಗ್ಗೆ ಜನರಲ್ಲಿ ಅರಿವು ಮೂಡಲಿ’
ವಿಶ್ವ ಆರೋಗ್ಯ ದಿನಾಚರಣೆ

ತೀರ್ಥಹಳಿ,ಎ.9: ಜನರಲ್ಲಿ ಆರೋಗ್ಯ ಮೂಡಿಸುವ ನಿಟ್ಟಿನಲ್ಲಿ ವಿಶ್ವ ಆರೋಗ್ಯ ದಿನಾಚರಣೆಯ ಸಂದರ್ಭದಲ್ಲಿ ಪ್ರತೀ ವರ್ಷವೂ ಮುಖ್ಯವಾಗಿ ಒಂದೊಂದು ಆರೋಗ್ಯದ ಸಮಸ್ಯೆಯ ಬಗ್ಗೆ ಅರಿವು ಮೂಡಿಸುವಂತಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದ್ದು, ಇದು ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದೆ ಎಂದು ತೀರ್ಥಹಳ್ಳಿ ಹೆಚ್ಚುವರಿ ವ್ಯವಹಾರ ನ್ಯಾಯಾಧೀಶ ಲೋಕೇಶ್ ಧನಪಾಲ್ ಹವಲೆ ಹೇಳಿದ್ದಾರೆ.
ಪಟ್ಟಣದ ಜೆ.ಸಿ. ಆಸ್ಪತ್ರೆ ಆವರಣದಲ್ಲಿ ನಡೆದ ತಾಲೂಕು ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ, ಆರೋಗ್ಯಾಧಿಕಾರಿಗಳ ಕಚೆೇರಿ, ಆಯುಷ್ ಇಲಾಖೆ ಸಂಯುಕ್ತಾಶ್ರಯದ ವಿಶ್ವ ಆರೋಗ್ಯ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಈ ವರ್ಷ ವಿಶೇಷವಾಗಿ ಮಧುಮೇಹ ರೋಗದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ನಡೆಯುತ್ತಿದೆ. ಪ್ರತಿಯೊಬ್ಬ ವ್ಯಕ್ತಿಯೂ ಆರೋಗ್ಯಕ್ಕೆ ಆದ್ಯತೆ ನೀಡಿದಲ್ಲಿ ರೋಗಗಳಿಂದ ಪಾರಾಗಬಹುದು ಎಂದು ತಿಳಿಸಿದರು.
ಜೆ.ಸಿ. ಆಸ್ಪತ್ರೆಯ ವೈದ್ಯ ಡಾ. ಗಿರೀಶ್ ಮಾತನಾಡಿ, ಆರೋಗ್ಯ ಇಲಾಖೆಯಲ್ಲಿ ಕೇವಲ ಚಿಕಿತ್ಸೆಯನ್ನು ಮಾತ್ರ ನೀಡುತ್ತಿಲ್ಲ. ಜೊತೆಗೆ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ಮಧುಮೇಹದಂತಹ ಪುರಾತನ ಕಾಯಿಲೆಯೊಂದು ಪ್ರಸ್ತುತ ದಿನಗಳಲ್ಲಿ ಜನರಲ್ಲಿ ಹೆಚ್ಚು ಆತಂಕ ಮೂಡಿಸುವ ಕಾಯಿಲೆಯಾಗಿದೆ. ಈ ವಿಚಾರದ ಬಗ್ಗೆ ಜಾಗೃತಿ ಮೂಡಿಸುವ ಕೆಲಸವಾಗುತ್ತಿದೆ ಎಂದರು.
ಈ ಸಮಾರಂಭದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರಕಾಶ್, ತಾ. ಆಯುಷ್ ಅಧಿಕಾರಿ ಡಾ. ಗಣೇಶ್ ಕಾಮತ್, ವೈದ್ಯಾಧಿಕಾರಿಗಳಾದ ಡಾ.ಪ್ರಭಾಕರ, ಡಾ.ನಿಶ್ಚಲ, ಆರೋಗ್ಯ ಇಲಾಖೆಯ ಟೀವಿ ಸತೀಶ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಶಿವಪ್ರಕಾಶ್ ವಹಿಸಿದ್ದರು.







