ಒಂದೂ ರನ್ ನೀಡದೇ ಆರು ವಿಕೆಟ್ :ಇದು ಬಂಗಾಳದ ಸ್ಪಿನ್ನರ್‌ನ ಅಮೋಘ ಸಾಧನೆ

ಕೋಲ್ಕತಾ, ಎ.9: ಬಂಗಾಳದ ಆಫ್- ಸ್ಪಿನ್ನರ್ ವೃತ್ತಿಕ್ ಚಟರ್ಜಿ ಶನಿವಾರ ಕ್ರಿಕೆಟ್‌ನ ಅತ್ಯಂತ ಅಪರೂಪದ ಸಾಧನೆಯಿಂದ ಗಮನ ಸೆಳೆದಿದ್ದಾರೆ. ಚಟರ್ಜಿ ಬಂಗಾಳ ಕ್ರಿಕೆಟ್ ಸಂಸ್ಥೆಯ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ದ್ವಿದಿನ ಪ್ಲೇ-ಆಫ್ ಪಂದ್ಯದಲ್ಲಿ ಭವಾನಿಪುರ್ ಕ್ಲಬ್ ಪರ ಒಂದೂ ರನ್ ನೀಡದೆ ಆರು ವಿಕೆಟ್‌ಗಳನ್ನು ಪಡೆದಿದ್ದಾರೆ.
ಮುಹಮ್ಮದನ್ ಸ್ಪೋರ್ಟಿಂಗ್ ತಂಡದ ವಿರುದ್ಧ ಪಂದ್ಯದ ಮೊದಲ ಓವರ್‌ನ 1ನೆ, 3ನೆ ಹಾಗೂ 5ನೆ ಎಸೆತದಲ್ಲಿ ವಿಕೆಟ್ ಪಡೆದ ಚಟರ್ಜಿ ಎರಡನೆ ಓವರ್‌ನಲ್ಲಿ ಮೊದಲ ಹಾಗೂ 6ನೆ ಎಸೆತದಲ್ಲಿ ಮತ್ತೆರಡು ವಿಕೆಟ್ ಪಡೆದರು. ಮೂರನೆ ಓವರ್‌ನಲ್ಲ್ಲಿ ಎರಡನೆ ಎಸೆತದಲ್ಲಿ ಮತ್ತೊಂದು ವಿಕೆಟ್ ಪಡೆದರು. ಅಂತಿಮವಾಗಿ ಚಟರ್ಜಿ 2.2 ಓವರ್‌ಗಳಲ್ಲಿ 2 ಮೇಡನ್ ಎಸೆದು ಒಂದೂ ರನ್ ನೀಡದೆ 6 ವಿಕೆಟ್ ಪಡೆದರು.
ಚಟರ್ಜಿಯ ಅದ್ಭುತ ಬೌಲಿಂಗ್‌ಗೆ ತತ್ತರಿಸಿದ ಮುಹಮ್ಮದನ್ ಸ್ಪೋರ್ಟಿಂಗ್ ತಂಡ ಭವಾನಿಪುರ್ ಕ್ಲಬ್‌ನ 290 ರನ್‌ಗೆ ಉತ್ತರವಾಗಿ 13.2 ಓವರ್‌ಗಳಲ್ಲಿ 37 ರನ್‌ಗೆ ಆಲೌಟಾಯಿತು. ಭವಾನಿಪುರ ಕ್ಲಬ್ 253 ರನ್‌ಗಳ ಅಂತರದಿಂದ ಭರ್ಜರಿ ಜಯ ದಾಖಲಿಸಿತು.
ಚಟರ್ಜಿ ಈಸ್ಟ್‌ಬಂಗಾಳದ ಮಧ್ಯಮ ವೇಗಿ ಶ್ಯಾಮ್ ಸುಂದರ್ ಘೋಷ್ 1963-64ರಲ್ಲಿ ಸಿಎಬಿ ಪ್ರಥಮ ಡಿಜಿಜನ್ ಪಂದ್ಯದಲ್ಲಿ ಒಂದೂ ರನ್ ನೀಡದೆ ಪಡೆದಿದ್ದ 7 ವಿಕೆಟ್‌ಗಳನ್ನು ದಾಖಲೆ ಮುರಿಯುವುದರಿಂದ ವಂಚಿತರಾದರು.





