ಐಪಿಎಲ್: ಮುಂಬೈ ವಿರುದ್ಧ ಪುಣೆ ಶುಭಾರಂಭ

ಮುಂಬೈ, ಎ.9: ಆರಂಭಿಕ ಆಟಗಾರ ಅಜಿಂಕ್ಯ ರಹಾನೆ ಆಕರ್ಷಕ ಅರ್ಧಶತಕ (66 ರನ್, 42 ಎಸೆತ, 7 ಬೌಂಡರಿ, 3 ಸಿಕ್ಸರ್) ಹಾಗೂ ಬೌಲರ್‌ಗಳ ಶಿಸ್ತುಬದ್ಧ ಬೌಲಿಂಗ್‌ನ ನೆರವಿನಿಂದ ಪುಣೆ ಸೂಪರ್ ಜೈಂಟ್ಸ್ ತಂಡ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ಐಪಿಎಲ್‌ನ ಮೊದಲ ಪಂದ್ಯದಲ್ಲಿ 9 ವಿಕೆಟ್‌ಗಳ ಅಂತರದಿಂದ ಗೆಲುವು ಸಾಧಿಸಿದೆ.
9ನೆ ಆವೃತ್ತಿಯ ಐಪಿಎಲ್‌ನಲ್ಲಿ ಮೊದಲ ಬಾರಿ ಆಡುತ್ತಿರುವ ಎಂಎಸ್ ಧೋನಿ ನೇತೃತ್ವದ ಪುಣೆ ತಂಡ ಗೆಲುವಿನ ಆರಂಭ ಪಡೆದಿದೆ. ಶನಿವಾರ ಇಲ್ಲಿನ ವಾಂಖೆಡೆ ಸ್ಟೇಡಿಯಂನಲ್ಲಿ ಗೆಲ್ಲಲು 122 ರನ್ ಸುಲಭ ಗುರಿ ಪಡೆದಿದ್ದ ಪುಣೆ ತಂಡ 14.4 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 126 ರನ್ ಗಳಿಸಿತು.
ರಹಾನೆ ಹಾಗೂ ಎಫ್‌ಡು ಪ್ಲೆಸಿಸ್ ಮೊದಲ ವಿಕೆಟ್‌ಗೆ 78 ರನ್ ಜೊತೆಯಾಟ ನಡೆಸಿ ಪುಣೆಗೆ ಭದ್ರ ಬುನಾದಿ ಹಾಕಿಕೊಟ್ಟರು. ಪ್ಲೆಸಿಸ್ 34 ರನ್ ಗಳಿಸಿ ಸ್ಪಿನ್ನರ್ ಹರ್ಭಜನ್ ಸಿಂಗ್‌ಗೆ ಕ್ಲೀನ್‌ಬೌಲ್ಡಾದರು.
ಆಗ 2ನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 48 ರನ್ ಸೇರಿಸಿದ ಕೆವಿನ್ ಪೀಟರ್ಸನ್(21ರನ್, 14 ಎಸೆತ, 2 ಸಿಕ್ಸರ್) ಹಾಗೂ ರಹಾನೆ ತಂಡಕ್ಕೆ ಇನ್ನೂ 32 ಎಸೆತಗಳು ಬಾಕಿ ಇರುವಾಗಲೇ ಸುಲಭ ಜಯ ತಂದುಕೊಟ್ಟರು.
ಮುಂಬೈ ಇಂಡಿಯನ್ಸ್121/8: ಇದಕ್ಕೆ ಮೊದಲು ಐಪಿಎಲ್ ಟ್ವೆಂಟಿ-20 ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಟಾಸ್ ಜಯಿಸಿದ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮ ಮೊದಲು ಬ್ಯಾಟಿಂಗ್ ಆಯ್ದುಕೊಂಡರು.
ಎಂಎಸ್ ಧೋನಿ ನಾಯಕತ್ವದ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ಬೌಲರ್‌ಗಳ ಶಿಸ್ತುಬದ್ಧ ದಾಳಿಗೆ ತತ್ತರಿಸಿದ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 121 ರನ್ ಗಳಿಸಲಷ್ಟೇ ಶಕ್ತವಾಯಿತು.
ಮುಂಬೈ ಇನಿಂಗ್ಸ್‌ನಲ್ಲಿ ಹರ್ಭಜನ್ ಸಿಂಗ್(ಔಟಾಗದೆ 45 ರನ್, 30 ಎಸೆತ, 7 ಬೌಂಡರಿ, 1 ಸಿಕ್ಸರ್) ಅಗ್ರ ಸ್ಕೋರರ್ ಎನಿಸಿಕೊಂಡರು.ಇಶಾಂತ್ ಶರ್ಮ ಎಸೆದ ಅಂತಿಮ ಓವರ್‌ನಲ್ಲಿ 15 ರನ್ ಗಳಿಸಿದ ಹರ್ಭಜನ್ ತಂಡದ ಮೊತ್ತವನ್ನು 120ರ ಗಡಿ ದಾಟಿಸಿದರು. ಅಂಬಟಿ ರಾಯುಡು(22) ಎರಡಂಕೆ ದಾಟಿದರು. ಮುಂಬೈ ನಾಯಕನ ನಿರ್ಧಾರ ತಪ್ಪೆಂದು ತಿಳಿಯಲು ಹೆಚ್ಚುಹೊತ್ತು ಹಿಡಿಯಲಿಲ್ಲ.
5ನೆ ಓವರ್‌ನಲ್ಲಿ 30 ರನ್ ಗಳಿಸುವಷ್ಟರಲ್ಲಿ ಅಗ್ರ ಕ್ರಮಾಂಕದ ನಾಲ್ವರು ದಾಂಡಿಗರು ಪೆವಿಲಿಯನ್ ಸೇರಿದರು. ಇಶಾಂತ್ ಶರ್ಮ ಹಾಗೂ ಮಿಚೆಲ್ ಮಾರ್ಷ್ ಜೋಡಿ ಮುಂಬೈನ ಅಗ್ರ ಕ್ರಮಾಂಕದ ದಾಂಡಿಗರನ್ನು ಕಾಡಿದರು.
ವೇಗಿಗಳಾದ ಇಶಾಂತ್(2-36) ಹಾಗೂ ಮಾರ್ಷ್‌ಗೆ(2-21) ಉತ್ತಮ ಬೆಂಬಲ ನೀಡಿದ ಸ್ಪಿನ್ನರ್ ಮುರುಗನ್ ಅಶ್ವಿನ್ 16 ರನ್ ವೆಚ್ಚಕ್ಕೆ 1 ವಿಕೆಟ್ ಪಡೆದು ಮುಂಬೈ ರನ್ ಗಳಿಸದಂತೆ ತಡೆದರು. ಕೇವಲ ಒಂದು ಓವರ್ ಎಸೆದ ಆರ್.ಅಶ್ವಿನ್ 1 ವಿಕೆಟ್ ಪಡೆದರು.







