16 ವರ್ಷಕ್ಕಿಂತ ಕೆಳಗಿನ ಬಾಲಕಿಯರ ಜತೆ ಸಮ್ಮತಿಯ ಸೆಕ್ಸ್ ಕೂಡಾ ಅಪರಾಧ
ಚಂಡಿಗಡ, ಎ. 9: ಹದಿನಾರು ವರ್ಷಕ್ಕಿಂತ ಕೆಳಗಿನ ಬಾಲಕಿಯರ ಜತೆ ಸಮ್ಮತಿಯ ಲೈಂಗಿಕ ಚಟುವಟಿಕೆ ನಡೆಸುವುದು ಕೂಡಾ ಅತ್ಯಾಚಾರಕ್ಕೆ ಸಮಾನ ಎಂದು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಪರಸ್ಪರ ಸಮ್ಮತಿಯ ಲೈಂಗಿಕ ಚಟುವಟಿಕೆಯಾಗಿರುವುದನ್ನು ಪರಿಗಣಿಸಿ ತಮ್ಮ ಮೇಲಿನ ಪ್ರಕರಣ ಕೈಬಿಡಬೇಕು ಎಂದು ಕೋರಿ ಆರೋಪಿಗಳು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿರುವ ಹೈಕೋರ್ಟ್ ಈ ಐತಿಹಾಸಿಕ ತೀರ್ಪು ನೀಡಿದೆ.
ಹದಿನಾರು ವರ್ಷಕ್ಕಿಂತ ಕೆಳಗಿನ ಬಾಲಕಿಯರ ಜತೆಗೆ ಲೈಂಗಿಕ ಸಂಬಂಧ ಹೊಂದಲು ಅವರಿಗೆ ಆಸೆ ತೋರಿಸಲು ಅವಕಾಶವಿದೆ. ಅದರ ಪರಿಣಾಮದ ಅರಿವಿಲ್ಲದೇ ಆಕೆ ಸಹಸಮ್ಮತಿ ನೀಡುವ ಸಾಧ್ಯತೆ ಇದೆ. ಆದ್ದರಿಂದ ಇದನ್ನು ನೈಜ ಸಮ್ಮತಿ ಎಂದು ಪರಿಗಣಿಸಲಾಗದು. ಉದ್ದೇಶಿತ ಚಟುವಟಿಕೆಯ ಪರಿಣಾಮವನ್ನು ಅರಿಯುವಷ್ಟು ಆಕೆ ಪ್ರಬುದ್ಧಳಾಗಿರುವುದಿಲ್ಲ. ಆದ್ದರಿಂದ ಇದರ ಲಾಭ ಪಡೆದುಕೊಂಡು ಸಮ್ಮತಿಯ ಸೆಕ್ಸ್ ಎಂದು ಬಿಂಬಿಸುವಂತಿಲ್ಲ ಎಂದು ಸ್ಪಷ್ಟಪಡಿಸಿದೆ.
ನ್ಯಾಯಮೂರ್ತಿ ಅನಿತಾ ಚೌಧರಿ ಈ ಮಹತ್ವದ ತೀರ್ಪು ನೀಡಿದ್ದಾರೆ. ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿದ್ದ ವ್ಯಕ್ತಿ ಮಾಡಿದ ಮನವಿಯನ್ನು ತಿರಸ್ಕರಿಸಲಾಗಿದೆ. ಸಮ್ಮತಿಯ ಸೆಕ್ಸ್‌ನಲ್ಲಿ ಕೂಡಾ ಹೆಣ್ಣು 16 ವರ್ಷಕ್ಕಿಂತ ಕೆಳಗಿನವರಾಗಿದ್ದಲ್ಲಿ, ಪುರುಷನನ್ನು ಅಪರಾಧಿ ಎಂದೇ ತೀರ್ಮಾನಿಸಬೇಕಾಗುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ.
ಈ ಪ್ರಕರಣದಲ್ಲಿ ಆರೋಪಿ 15 ವರ್ಷದ ಬಾಲಕಿಯನ್ನು 2010ರ ಜನವರಿ 22ರಂದು ಅಪಹರಿಸಿದ್ದ. ಆದರೆ ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಸಂತ್ರಸ್ತೆಯ ತಂದೆಗೆ ಯಾರು ಅಪಹರಿಸಿದ್ದಾರೆ ಎನ್ನುವುದು ತಿಳಿದಿರಲಿಲ್ಲ. ಕೊನೆಗೆ ದೂರುದಾರರ ಮನೆಯಲ್ಲೇ ಮೇಸ್ತ್ರಿಯಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೇ ಈ ಕೃತ್ಯ ಎಸಗಿರುವುದನ್ನು ಬಾಲಕಿ ಹೇಳಿದ್ದಳು. ಆತ ಈ ಮೊದಲೇ ವಿವಾಹವಾಗಿದ್ದು,ಇಬ್ಬರು ಮಕ್ಕಳಿದ್ದಾರೆ.
ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆ ನಡೆದು 2010ರ ಅಕ್ಟೋಬರ್ 10ರಂದು ಆರೋಪಿಯನ್ನು ತಪ್ಪಿತಸ್ಥ ಎಂದು ಘೋಷಿಸಿ, ಹತ್ತು ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು. ಈ ತೀರ್ಪಿನ ವಿರುದ್ಧ ಹೈಕೋರ್ಟ್‌ನಲ್ಲಿ ಆರೋಪಿ ಮೇಲ್ಮನವಿ ಸಲ್ಲಿಸಿದ್ದ.







