40 ಕಂಪೆನಿಗಳ ವಿರುದ್ಧ ಡಿಆರ್‌ಐ ತನಿಖೆ
ಕಲ್ಲಿದ್ದಲು ಆಮದಿಗೆ ಅಧಿಕ ದರ ತೋರಿಸಿ ವಂಚನೆ
ಹೊಸದಿಲ್ಲಿ,ಎ.9: ಸಾರ್ವಜನಿಕ ಹಾಗೂ ಖಾಸಗಿ ವಲಯದ ಸುಮಾರು 40 ಕಂಪೆನಿಗಳು ತಾವು ಆಮದು ಮಾಡಿಕೊಳ್ಳುವ ಕಲ್ಲಿದ್ದಲಿಗೆ ಅಧಿಕ ದರವನ್ನು ತೋರಿಸುವ ಮೂಲಕ 35 ಸಾವಿರ ರೂ.ಗೂ ಅಧಿಕ ತೆರಿಗೆ ವಂಚಿಸಿದ ಆರೋಪಕ್ಕೆ ಸಂಬಂಧಿಸಿ ಕೇಂದ್ರ ಹಣಕಾಸು ಸಚಿವಾಲಯ ಹಾಗೂ ಕಂದಾಯ ಗುಪ್ತಚರ ನಿರ್ದೇಶನಾಲಯವು (ಡಿಆರ್‌ಐ) ತನಿಖೆ ಆರಂಭಿಸಿವೆ.
ಕಳೆದ ಎರಡು ಮೂರು ವರ್ಷಗಳಿಂದ ಈ ವಂಚನೆ ನಡೆಯುತ್ತಿದ್ದು, ಈ ಬಗ್ಗೆ ಪೂರ್ಣ ಪ್ರಮಾಣದ ತನಿಖೆ ನಡೆಸಲಾಗುವುದೆಂದು ಅಧಿಕೃತ ಮೂಲಗಳು ತಿಳಿಸಿವೆ. ಅದಾನಿ ಗ್ರೂಪ್, ಅನಿಲ್ ಅಂಬಾನಿ ಗ್ರೂಪ್, ಶಶಿ ರೂಯಿಯಾ, ಎಸ್ಸಾರ್ ಆಯಿಲ್ , ಎಸ್ಸಾರ್ ಪವರ್, ಜೆಎಸ್‌ಡಬ್ಲು ಸ್ಟೀಲ್ ಕಂಪೆನಿಗಳು ಹಾಗೂ ಸಾರ್ವಜನಿಕರಂಗದ ಕಂಪೆನಿಗಳಾದ ಎಂಎಂಟಿಸಿ ಲಿ., ಎನ್‌ಟಿಪಿಸಿ ಮತ್ತು ತಮಿಳುನಾಡು ವಿದ್ಯುತ್‌ಚ್ಛಕ್ತಿ ನಿಗಮ ಸೇರಿದಂತೆ 40ಕ್ಕೂ ಅಧಿಕ ಕಂಪೆನಿಗಳ ಬಗ್ಗೆ ತನಿಖೆ ನಡೆಸಲಾಗುವುದೆಂದು ಅವು ತಿಳಿಸಿವೆ.
ಪ್ರಸಕ್ತ ಹಣಕಾಸು ವರ್ಷದಿಂದ ನಡೆಯುವ ಎಲ್ಲಾ ಕಲ್ಲಿದ್ದಲು ಆಮದು ವ್ಯವಹಾರಗಳ ಬಗ್ಗೆ ಕೂಲಂಕಶ ಪರಿಶೀಲನೆ ನಡೆಸುವಂತೆಯೂ ಡಿಆರ್‌ಐ ದೇಶಾದ್ಯಂತದ ಕಸ್ಟಮ್ಸ್ ಕಚೇರಿಗಳಿಗೆ ಸೂಚನೆ ನೀಡಿವೆ. ಈ ವಿಷಯದ ಬಗ್ಗೆ ಕೇಂದ್ರ ವಿತ್ತ ಸಚಿವಾಲಯ ಕೂಡಾ ಪರಿಶೀಲನೆ ನಡೆಸುತ್ತಿದ್ದು, ಡಿಆರ್‌ಐನ ಅಂತಿಮ ವರದಿಯನ್ನು ಅಧರಿಸಿ ಅದು ಸೂಕ್ತ ಕ್ರಮವನ್ನು ಕೈಗೊಳ್ಳಲಿದೆ.
ಹಲವಾರು ಕಂಪೆನಿಗಳು ಇಂಡೋನೇಶ್ಯದಿಂದ ತಾವು ಆಮದು ಮಾಡಿಕೊಳ್ಳುವ ಕಲ್ಲಿದ್ದಲಿನ ಬೆಲೆಗಳನ್ನು ಶೇ.100ರಷ್ಟು ಕೃತಕ ಏರಿಕೆ ಮಾಡಿ ತೋರಿಸುತ್ತವೆ. ತಾವು ಮಾರಾಟ ಮಾಡುವ ವಿದ್ಯುತ್ ದರವನ್ನು ಹೆಚ್ಚಿಸಲು ಹಾಗೂ ತಮ್ಮಲ್ಲಿರುವ ಹಣಕಾಸು ನಿಧಿಗಳನ್ನು ಕಡಿಮೆಯಾಗಿ ತೋರಿಸಲು ಅವು ಈ ತಂತ್ರವನ್ನು ಅನುಸರಿಸುತ್ತವೆ.
ಸುಳ್ಳು ದರಗಳನ್ನು ನಮೂದಿಸಿದ ಸರಕುಪಟ್ಟಿ (ಇನ್‌ವಾಯ್ಸಿ)ಯನ್ನು ಸಿಂಗಾಪುರ, ದುಬೈ, ಹಾಂಕಾಂಗ್ ಹಾಗೂ ಬ್ರಿಟಿಶ್ ವರ್ಜಿನಿಯಾ ದ್ವೀಪಗಳಲ್ಲಿರುವ ಇನ್‌ವಾಯ್ಸಿ ಏಜೆಂಟರ ಮೂಲಕ ನೀಡಲಾಗುತ್ತದೆ ಎಂದು ಡಿಆರ್‌ಐನ ಎಚ್ಚರಿಕೆ ನೋಟಿಸ್‌ನಲ್ಲಿ ತಿಳಿಸಿದೆ.





