ಉಡುಪಿ: ರಾಷ್ಟ್ರೀಯ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ

ಉಡುಪಿ, ಎ.9: ಹೆಚ್ಚು ಅಧ್ಯಯನದಲ್ಲಿ ತೊಡಗಿಸಿಕೊಂಡಾಗ ಉತ್ತಮ ವಕೀಲರಾಗಲು ಸಾಧ್ಯ. ಕಾನೂನುಗಳು ಬದಲಾಗುತ್ತಿರುವುದರಿಂದ ಈ ವೃತ್ತಿಯಲ್ಲಿನ ಅಧ್ಯಯ ನಕ್ಕೆ ಕೊನೆ ಎಂಬುದಿಲ್ಲ. ಹಾಗಾಗಿ ಇಲ್ಲಿ ಎಲ್ಲರೂ ಕೂಡ ವಿದ್ಯಾರ್ಥಿಗಳೇ ಆಗಿರುತ್ತಾರೆ ಎಂದು ಹಿರಿಯ ನ್ಯಾಯವಾದಿ ಕುಂದಾಪುರದ ಎ.ಎಸ್.ಎನ್.ಹೆಬ್ಬಾರ್ ಹೇಳಿದ್ದಾರೆ.
ಕುಂಜಿಬೆಟ್ಟು ವೈಕುಂಠ ಬಾಳಿಗಾ ಕಾನೂನು ಕಾಲೇಜಿನ ಆಶ್ರಯದಲ್ಲಿ ನ್ಯಾಯವಾದಿ ಪಿ.ಶಿವಾಜಿ ಶೆಟ್ಟಿ ಸ್ಮರಣಾರ್ಥ ಎರಡು ದಿನಗಳ ಕಾಲ ಕಾಲೇಜು ಸಭಾಂಗಣದಲ್ಲಿ ಏರ್ಪಡಿಸಲಾದ ರಾಷ್ಟ್ರೀಯ ಅಣಕು ನ್ಯಾಯಾಲಯ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಗಾಂಧಿ, ನೆಹರೂ ಸೇರಿದಂತೆ ಹಲವು ಸ್ವಾತಂತ್ರ ಹೋರಾಟಗಾರರು ವಕೀಲರೇ ಆಗಿದ್ದರು. ಈಗಿನ ವಕೀಲರು ಕೂಡ ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಯುವ ವಕೀಲರು ನಾಯಕತ್ವದ ಗುಣವನ್ನು ಬೆಳೆಸಿಕೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಕಾಲೇಜು ಗರ್ವನಿಂಗ್ ಕೌನ್ಸಿಲ್‌ನ ಸೀತಾರಾಮ ಶೆಟ್ಟಿ ಮಂಗಳೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರಿನ ಹಿರಿಯ ವಕೀಲ ಶಶಿಕಿರಣ್ ಶೆಟ್ಟಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಜಯಂತಿ ಶಿವಾಜಿ ಶೆಟ್ಟಿ ಟ್ರೋಫಿಯನ್ನು ಅನಾವರಣಗೊಳಿಸಿದರು.





