ಐಪಿಎಲ್: ಪ್ರಮುಖ ಐವರು ಆಟಗಾರರ ಸಾಧನೆಯ ಅವಲೋಕನ

ಹೊಸದಿಲ್ಲಿ, ಎ.9: ಮುಂದಿನ 51 ದಿನಗಳ ಕಾಲ ವಿಶ್ವದಾದ್ಯಂತದ ಕ್ರಿಕೆಟ್ ಅಭಿಮಾನಿಗಳನ್ನು ರಂಜಿಸಲಿರುವ ಐಪಿಎಲ್‌ನ ಅಗ್ರ-5 ಆಟಗಾರರ ಸಾಧನೆಯ ಅವಲೋಕನ ಇಲ್ಲಿದೆ.....
ವಿರಾಟ್ ಕೊಹ್ಲಿ: ವಿರಾಟ್ ಕೊಹ್ಲಿ 2016ರಲ್ಲಿ ಆಡಿರುವ 13 ಟ್ವೆಂಟಿ-20 ಪಂದ್ಯಗಳಲ್ಲಿ 625 ರನ್ ಗಳಿಸಿದ್ದಾರೆ. ಹೀಗಾಗಿ ಈವರ್ಷದ ಐಪಿಎಲ್‌ನಲ್ಲಿ ಕೊಹ್ಲಿ ಕಮಾಲ್ ಮುಂದುವರಿಯಬಹುದು. ಟ್ವೆಂಟಿ-20 ವಿಶ್ವಕಪ್‌ನಲ್ಲಿ ಸರಣಿಶ್ರೇಷ್ಟ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಕೊಹ್ಲಿ ಪ್ರಸ್ತುತ ಭರ್ಜರಿ ಫಾರ್ಮ್‌ನಲ್ಲಿದ್ದು, ಇದು ಆರ್‌ಸಿಬಿಗೆ ಅನುಕೂಲಕರವಾಗಿದೆ.
ಜೋಸ್ ಬಟ್ಲರ್: ಪವರ್‌ಫುಲ್ ಬ್ಯಾಟಿಂಗ್ ಸರದಿಯನ್ನು ಹೊಂದಿರುವ ಮುಂಬೈ ಇಂಡಿಯನ್ಸ್ ಈ ಬಾರಿ 3.8 ಕೋಟಿ ರೂ. ನೀಡಿ ಜೋಸ್ ಬಟ್ಲರ್‌ರನ್ನು ಖರೀದಿಸಿದೆ. ಬಟ್ಲರ್ ಇಂಗ್ಲೆಂಡ್‌ನ ಪರ ಏಕದಿನ ಕ್ರಿಕೆಟ್‌ನಲ್ಲಿ ಮೂರು ಬಾರಿ ವೇಗದ ಶತಕ ದಾಖಲಿಸಿ ಹೊಸ ದಾಖಲೆ ನಿರ್ಮಿಸಿದ್ದರು. ಈ ವರ್ಷದ 8 ಟ್ವೆಂಟಿ-20 ಪಂದ್ಯಗಳಲ್ಲಿ 277 ರನ್ ಗಳಿಸಿದ್ದಾರೆ. ಭಾರತದಲ್ಲಿ ನಡೆದಿರುವ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಕೆಳ ಕ್ರಮಾಂಕದಲ್ಲಿ ಆಡಿದ್ದರೂ ಒಟ್ಟು 191 ರನ್ ಗಳಿಸಿದ್ದರು.
ಕೆವಿನ್ ಪೀಟರ್ಸನ್: ಕಳೆದ ವರ್ಷ ಸನ್‌ರೈಸರ್ಸ್ ಹೈದರಾಬಾದ್ ತಂಡದಿಂದ ಬಿಡುಗಡೆಯಾಗಿರುವ ಪೀಟರ್ಸನ್ ಇದೀಗ ವಿಶ್ವದ ಎಲ್ಲ ಟ್ವೆಂಟಿ-20 ಟೂರ್ನಿಗಳಲ್ಲಿ ಬ್ಯುಸಿಯಾಗಿದ್ದಾರೆ. ಬಿಗ್‌ಬಾಶ್‌ನಲ್ಲಿ 9 ಪಂದ್ಯಗಳಲ್ಲಿ 323 ರನ್ ಗಳಿಸಿ ಮೂರನೆ ಗರಿಷ್ಠ ಸ್ಕೋರರ್ ಎನಿಸಿಕೊಂಡಿದ್ದಾರೆ. ಚೊಚ್ಚಲ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಕ್ವೆಟ್ಟಾ ಗ್ಲಾಡಿಯೇಟರ್ಸ್ ಪರ 215 ರನ್ ಗಳಿಸಿದ್ದರು. ಈ ವರ್ಷ ಪುಣೆ ತಂಡದ ಪರ ಧೋನಿ ನಾಯಕತ್ವದಲ್ಲಿ ಆಡಲಿದ್ದಾರೆ. ಅತ್ಯಂತ ದೊಡ್ಡ ಟ್ವೆಂಟಿ-20 ಟೂರ್ನಿಯಲ್ಲಿ ಮಿಂಚುವ ಸಾಧ್ಯತೆಯಿದೆ. ಕ್ರಿಸ್ ಲಿನ್: ಐಪಿಎಲ್‌ನ ತನ್ನ ಚೊಚ್ಚಲ ಪಂದ್ಯದಲ್ಲಿ ಎಬಿಡಿವಿಲಿಯಸ್ ನೀಡಿದ ಕ್ಯಾಚ್ ಪಡೆಯುವ ಮೂಲಕ ಕೋಲ್ಕತಾ ಜನರ ಮನ ಗೆದ್ದಿರುವ ಆಸ್ಟ್ರೇಲಿಯದ ಕ್ರಿಸ್ ಲಿನ್ ಬಿಗ್‌ಬಾಶ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿ ಐಪಿಎಲ್‌ಗೆ ಆಗಮಿಸಿದ್ದಾರೆ. ಲಿನ್ 8 ಬಿಬಿಎಲ್ ಪಂದ್ಯಗಳಲ್ಲಿ 378 ರನ್ ಗಳಿಸಿ ಟೂರ್ನಿಯಲ್ಲಿ ಅಗ್ರ ಸ್ಕೋರರ್ ಎನಿಸಿಕೊಂಡಿದ್ದರು. ಇದರಲ್ಲಿ 1ಶತಕ ಹಾಗೂ 3 ಅರ್ಧಶತಕಗಳಿವೆ. ಕಳೆದ 2 ಆವೃತ್ತಿಯ ಐಪಿಎಲ್‌ನಲ್ಲಿ ಕೇವಲ 3 ಪಂದ್ಯಗಳನ್ನು ಆಡಿರುವ ಲಿನ್ ಈ ಬಾರಿ ಕೋಲ್ಕತಾ ತಂಡದಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದಾರೆ.
ಶ್ರೇಯಸ್ ಐಯ್ಯರ್: ಕೇವಲ ಎರಡೇ ವರ್ಷದಲ್ಲಿ ಮುಂಬೈನ ಪರ ರಣಜಿ ಟ್ರೋಫಿಯಲ್ಲಿ ಹೊಸ ಅಲೆ ಸೃಷ್ಟ್ಟಿಸಿರುವ 21ರ ಹರೆಯದ ಆಟಗಾರ ಶ್ರೇಯಸ್ ಐಯ್ಯರ್ ಎರಡೂ ಋತುವಿನಲ್ಲಿ ಮುಂಬೈ ಪರ ಗರಿಷ್ಠ ಸ್ಕೋರ್ ದಾಖಲಿಸಿದ್ದರು. 2014ರಲ್ಲಿ ಡೆಲ್ಲಿ ತಂಡದಲ್ಲಿ ಆಡುವ ಮೂಲಕ ಐಪಿಎಲ್‌ಗೆ ಪ್ರವೇಶಿಸಿದ್ದ ಅಯ್ಯರ್ ಒಟ್ಟು 439 ರನ್ ಗಳಿಸಿ ಗಮನ ಸೆಳೆದಿದ್ದರು. ಈ ವರ್ಷ ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಶ್ರೇಷ್ಠ ಪ್ರದರ್ಶನ ಮುಂದುವರಿಸಲು ಎದುರು ನೋಡುತ್ತಿದ್ದಾರೆ.







