ಶ್ರೀನಗರ: ವಿದ್ಯಾರ್ಥಿಗಳ ಬೇಡಿಕೆಗೆ ಕೇಂದ್ರ ತಿರಸ್ಕಾರ
ಶ್ರೀನಗರ, ಎ. 9: ಶ್ರೀನಗರ ರಾಷ್ಟ್ರೀಯ ತಾಂತ್ರಿಕ ಸಂಸ್ಥೆಯನ್ನು ಬೇರೆಡೆಗೆ ವರ್ಗಾಯಿಸಬೇಕು ಎಂದು ಹೊರರಾಜ್ಯದ ವಿದ್ಯಾರ್ಥಿಗಳು ಮುಂದಿಟ್ಟಿರುವ ಬೇಡಿಕೆಯನ್ನು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ತಿರಸ್ಕರಿಸಿದೆ. ಆದರೆ ಅವರ ನೈಜ ಸಮಸ್ಯೆಗಳನ್ನು ಪರಿಹರಿಸುವ ಭರವಸೆ ನೀಡಿದೆ.
ಎನ್‌ಐಟಿ ಹೊರರಾಜ್ಯದ ವಿದ್ಯಾರ್ಥಿಗಳ ನಿಯೋಗ ಉಪಮುಖ್ಯಮಂತ್ರಿ ನಿರ್ಮಲ್ ಸಿಂಗ್ ಹಾಗೂ ಶಿಕ್ಷಣ ಸಚಿವ ನಯೀಮ್ ಅಖ್ತರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿತು. ಇದೇ ವೇಳೆ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಹಿರಿಯ ಅಧಿಕಾರಿಗಳೂ ಜತೆಗಿದ್ದು ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿದರು.
ಕ್ಯಾಂಪಸ್ ಬದಲಾಯಿಸಬೇಕು ಎಂಬ ವಿದ್ಯಾರ್ಥಿಗಳ ಬೇಡಿಕೆಯನ್ನು ತಿರಸ್ಕರಿಸಲಾಗಿದ್ದು, ಈ ಬಗ್ಗೆ ವಿದ್ಯಾರ್ಥಿಗಳಿಗೂ ಮನವರಿಕೆ ಮಾಡಿಕೊಡಲಾಗಿದೆ ಎಂದು ಅಧಿಕೃತ ಮೂಲಗಳು ಹೇಳಿವೆ.
ಆದರೆ ಅವರ ನೈಜ ಸಮಸ್ಯೆಗಳನ್ನು ಬಗೆಹರಿಸುವ ಬಗ್ಗೆ ಸಚಿವರು ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಅಧಿಕಾರಿಗಳು ಭರವಸೆ ನೀಡಿದರು. ಉತ್ತಮ ಸೌಲ್ಯಗಳನ್ನು ಕ್ಯಾಂಪಸ್‌ನ ಒಳಗೆ ಕಲ್ಪಿಸಿಕೊಡುವುದು ಮತ್ತು ಶೈಕ್ಷಣಿಕ ವಾತಾವರಣವನ್ನು ಉತ್ತಮಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದರು.
ಎನ್‌ಐಟಿಯಲ್ಲಿ ಭದ್ರತಾ ವಿಷಯ ಎಂದೂ ಸಮಸ್ಯೆಯಾಗಿಲ್ಲ. ಈ ಸಂಬಂಧ ಎತ್ತಿರುವ ಸಮಸ್ಯೆಗಳನ್ನು ಕೂಡಾ ಅಧಿಕಾರಿಗಳು ಬಗೆಹರಿಸಲಿದ್ದಾರೆ ಎಂದು ನಿಯೋಗಕ್ಕೆ ತಿಳಿಸಲಾಯಿತು. ಕಣಿವೆ ರಾಜ್ಯದಲ್ಲಿ ಭಯೋತ್ಪಾದನೆ ಅಧಿಕವಾಗಿರುವ ಸಂದಭರ್ದಲ್ಲಿ ಕೂಡಾ ವಿದ್ಯಾರ್ಥಿಗಳು ಇಲ್ಲಿದ್ದರು. ಆದರೆ ಯಾವ ಸಮಸ್ಯೆಗಳೂ ಆಗಿರಲಿಲ್ಲ ಎಂದು ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು ಎಂದು ಮೂಲಗಳು ಹೇಳಿವೆ.
ಇದು ಧನಾತ್ಮಕ ಬೆಳವಣಿಗೆಯಾಗಿದ್ದು, ಕ್ಯಾಂಪಸ್‌ನ ಒಳಗೆ ಪರಿಸ್ಥಿತಿ ಸುಧಾರಿಸುತ್ತಿದೆ ಎಂದು ಎನ್‌ಐಟಿ ಅಧಿಕಾರಿಗಳು ಹೇಳಿದ್ದಾರೆ. ಪರಿಸ್ಥಿತಿ ಈಗ ಶಾಂತವಾಗಿದೆ. ಆದರೆ ಹೊರಗಿನ ವಿದ್ಯಾರ್ಥಿಗಳು ಇನ್ನೂ ಪ್ರತಿಭಟನೆ ಮುಂದುವರಿಸಿದ್ದಾರೆ ಎಂದು ಎನ್‌ಐಟಿ ರಿಜಿಸ್ಟ್ರಾರ್ ಫಯಾಝ್ ಅಹ್ಮದ್ ಮಿರ್ ವಿವರಿಸಿದರು. ಆದರೆ ಇಂದು ಮುಂಜಾನೆ ಪ್ರತಿಭಟನೆ ಇರಲಿಲ್ಲ ಎಂದು ಸ್ಪಷ್ಟಪಡಿಸಿದರು. ವಿದ್ಯಾರ್ಥಿಗಳು ಹಾಸ್ಟೆಲ್‌ಗಳಲ್ಲಿದ್ದು, ಶನಿವಾರ ಹಾಗೂ ರವಿವಾರದ ಹಿನ್ನೆಲೆಯಲ್ಲಿ ಎರಡು ದಿನ ತರಗತಿಗಳು ಇಲ್ಲ ಎಂದು ಹೇಳಿದರು.







