ಸೆಮಿಫೈನಲ್‌ನಲ್ಲಿ ಮತ್ತೆ ಮುಗ್ಗರಿಸಿದ ಸೈನಾ

ಮಲೇಷ್ಯಾ ಓಪನ್ ಸೂಪರ್ ಸರಣಿ
ಮಲೇಷ್ಯಾ, ಎ.9: ಮಲೇಷ್ಯಾ ಓಪನ್ ಸೂಪರ್ ಸರಣಿ ಪ್ರೀಮಿಯರ್ ಟೂರ್ನಿಯಲ್ಲಿ ಭಾರತದ ಸವಾಲು ಅಂತ್ಯಗೊಂಡಿದೆ. ಮಹಿಳೆಯರ ಸಿಂಗಲ್ಸ್‌ನ ಸೆಮಿಫೈನಲ್ ಸುತ್ತಿನಲ್ಲಿ ಸೈನಾ ನೆಹ್ವಾಲ್ ಅವರು ಮತ್ತೊಮ್ಮೆ ಮುಗ್ಗರಿಸಿ ನಿರಾಸೆ ಮೂಡಿಸಿದ್ದಾರೆ.
ಶನಿವಾರ ಇಲ್ಲಿ ನಡೆದ ಅಂತಿಮ 4ರ ಸುತ್ತಿನಲ್ಲಿ ಸೈನಾ ಅವರು ವಿಶ್ವದ ನಂ.9ನೆ ಚೈನೀಸ್ ತೈಪೆ ಆಟಗಾರ್ತಿ ತೈ ಝು ಯಿಂಗ್ ವಿರುದ್ಧ 19-21, 13-21 ಗೇಮ್‌ಗಳ ಅಂತರದಿಂದ ಸೋತಿದ್ದಾರೆ. ಸೈನಾ ಇದೀಗ ಸತತ ಮೂರನೆ ಬಾರಿ ಸೆಮಿಫೈನಲ್‌ನಲ್ಲಿ ಎಡವಿದ್ದಾರೆ. ಸ್ವಿಸ್ ಓಪನ್ ಗ್ರಾನ್‌ಪ್ರಿ ಗೋಲ್ಡ್ ಹಾಗೂ ಇಂಡಿಯಾ ಸೂಪರ್ ಸರಣಿಯಲ್ಲಿ ಸೈನಾ ಸೆಮಿ ಫೈನಲ್‌ನಲ್ಲಿ ಸೋತಿದ್ದರು.
ಹೈದರಾಬಾದ್‌ನ ಆಟಗಾರ್ತಿ ಸೈನಾ ಅವರು ಥೈ ಝು ವಿರುದ್ಧ ಆಡಿರುವ 12 ಪಂದ್ಯಗಳ ಪೈಕಿ ಏಳು ಬಾರಿ ಸೋತಿದ್ದಾರೆ. ಇದರಲ್ಲಿ ಕಳೆದ ತಿಂಗಳು ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್‌ನ ಕ್ವಾರ್ಟರ್ ಫೈನಲ್ ಪಂದ್ಯವೂ ಸೇರಿದೆ. ವಿಶ್ವದ ನಂ.8ನೆ ಆಟಗಾರ್ತಿ ಸೈನಾ ಎ.12 ರಿಂದ ಸಿಂಗಾಪುರ ಸಿಟಿಯಲ್ಲಿ ಆರಂಭವಾಗಲಿರುವ ಸಿಂಗಾಪುರ ಓಪನ್‌ನಲ್ಲಿ ಸ್ಪರ್ಧಿಸಲಿದ್ದಾರೆ.





