ಮಹಾರಾಷ್ಟ್ರಕ್ಕೆ ಬನ್ನಿ.. ಕುತ್ತಿಗೆ ಕೊಯ್ಯುತ್ತೇವೆ
ಉವೈಸಿಗೆ ರಾಜ್ ಠಾಕ್ರೆ ಧಮ್ಕಿ
ಮುಂಬೈ, ಎ.9: ಪ್ರಧಾನಿ ನರೇಂದ್ರ ಮೋದಿ ವಿಶ್ವಾಸಕ್ಕೆ ದ್ರೋಹ ಬಗೆದಿದ್ದಾರೆ. ತಾಕತ್ತಿದ್ದರೆ ಶಿವಸೇನೆ ಬಿಜೆಪಿ ನೇತೃತ್ವದ ಮೈತ್ರಿಕೂಟದಿಂದ ಹೊರಬರಲಿ. ಉದ್ಧವ್ ಠಾಕ್ರೆ ಪಕ್ಷಕ್ಕೆ ನೈಜವಾಗಿ ಸಲ್ಲಬೇಕಿದ್ದ ಗೌರವವನ್ನು ನೀಡುತ್ತಿಲ್ಲ ಎಂದು ಎಂಎನ್‌ಎಸ್ ಮುಖಂಡ ರಾಜ್‌ಠಾಕ್ರೆ ಹೇಳಿದ್ದಾರೆ.
ಯಾವ ಪ್ರಧಾನಿ ಇಷ್ಟೊಂದು ವಿದೇಶ ಪ್ರವಾಸ ಕೈಗೊಂಡಿದ್ದಾರೆ? ಅಚ್ಛೇ ದಿನ್ ಎಲ್ಲಿವೆ? ಎಂದು ರಾಜ್ ಠಾಕ್ರೆ ಅವರು ಶನಿವಾರ ರಾತ್ರಿ ಶಿವಾಜಿ ಪಾರ್ಕ್‌ನಲ್ಲಿ ಪಕ್ಷದ ವತಿಯಿಂದ ನಡೆದ ಗುಧಿ ಪಡ್ವಾ ರ್ಯಾಲಿಯಲ್ಲಿ ಮಾತನಾಡುತ್ತಾ ಪ್ರಶ್ನಿಸಿದರು.
ಕಪ್ಪು ಹಣ ತರುವ ಭರವಸೆ ನೀಡಿದ್ದಿರಿ. ಅದು ಎಲ್ಲಿದೆ? ಮಲ್ಯ ಕೋಟ್ಯಂತರ ರೂಪಾಯಿ ಪಡೆದು ದೇಶದಿಂದ ಪಲಾಯನ ಮಾಡಿದರು. ನಾವು ಮಾಡಿದ ಏಕೈಕ ತಪ್ಪು ಎಂದರೆ ಬಿಜೆಪಿಗೆ ಮತ ಹಾಕಿದ್ದು ಎಂದು ಆಭರಣ ವರ್ತಕರು ಹೇಳುತ್ತಿದ್ದಾರೆ ಎಂದು ರಾಜ್ ವ್ಯಂಗ್ಯವಾಡಿದರು.
ಪ್ರಧಾನಿಯಾಗುವ ಮುನ್ನ ಮೋದಿ ಚಿನ್ನ ವರ್ತಕರ ಸಂಹಿತೆಯನ್ನು ವಿರೋಧಿಸಿದ್ದರು. ಆದರೆ ಪ್ರಧಾನಿಯಾಗಿ ಅದನ್ನೇ ಅನುಷ್ಠಾನಕ್ಕೆ ತಂದಿದ್ದಾರೆ. ಮೋದಿ ಕೊನೆಯ ನಿರೀಕ್ಷೆ ಎಂದು ನಾನು ಹಿಂದೆ ಹೇಳಿದ್ದೆ. ಆದರೆ ಈಗ ಅವರು ವಿಶ್ವಾಸಕ್ಕೆ ದ್ರೋಹ ಎಸಗಿದ್ದಾರೆ. ನಾನು ಅವರ ವಿರುದ್ಧ ಮಾತನಾಡುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಪ್ರಧಾನಿಯಾದ ಬಳಿಕ ಮೋದಿ ಬದಲಾಗಿದ್ದಾರೆ. ಅವರು ಪವಾಡ ಮಾಡುವ ಭರವಸೆ ನೀಡಿದ್ದರು. ಅದಿಕಾರಕ್ಕೆ ಬಂದ 100 ದಿನಗಳಲ್ಲಿ ಬದಲಾವಣೆ ತರುವುದಾಗಿ ಹೇಳಿದ್ದರು. ಆ ಪವಾಡಗಳು ಎಲ್ಲಿ ಹೋದವು ಎಂದು ಖಾರವಾಗಿ ಪ್ರಶ್ನಿಸಿದರು.
ಇದೀಗ ರಾಷ್ಟ್ರೀಯತೆಯಂಥ ವಿಚಾರಕ್ಕೆ ಆರೆಸ್ಸೆಸ್ ನೆರವು ಪಡೆಯುತ್ತಿದ್ದೀರಿ. ಆರೆಸ್ಸೆಸ್ ರಾಷ್ಟ್ರೀಯತೆಯ ಪ್ರಮಾಣಪತ್ರ ನೀಡುತ್ತದೆಯೇ ಎಂದು ಕೇಳಿದರು. ರಾಮ ದೇವಾಲಯ ವಿಚಾರ ನ್ಯಾಯಾಲಯದಲ್ಲಿದೆ ಎನ್ನುತ್ತಾರೆ. ಅದೇ ನ್ಯಾಯಾಲಯ ಅಮಿತ್ ಶಾಗೆ ಕ್ಲೀನ್ ಚಿಟ್ ನೀಡುತ್ತದೆ. ಆದರೆ ರಾಮಮಂದಿರ ವಿಚಾರದಲ್ಲಿ ಯಾಕೆ ಪರಿಹಾರ ನೀಡುವುದಿಲ್ಲ ಎಂದು ಹೇಳಿದರು.
ಅಸದುದ್ದೀನ್ ಹಾಗೂ ಅಕ್ಬರುದ್ದೀನ್ ಉವೈಸಿ ಅವರ ವಿರುದ್ಧ ಕೆಂಡಕಾರಿದ ಅವರು, ಆ ಸಹೋದರರಿಗೆ ಬಿಜೆಪಿ ಹಣ ನೀಡುತ್ತಿದೆ ಎಂದು ಆಪಾದಿಸಿದರು.







