ಕಳಂಕಿತ ಬಿಜೆಪಿ ರಾಜ್ಯಾಧ್ಯಕ್ಷರು ಕಾಂಗ್ರೆಸ್ ಟೀಕೆ

ಹೊಸದಿಲ್ಲಿ,ಎ.9: ಕರ್ನಾಟಕ ಹಾಗೂ ಉತ್ತರಪ್ರದೇಶಗಳಲ್ಲಿ ಬಿಜೆಪಿಯು ತನ್ನ ರಾಜ್ಯಾಧ್ಯಕ್ಷರಾಗಿ ಕಳಂಕಿತ ನಾಯಕರನ್ನು ಆಯ್ಕೆ ಮಾಡಿದೆಯೆಂದು ಕಾಂಗ್ರೆಸ್ ಶನಿವಾರ ಟೀಕಿಸಿದೆ. ರಾಜಕೀಯದಲ್ಲಿ ಪ್ರಾಮಾಣಿಕತೆಯ ಭರವಸೆ ನೀಡಿದ್ದ ಕೇಂದ್ರದ ಆಡಳಿತಾರೂಢ ಪಕ್ಷದ ಪೊಳ್ಳುತನ ಬಯಲಾಗಿದೆ ಎಂದು ಅದು ಹೇಳಿದೆ.
ಕಾಂಗ್ರೆಸ್ ವಕ್ತಾರ ಮನೀಷ್ ತಿವಾರಿ ಹೊಸದಿಲ್ಲಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತಾ, ‘‘ಪ್ರಧಾನಿಯವರು ಪಾರದರ್ಶಕತೆಯ ಬಗ್ಗೆ ಮಾತನಾಡಿದಾಗ, ಬಿಜೆಪಿಯು ಅದಕ್ಕೆ ಧ್ವನಿಗೂಡಿಸುತ್ತದೆ. ಆದರೆ ಪಕ್ಷದ ರಾಜ್ಯ ಘಟಕಗಳಿಗೆ ಅದು ಕಳಂಕಿತರೆಂಬ ಆರೋಪ ಎದುರಿಸುತ್ತಿರುವ ಅಭ್ಯರ್ಥಿಗಳನ್ನೇ ನೇಮಕಗೊಳಿಸುತ್ತಿದೆ’’ ಎಂದು ಟೀಕಿಸಿದರು. ಪರಿಶುದ್ಧ ರಾಜಕೀಯದ ಬಗ್ಗೆ ಮಾತನಾಡುವ ಬಿಜೆಪಿ ನಾಯಕರು ಭ್ರಷ್ಟಾಚಾರದ ಆರೋಪದಲ್ಲಿ ಜೈಲು ವಾಸ ಅನುಭವಿಸಿದ ಯಡಿ ಯೂರಪ್ಪನವರನ್ನು ಪಕ್ಷದ ಕರ್ನಾಟಕ ಘಟಕದ ಅಧ್ಯಕ್ಷರನ್ನಾಗಿ ನೇಮಿಸಿದ್ದಾರೆಂದು ಅವರು ಆಪಾದಿಸಿದರು.
ಉತ್ತರಪ್ರದೇಶ ಬಿಜೆಪಿ ಘಟಕದ ಅಧ್ಯಕ್ಷರಾಗಿ ನೇಮಿಸಲ್ಪಟ್ಟಿರುವ ಕೇಶವ್ ಪ್ರಸಾದ್ ವೌರ್ಯ ವಿರುದ್ಧ ಕೊಲೆ ಸೇರಿದಂತೆ ಹತ್ತು ಪ್ರಕರಣಗಳು ದಾಖಲಾಗಿವೆ. ಇದು ಶುದ್ಧ ರಾಜಕೀಯವನ್ನು ಪ್ರತಿಫಲಿಸುತ್ತದೆಯೇ ಎಂದು ಮನೀಷ್ ತಿವಾರಿ ಪ್ರಶ್ನಿಸಿದರು. ಮಾರಿಷಸ್ ಮೂಲದ ಬ್ಯಾಂಕ್‌ಗೆ ಸಾಲ ಮರುಪಾವತಿಸದೆ ಇದ್ದುದಕ್ಕಾಗಿ ಹೈದರಾಬಾದ್‌ನ ಸ್ಥಳೀಯ ನ್ಯಾಯಾಲಯದಿಂದ ಜಾಮೀನುರಹಿತ ವಾರಂಟ್ ಜಾರಿಗೊಳಿಸಲ್ಪಟ್ಟಿರುವ ಕೇಂದ್ರ ಸಚಿವ ವೈ.ಎಸ್.ಚೌಧುರಿ ಅವರನ್ನು ಸಂಪುಟದಿಂದ ಉಚ್ಚಾಟಿಸಬೇಕೆಂದು ಮನೀಷ್ ಆಗ್ರಹಿಸಿದರು.







