ಮತ್ತೆ ನುಣುಚಿಕೊಂಡ ಮಲ್ಯ; ಮೇವರೆಗೆ ಕಾಲಾವಕಾಶ ಕೋರಿಕೆ

ಹೊಸದಿಲ್ಲಿ, ಎ.9: ಮದ್ಯದ ದೊರೆ ವಿಜಯ ಮಲ್ಯ ಶನಿವಾರ ಕೂಡಾ ಕಾನೂನು ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗಲು ವಿಫಲರಾದರು. 900 ಕೋಟಿ ರೂಪಾಯಿ ಐಡಿಬಿಐ ಸಾಲ ವಂಚನೆ ಪ್ರಕರಣದ ವಿಚಾರಣೆಗೆ ಹಾಜರಾಗಲು ಮೇ ವರೆಗೆ ಕಾಲಾವಕಾಶ ನೀಡುವಂತೆ ಕೋರಿದ್ದಾರೆ.
ಪ್ರಕರಣದ ತನಿಖೆ ನಡೆಸುತ್ತಿರುವ ಮುಂಬೈ ಅಧಿಕಾರಿಗೆ ಈ ಸಂಬಂಧ ಮಾಹಿತಿ ನೀಡಿರುವ ಮಲ್ಯ, ಅನ್ಯಕಾರ್ಯದ ಕಾರಣದಿಂದ ವೈಯಕ್ತಿಕವಾಗಿ ವಿಚಾರಣೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ಕಾರಣ ನೀಡಿದ್ದಾರೆ.
ಸುಪ್ರೀಂಕೋರ್ಟ್‌ನಲ್ಲಿ ನಡೆಯುತ್ತಿರುವ ಪ್ರಕರಣದ ಸಂಬಂಧ ಈ ಸ್ಪಷ್ಟನೆ ನೀಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಪ್ರಕರಣದ ಬಗ್ಗೆ ಮುಂದುವರಿಯಲು ಅನುಕೂಲವಾಗುವಂತೆ ತಮ್ಮ ಕಾನೂನು ತಂಡ ಸಹಕಾರ ನೀಡುತ್ತದೆ ಎಂದು ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಮುಂದೆ ಏನು ಕ್ರಮ ಕೈಗೊಳ್ಳಲಾಗುತ್ತದೆ ಎಂಬ ಬಗ್ಗೆ ತಕ್ಷಣಕ್ಕೆ ಮಾಹಿತಿ ನೀಡಲು ಅಧಿಕಾರಿಗಳು ನಿರಾಕರಿಸಿದ್ದಾರೆ. ಇದೀಗ ಮೇ ತಿಂಗಳ ವರೆಗೆ ಕಾಲಾವಕಾಶ ಕೋರಿದ್ದಾರೆ. ಆದರೆ ಕಳೆದ ವಾರ ತನಿಖಾಧಿಕಾರಿಗೆ ಮಾಡಿಕೊಂಡಿದ್ದ ಮನವಿಯನ್ನು ತಿರಸ್ಕರಿಸಲಾಗಿತ್ತು.
ಮುಂದಿನ ಕ್ರಮದ ಬಗ್ಗೆ ಶೀಘ್ರವೇ ನಿರ್ಧರಿಸಲಾಗುತ್ತದೆ ಎಂದು ಮೂಲಗಳು ಹೇಳಿವೆ. ಮಲ್ಯ ಮಾರ್ಚ್ 18 ಹಾಗೂ ಏಪ್ರಿಲ್ 2ರಂದು ಹಾಜರಾಗುವಂತೆ ನೀಡಿದ್ದ ನೋಟಿಸ್‌ಗೆ ಕಾಲಾವಕಾಶ ಕೋರಿದ್ದ ಹಿನ್ನೆಲೆಯಲ್ಲಿ ಏಪ್ರಿಲ್ 9ರಂದು ಹಾಜರಾಗುವಂತೆ ಮತ್ತೆ ನೋಟಿಸ್ ನೀಡಲಾಗಿತ್ತು. ಇದೀಗ ಮೂರು ಬಾರಿ ಗೈರುಹಾಜರಾಗಿರುವುದರಿಂದ ಮುಂದಿನ ಕ್ರಮ ಕುತೂಹಲ ಹುಟ್ಟಿಸಿದೆ. ಪಿಎಂಎಲ್‌ಎ ಕಾಯ್ದೆ ಅನ್ವಯ ಗರಿಷ್ಠ ಗೈರು ಹಾಜರಾಗಬಹುದಾದ ಹಂತವನ್ನು ಇದೀಗ ಉಲ್ಲಂಘಿಸಿದಂತಾಗಿದೆ.







