ಕೇಜ್ರಿವಾಲ್ ಮೇಲೆ ಶೂ ಎಸೆದ ಯುವಕ

ಹೊಸದಿಲ್ಲಿ, ಎ.9: ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮೇಲೆ ಸುದ್ದಿಗೋಷ್ಠಿಯೊಂದರಲ್ಲಿ ಯುವಕನೊಬ್ಬ ಶೂ ಎಸೆದ ಘಟನೆ ಶನಿವಾರ ಹೊಸದಿಲ್ಲಿಯಲ್ಲಿ ನಡೆದಿದೆ. ಈ ದುಷ್ಕೃತ್ಯವನ್ನೆಸಗಿದ ಯುವಕನನ್ನು ಆಮ್ ಆದ್ಮಿ ಪಕ್ಷದಿಂದ ಬೇರ್ಪಟ್ಟ ಗುಂಪಿನ ಕಾರ್ಯಕರ್ತ ವೇದ್‌ಪ್ರಕಾಶ್ ಎಂದು ಗುರುತಿಸಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಕೇಜ್ರಿವಾಲ್ ಸಮ- ಬೆಸ ವಾಹನ ಸಂಚಾರ ನಿಯಮದ ಬಗ್ಗೆ ಮಾತನಾಡುತ್ತಿದ್ದಾಗ, ಯುವಕನು ಮಧ್ಯಪ್ರವೇಶಿಸಿ, ಸಿಎನ್‌ಜಿ ಸ್ಟಿಕ್ಕರ್ ಹಗರಣಕ್ಕೆ ಸಂಬಂಧಿಸಿದ ಕುಟುಕು ಕಾರ್ಯಾಚರಣೆಯ ಬಗ್ಗೆ ಅವರಲ್ಲಿ ಪ್ರಶ್ನಿಸಿದ್ದನು. ಬಳಿಕ ಅವರ ಉತ್ತರಕ್ಕೆ ಕಾಯದೆ ಆತ ತನ್ನ ಶೂ ತೆಗೆದು, ಕೇಜ್ರಿವಾಲ್ ಅವರ ಮೇಲೆ ಎಸೆದನೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಆದರೆ ಶೂ ಗುರಿತಪ್ಪಿ ಮುಖ್ಯಮಂತ್ರಿಗೆ ತಾಗದೆ ಮೇಜಿನ ಮೇಲೆ ಬಿದ್ದಿತು. ಕೂಡಲೇ ದಾಳಿಕೋರ ಯುವಕನನ್ನು ಭದ್ರತಾ ಅಧಿಕಾರಿಗಳು ಹಿಡಿದು ಹೊರಗೆ ಕೊಂಡೊಯ್ದರು. ಪೊಲೀಸರು ಈಗ ಆತನನ್ನು ಪ್ರಶ್ನಿಸುತ್ತಿದ್ದಾರೆ. ಹಲ್ಲೆಗೆ ಯತ್ನಿಸಿದ ಯುವಕನು ಎಎಪಿಯ ಬಂಡಾಯ ಗುಂಪಾದ ಆಮ್ ಆದ್ಮಿ ಸೇನೆಯ ಕಾರ್ಯಕರ್ತನೆನ್ನಲಾಗಿದೆ.
ಘಟನೆಯ ಆನಂತರವೂ ಕೇಜ್ರಿವಾಲ್ ಹಾಗೂ ದಿಲ್ಲಿ ಸಾರಿಗೆ ಸಚಿವ ಗೋಪಾಲ್ ರಾಯ್ ಪತ್ರಿಕಾಗೋಷ್ಠಿಯನ್ನು ಮುಂದುವರಿಸಿದರು. ಕೇಜ್ರಿವಾಲ್ ವಿರುದ್ಧದ ದಾಳಿಯನ್ನು ಬಿಜೆಪಿ, ಕಾಂಗ್ರೆಸ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು ತೀವ್ರವಾಗಿ ಖಂಡಿಸಿವೆ. ಈ ದುಷ್ಕೃತ್ಯಕ್ಕೆ ಕಾರಣ ರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವು ಆಗ್ರಹಿಸಿವೆ.
‘‘ನಮ್ಮ ರಾಜಕೀಯ ಭಿನ್ನಾಭಿಪ್ರಾಯಗಳ ಹೊರತಾಗಿಯೂ ಇಂತಹ ಘಟನೆಗಳು ಮರುಕಳಿಸದಿರಲು ಹಾಗೂ ಚುನಾಯಿತ ಹುದ್ದೆಯ ಘನತೆ ಗೌರವವನ್ನು ಕಾಯ್ದುಕೊಳ್ಳುವುದನ್ನು ನಾವು ಖಾತರಿಪಡಿಸಬೇಕಾಗಿದೆ’’ ಎಂದು ಬಿಜೆಪಿ ವಕ್ತಾರ ನಳಿನ್ ಕೊಹ್ಲಿ ತಿಳಿಸಿದ್ದಾರೆ.
ಕಾಂಗ್ರೆಸ್ ವಕ್ತಾರ ಪಿ.ಸಿ.ಚಾಕೋ ಕೂಡಾ ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಎಎಪಿಯ ಆಂತರಿಕ ಸಮಸ್ಯೆಗಳು ಪದೇ ಪದೇ ಯಾಕೆ ಬಹಿರಂಗವಾಗಿ ಪ್ರಕಟಗೊಳ್ಳುತ್ತವೆಯೆಂದವರು ಪ್ರಶ್ನಿಸಿದ್ದಾರೆ.
ಸಮ-ಬೆಸ ಸಂಖ್ಯೆಯ ವಾಹನ ಸಂಚಾರ ನಿಯಮದ ಯಶಸ್ಸಿನಿಂದ ಹತಾಶರಾದ ಕೆಲವು ವ್ಯಕ್ತಿಗಳು ಇಂತಹ ಕೃತ್ಯಗಳಲ್ಲಿ ತೊಡಗಿದ್ದಾರೆಂದು ದಿಲ್ಲಿ ಸಾರಿಗೆ ಸಚಿವ ಗೋಪಾಲ್‌ರಾಯ್ ಘಟನೆಯನ್ನು ಖಂಡಿಸಿದ್ದಾರೆ.
ಕೇಜ್ರಿವಾಲ್ ವಿರುದ್ಧ ದಾಳಿ ಇದು ಮೊದಲೇನಲ್ಲ!
2013ರ ನವೆಂಬರ್‌ನಲ್ಲಿ ಅಣ್ಣಾ ಹಝಾರೆಯ ಬೆಂಬಲಿಗನೊಂದು ಹೇಳಿಕೊಂಡ ವ್ಯಕ್ತಿಯೊಬ್ಬ ಪತ್ರಿಕಾಗೋಷ್ಠಿಯಲ್ಲಿ ಕೇಜ್ರಿವಾಲ್ ಮೇಲೆ ಮಸಿ ಎಸೆದಿದ್ದ. 2014ರ ಮಾರ್ಚ್‌ನಲ್ಲಿ ಕೇಜ್ರಿವಾಲ್ ವಾರಣಾಸಿಯಲ್ಲಿ ಲೋಕಸಭಾ ಚುನಾವಣಾ ಪ್ರಚಾರ ನಡೆಸುತ್ತಿದ್ದಾಗ ಅಪರಿಚಿತರ ಅವರ ಮೇಲೆ ಶಾಯಿ ಎಸೆದಿದ್ದರು. 2014ರ ದಿಲ್ಲಿ ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ ವ್ಯಕ್ತಿಯೊಬ್ಬ ಹಲ್ಲೆ ನಡೆಸಿದ್ದ. ದಿಲ್ಲಿಯ ಸುಲ್ತಾನ್‌ಪುರಿ ಪ್ರದೇಶದಲ್ಲಿ ಕೇಜ್ರಿವಾಲ್ ರೋಡ್‌ಶೋ ನಡೆಸುತ್ತಿದ್ದಾಗ ಆಟೋ ಚಾಲಕನೊಬ್ಬ ಅವರಿಗೆ ಹೂಹಾರ ಹಾಕಿದ ಬಳಿಕ, ಎರಡು ಬಾರಿ ಕೆನ್ನೆಗೆ ಥಳಿಸಿದ್ದ.







