ಎ.15ರಿಂದ ರಾಷ್ಟ್ರೀಯ ಪ್ರೊ ಕಬಡ್ಡಿ ಪಂದ್ಯಕೂಟ
ಮಂಗಳೂರು, ಎ.9: ಪಣಂಬೂರು ಕಡಲ ಕಿನಾರೆಯಲ್ಲಿ ಎ.15ರಿಂದ 17ರವರೆಗೆ ಸಂಜೆ 4:30ರಿಂದ ರಾತ್ರಿ 11 ಗಂಟೆಯವರೆಗೆ ಆಹ್ವಾನಿತ ತಂಡಗಳ ರಾಷ್ಟ್ರೀಯ ಪ್ರೊ ಕಬಡ್ಡಿ ಪಂದ್ಯಕೂಟ ನಡೆಯಲಿದೆೆ ಎಂದು ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ರಾಕೇಶ ಮಲ್ಲಿ ಹೇಳಿದರು.
ಅವರು ಇಂದು ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿ, ಮುಂಬೈಯ ಕೇಂದ್ರೀಯ ರೈಲ್ವೆ, ಭಾರತ್ ಪೆಟ್ರೋಲಿಯಂ, ದಿಲ್ಲಿಯ ಒಎನ್‌ಜಿಸಿ, ದೇನಾ ಬ್ಯಾಂಕ್, ಏರ್ ಇಂಡಿಯಾ ಮುಂಬೈ, ವಿಜಯಾ ಬ್ಯಾಂಕ್, ಮಹಾರಾಷ್ಟ್ರ ಪೊಲೀಸ್, ಇಂಡಿಯನ್ ಆರ್ಮಿ, ಐಬಿಎಂ, ಹೈ ಟೆಕ್ ಚೆನ್ನೈ, ಆರ್‌ಡಬ್ಲ್ಯುಎ್, ಎಚ್‌ಎಎಲ್, ಆಳ್ವಾಸ್ ಮೂಡುಬಿದಿರೆ, ಸ್ಪೋರ್ಟಿಂಗ್ ಉಳ್ಳಾಲ, ವರುಣ್ ಮಂಗಳೂರು ಮತ್ತು ಉಡುಪಿಯ ತಂಡ ಪಂದ್ಯಕೂಟದಲ್ಲಿ ಭಾಗವಹಿಸಲಿವೆ ಎಂದು ಹೇಳಿದರು.
ಪ್ರಥಮ ಬಹುಮಾನ 2 ಲಕ್ಷ ರೂ., ದ್ವಿತೀಯ ಸ್ಥಾನ ಪಡೆದ ತಂಡಕ್ಕೆ 1.25 ಲಕ್ಷ ರೂ. ಮತ್ತು ಸೆಮಿೈನಲ್‌ನಲ್ಲಿ ಸೋತ ತಂಡಗಳಿಗೆ ತಲಾ 75 ಸಾವಿರ ರೂ. ಬಹುಮಾನ ನೀಡಲಾಗುವುದು. ಮೂರು ವೈಯಕ್ತಿಕ ಬಹುಮಾನ ನೀಡಲಾಗುವುದು. ಆಟಗಾರರಿಗೆ ವಸತಿ, ಆಹಾರ ಉಚಿತ ವಾಗಿರುತ್ತದೆ. ಪಂದ್ಯಕೂಟದಲ್ಲಿ 20ರಿಂದ 24 ತಂಡಗಳು ಭಾಗವಹಿಸಲಿವೆ. ರಾಷ್ಟ್ರೀಯ ಪ್ರೊ ಕಬಡ್ಡಿ ತಂಡಗಳ ಬಹುತೇಕ ಆಟಗಾರರು ಪಂದ್ಯಕೂಟದಲ್ಲಿ ಪಾಲ್ಗೊಳ್ಳುವರು ಎಂದು ಹೇಳಿದರು. ಎ.13ರಂದು ಪಂದ್ಯಕೂಟದಲ್ಲಿ ಭಾಗವಹಿಸಲಿರುವ ಅಂತಿಮ ತಂಡಗಳ ವಿವರಗಳನ್ನು ಪ್ರಕಟಿಸಲಾಗುವುದು. ಉಚಿತ ಪ್ರವೇಶವಿದೆ. ಮಹಿಳೆಯರಿಗೆ ಪ್ರತ್ಯೇಕ ಗ್ಯಾಲರಿಯ ವ್ಯವಸ್ಥೆ ಇದೆ. ಲೀಗ್ ಮತ್ತು ನಾಕೌಟ್ ಮಾದರಿಯಲ್ಲಿ ಪಂದ್ಯಾವಳಿ ನಡೆಯಲಿದೆ.
ಜಯ ಕರ್ನಾಟಕ ಸಂಘಟನೆಯ ಸಹಕಾರದೊಂದಿಗೆ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಪಂದ್ಯಕೂಟವನ್ನು ಹಮ್ಮಿಕೊಂಡಿದೆ. ರಾಷ್ಟ್ರೀಯ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಅಧಿಕಾರಿಗಳನ್ನು ನಿಯೋಜಿಸುತ್ತಿದೆ ಎಂದರು.
ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರ ಜಯ ಶೆಟ್ಟಿ, ಮನೋಹರ ಶೆಟ್ಟಿ, ದ.ಕ.ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ಮೋನಪ್ಪ ಕುಲಾಲ್, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಪೂಜಾರಿ, ಸಲಹೆಗಾರ ಪ್ರೇಮನಾಥ ಉಳ್ಳಾಲ ಮೊದಲಾದವರು ಉಪಸ್ಥಿತರಿದ್ದರು.







