ತಾರಕಕ್ಕೇರಿದ ಪಿಯು ಉಪನ್ಯಾಸಕರ ಪ್ರತಿಭಟನೆ: 13ರಿಂದ ಉಪವಾಸ

ಪಿಯು ವೌಲ್ಯಮಾಪನ ಮತ್ತಷ್ಟು ಕಗ್ಗಂಟು
ಬೆಂಗಳೂರು, ಎ.9: ಸರಕಾರ ದ್ವಿತೀಯ ಪಿಯುಸಿ ಉಪನ್ಯಾಸಕರ ಹೋರಾಟವನ್ನು ನಿರ್ಲಕ್ಷಿಸುತ್ತಿದೆ. ಹೀಗಾಗಿ ಎ.13ರಿಂದ ಆಮರಣಾಂತ ಉಪವಾಸ ಸತ್ಯಾಗ್ರಹ ಮಾಡಲು ನಿರ್ಧರಿಸಲಾಗಿದೆ ಎಂದು ಉಪನ್ಯಾಸಕರ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ತಿಳಿಸಿದ್ದಾರೆ.
ಕುಮಾರ ನಾಯಕ್ ವರದಿ ಜಾರಿಗೆ ಒತ್ತಾಯಿಸಿ ನಗರದ ಫ್ರೀಡಂ ಪಾರ್ಕ್‌ನಲ್ಲಿ ಹಮ್ಮಿಕೊಂಡಿರುವ ವೌಲ್ಯಮಾಪನ ಬಹಿಷ್ಕಾರ ಕುರಿತ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ದ್ವಿತೀಯ ಪಿಯುಸಿ ಪರೀಕ್ಷೆಗಳು ಎ.12ಕ್ಕೆ ಮುಗಿಯುತ್ತವೆ. ಹೀಗಾಗಿ ಪರೀಕ್ಷಾ ಕೊಠಡಿಗಳ ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ಎ.13ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ಗೆ ಬಂದು ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ನಾಡಿನಾದ್ಯಂತ ಯುಗಾದಿ ಹಬ್ಬದ ಸಂಭ್ರಮವಿದ್ದರೆ, ಪಿಯು ಉಪನ್ಯಾಸಕರು ಸಂಕಟ ಹಾಗೂ ಕಹಿಯನ್ನು ಅನುಭವಿಸುತ್ತಿದ್ದಾರೆ. ಸರಕಾರ ನಮಗೆ ಯುಗಾದಿ ಪ್ರಯುಕ್ತ ಸಿಹಿ ಸುದ್ದಿ ಕೊಡಲಿದೆ, ಆ ಮೂಲಕ ಯುಗಾದಿ ಹಬ್ಬವನ್ನು ಸಂಭ್ರಮದಿಂದ ಆಚರಿಸ ಬಹುದೆಂದು ನಿರೀಕ್ಷಿಸಿದ್ದೆವು. ಆದರೆ, ಸರಕಾರ ನಮ್ಮ ಪಾಲಿಗೆ ಕಹಿಯನ್ನೇ ನೀಡಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲಿ ಪಿಯು ಉಪನ್ಯಾಸಕರು ಹಮ್ಮಿಕೊಂಡಿರುವ ಮುಷ್ಕರವನ್ನು ವಾಪಸ್ ಪಡೆಯದಿದ್ದರೆ ವೌಲ್ಯ ಮಾಪನಕ್ಕೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲಾಗುವುದು ಎಂದು ಸರಕಾರ ಬೆದರಿಕೆ ಹಾಕುತ್ತಿದೆ. ಇಂತಹ ಬೆದರಿಕೆಗಳನ್ನು ಹಲವು ವರ್ಷಗಳಿಂದ ಕೇಳುತ್ತಾ ಬರುತ್ತಿದ್ದೇವೆ. ಪರ್ಯಾಯ ವ್ಯವಸ್ಥೆ ಮಾಡಿಕೊಂಡರೆ ಮಾಡಿಕೊಳ್ಳಲಿ ಎಂದು ಅವರು ಸವಾಲು ಹಾಕಿದರು. ಎ.13ರಿಂದ ಕೈಗೊಳ್ಳುವ ಆಮರಣಾಂತ ಉಪವಾಸ ಬೇಡಿಕೆ ಈಡೇರುವವರೆಗೆ ಮುಂದುವರಿಯುತ್ತದೆ. ಉಪವಾಸದ ವೇಳೆ ಶಿಕ್ಷಕರ ಆರೋಗ್ಯದಲ್ಲಿ ವ್ಯತ್ಯಾಸವಾದರೆ ಅದಕ್ಕೆ ಸರಕಾರವೇ ಹೊಣೆಯಾಗಿರುತ್ತದೆ.
ನಮ್ಮ ಬೇಡಿಕೆಗಾಗಿ ಕಠಿಣ ಸವಾಲುಗಳನ್ನು ಎದುರಿಸಲು ಸಿದ್ಧರಿದ್ದೇವೆ ಎಂದು ಅವರು ಎಚ್ಚರಿಕೆ ನೀಡಿದರು.
ಹೋರಾಟಕ್ಕೆ ವಕೀಲರ ಬೆಂಬಲ: 8 ದಿನಗಳಿಂದ ಫ್ರೀಡಂ ಪಾರ್ಕ್‌ನಲ್ಲಿ ನಡೆಯುತ್ತಿರುವ ಉಪನ್ಯಾಸಕರ ಹೋರಾಟಕ್ಕೆ ಹಲವು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ವಕೀಲರ ಸಂಘದ ಅಧ್ಯಕ್ಷರು ಇಂದು ಉಪವಾಸ ನಿರತ ಉಪನ್ಯಾಸಕರ ಧರಣಿಯ ಸ್ಥಳಕ್ಕೆ ಭೇಟಿ ನೀಡಿ, ನ್ಯಾಯಾಧೀಶರು ಒಂದು ತೀರ್ಪು ನೀಡಿದರೆ ಆ ತಕ್ಷಣವೇ ಅವರ ಆದೇಶವನ್ನು ಪಾಲಿಸುವ ಈ ಸರಕಾರ ಉಪನ್ಯಾಸಕರ ಬೇಡಿಕೆಗೆ ಯಾಕೆ ಸ್ಪಂದಿಸುತ್ತಿಲ್ಲ, ಈ ಮಟ್ಟದ ನಿರ್ಲಕ್ಷವೇಕೆ ಎಂದು ಪ್ರಶ್ನಿಸಿದರು.







