ದ್ವೀಪದಲ್ಲಿ ಸಿಕ್ಕಿಹಾಕಿಕೊಂಡವರನ್ನು ವಿಮಾನ ಪತ್ತೆಮಾಡಿದ್ದು ಹೇಗೆ ?

ಸಹಾಯ ಯಾಚಿಸಿದ ಮರಳು ಬರಹಕ್ಕೆ ಸ್ಪಂದನೆ * ದ್ವೀಪದಲ್ಲಿ ಸಿಕ್ಕಿಹಾಕಿಕೊಂಡ ಮೂವರ ರಕ್ಷಣೆ
ಅವರಿಗೆ ಈಜುವುದು ಬಿಟ್ಟರೆ ಬೇರೆ ದಾರಿಯೇ ಇರಲಿಲ್ಲ. ಸೋಮವಾರ ರಾತ್ರಿ ಪಯಣ ಹೊರಟ ಅವರ 19 ಅಡಿ ಉದ್ದದ ಕಿರುನೌಕೆಗೆ ಕೆಲವೇ ಗಂಟೆಗಳಲ್ಲಿ ದೈತ್ಯ ಅಲೆ ಅಪ್ಪಳಿಸಿ, ದೋಣಿ ಮಗುಚಿತು. ಅಪಾಯದಿಂದ ಮುಕ್ತಿ ಪಡೆಯಲು ಕರಾಳ ರಾತ್ರಿಯಲ್ಲಿ ಎರಡು ಮೈಲಿ ಈಜಿದರು. ಪಪೂವಾ ನ್ಯೂಗುನಿಯಾದಿಂದ ನೂರಾರು ಮೈಲಿ ಉತ್ತರಕ್ಕಿರುವ ಪುಟ್ಟ ಪೆಸಿಫಿಕ್ ದ್ವೀಪ ಫನಡಿಕ್ ಸೇರಿದರು.
ಸಹಾಯ ನಿರೀಕ್ಷಿಸಿ ನಿರ್ಜನ ದ್ವೀಪದಲ್ಲಿ ಮೂರು ದಿನ ಕಳೆದರು. ಕೊನೆಗೂ ಅವರ ಜಾಣ್ಮೆ ನೆರವಿಗೆ ಬಂತು. ತಾಳೆ ಎಲೆಯ ಗರಿಗಳನ್ನು ಹೆಲ್ಪ್ ಎಂಬ ರೀತಿಯಲ್ಲಿ ಜೋಡಿಸಿದ್ದ ಪಕ್ಕದಲ್ಲಿ ಯಾರೋ ಜೀವರಕ್ಷಕ ಜಾಕೆಟ್ ಬೀಸುವುದನ್ನು ಕಾವಲು ಕಾಯುತ್ತಿದ್ದ ನೌಕಾಪಡೆ ವಿಮಾನ ಪತ್ತೆ ಮಾಡಿತು.
ಬಳಿಕ ಅವರ ಕುಟುಂಬಗಳನ್ನು ಪತ್ತೆ ಮಾಡಿ ಚಿಕ್ಕ ನಾವೆಗಳ ಮೂಲಕ ಅವರು ಹೊರಟಿದ್ದ ಸ್ವಸ್ಥಾನಕ್ಕೆ ತಲುಪಿಸಲಾಯಿತು. ನೌಕಾಪಡೆಯ ಪರಿಹಾರ ಕಾರ್ಯಾಚರಣೆ ಸಿಬ್ಬಂದಿಯ ಸಂಘಟಿತ ಶ್ರಮದಿಂದ ಎಲ್ಲರೂ ಅಪಾಯದಿಂದ ಪಾರಾದರು.
ಮಂಗಳವಾರ ಮಧ್ಯಾಹ್ನದಿಂದ ಅವರು ನಾಪತ್ತೆಯಾದ್ದು ನೌಕಾಪಡೆ ಗಮನಕ್ಕೆ ಬಂದಿತ್ತು. ತಕ್ಷಣ ಹುಡುಕಾಟ ಆರಂಭಿಸಿದ್ದರು. ಹದಿನೇಳು ಗಂಟೆಗಳ ಕಾಲ ಎರಡು ಹಡಗುಗಳಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಗುರುವಾರ ಮುಂಜಾನೆ ವೇಳೆಗೆ ವಿಮಾನ ಅವರನ್ನು ಪತ್ತೆ ಮಾಡಿತು.







