ಝಹಾ ಹದೀದ್ ಕಣ್ಣಲ್ಲಿ ಅರಳಿದ ಶಿಲ್ಪಗಳು...

ವಿಶ್ವದ ಅತಿ ವಿಖ್ಯಾತ, ಪ್ರಿಟ್ಝಕರ್ ಪ್ರಶಸ್ತಿ ವಿಜೇತೆ, ಇರಾಕಿ-ಬ್ರಿಟಿಷ್ ವಾಸ್ತು ಶಾಸ್ತ್ರಜ್ಞೆ ಝಹಾ ಹದೀದ್ ಇತ್ತೀಚೆಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 65 ವರ್ಷ ವಯಸ್ಸಾಗಿತ್ತು.
1950ರಲ್ಲಿ ಬಗ್ದಾದ್‌ನಲ್ಲಿ ಜನಿಸಿದ್ದ ಹದೀದ್, ನಗರದಲ್ಲೇ ಬೆಳೆದಿದ್ದರು. ಅವರು ಕಾಲೇಜು ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋದರು. ಬಳಿಕ ಲಂಡನ್‌ನಲ್ಲಿ ತನ್ನ ಶಿಲ್ಪಕಲಾ ಜೀವನವನ್ನು ಆರಂಭಿಸಿದ್ದರು. ನಿಖರವಾದ ಉಬ್ಬು-ತಗ್ಗುಗಳಿಂದೊಡಗೂಡಿದ ಅವರ ನಿರ್ಮಾಣಗಳನ್ನು ಬಗ್ದಾದ್‌ನಿಂದ ಗುವಾಂಝ್ ಹಾಗೂ ಇನ್ಸ್‌ಬ್ರಕ್‌ವರೆಗೆ ಜಗತ್ತಿನಾದ್ಯಂತ ಕಾಣಬಹುದು.
1979ರ ವೇಳೆಗೆ ಹದೀದ್, ‘ಝಹಾ ಹದೀದ್ ಆರ್ಕಿಟೆಕ್ಟ್ಸ್’ ಎಂಬ ಹೆಸರಿನಲ್ಲಿ ತನ್ನದೇ ಆದ ಶಿಲ್ಪಕಲಾ ಸಂಸ್ಥೆಯನ್ನು ಸ್ಥಾಪಿಸಿದ್ದರು. ಹಾಂಕಾಂಗ್‌ನ ‘ದಿ ಪೀಕ್’(1983), ಬರ್ಲಿನ್‌ನ ‘ಕುರ್ಫಸೈಂಡಂ’(1986) ಹಾಗೂ ವೇಲ್ಸ್ ನ ‘ಕಾರ್ಡಿಫ್ ಬೇ ಒಪೆರಾ ಹೌಸ್’(1994) ಸಹಿತ ಶಂಕುಸ್ಥಾಪನೆಗಳೊಂದಿಗೆ ಅವರ ಖ್ಯಾತಿಯು ವಿಶ್ವಾದ್ಯಂತ ಹಬ್ಬಿತ್ತು.
ಹದೀದ್ ಗೌರವಾನ್ವಿತ ಪ್ರಿಝ್ಕರ್ ಪ್ರಶಸ್ತಿ ಪಡೆದ ಮೊತ್ತ ಮೊದಲ ವಾಸ್ತು ಶಾಸ್ತ್ರಜ್ಞೆಯಾಗಿದ್ದಾರೆ. ಅವರು, 2016ರಲ್ಲಿ ರಾಯಲ್ ಇನ್‌ಸ್ಟಿಟ್ಯೂಟ್ ಆಫ್ ಬ್ರಿಟಿಷ್ ಆರ್ಕಿಟೆಕ್ಟ್ಸ್ ಚಿನ್ನದ ಪದಕ ಪಡೆದ ಮೊದಲ ಮಹಿಳೆಯಾಗಿದ್ದಾರೆ. ಅಲ್ಲದೆ, ಅವರು ರಿಬಾ ಸ್ಟರ್ಲಿಂಗ್ ಬಹುಮಾನ ಸಹಿತ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದರು.
ಕಟ್ಟಡಗಳು ತೇಲುವಂತಿರಬೇಕು ಎನ್ನುವುದು ನನ್ನ ಬಯಕೆ; ಆದರೆ ಅವು ತೇಲಲಾರವು ಎನ್ನುವುದು ನನಗೆ ಮನವರಿಕೆಯಾಗಿದೆ.
-ಝಹಾ ಹದೀದ್
ವಾಸ್ತು ಶಿಲ್ಪದ ಮೇರು ಕನಸು
ಝಹಾ ಹದೀದ್
ಇರಾಕ್ ಮೂಲದ ಬ್ರಿಟಿಷ್ ವಾಸ್ತುಶಿಲ್ಪಿ ಝಹಾ ಹದೀದ್ ಅವರ ಅತ್ಯಾಧುನಿಕ ಹಾಗೂ ಭವಿಷ್ಯದ ವಿನ್ಯಾಸ ಪರಿಕಲ್ಪನೆಗಳಲ್ಲಿ 2012ರ ಲಂಡನ್ ಒಲಿಂಪಿಕ್ಸ್ ಜಲಕ್ರೀಡಾ ಕೇಂದ್ರವೂ ಸೇರಿದೆ. ಈ ಅಪೂರ್ವ ಪ್ರತಿಭೆಯ ವಾಸ್ಪುಶಿಲ್ಪಿ ಇನ್ನು ಬರಿಯ ನೆನಪು. 65ನೆ ವಯಸ್ಸಿನಲ್ಲಿ ಅವರು ಇತ್ತೀಚೆಗೆ ಕೊನೆಯುಸಿರೆಳೆದರು. ಆದರೆ ಆಕೆ ವಾಸ್ತುಶಿಲ್ಪ ಕ್ಷೇತ್ರದಲ್ಲಿ ಮೂಡಿಸಿದ ವಿಶಿಷ್ಟ ಛಾಪು, ಆಕರ್ಷಕ ಹಾಗೂ ಕೆಲವೊಮ್ಮೆ ವಿವಾದಾತ್ಮಕ ಕಟ್ಟಡಗಳು ವಿಶ್ವಾದ್ಯಂತ ಅಪೂರ್ವ ಪ್ರತಿಭೆಯ ವಾಸ್ತುಶಿಲ್ಪಿಯ ಸೃಜನಶೀಲತೆಗೆ ಸಾಕ್ಷಿಗಳಾಗಿ ನಿಂತಿವೆ.
ಮಿಯಾಮಿ ಆಸ್ಪತ್ರೆಯಲ್ಲಿ ಆಕೆ ಅಸುನೀಗಿದ್ದಾರೆ ಎಂದು ಅವರ ಕಂಪೆನಿ ಪ್ರಕಟಿಸಿದೆ. ಶ್ವಾಸನಾಳ ಸೋಂಕಿಗೆ ಕಳೆದ ವಾರ ಒಳಗಾಗಿದ್ದ ಹದೀದ್ ಚಿಕಿತ್ಸೆ ವೇಳೆ ಹೃದಯಾಘಾತದಿಂದ ನಿಧನರಾದರು.
ಆಕೆಗೆ ನೆಲೆ ಒದಗಿಸಿದ್ದ ಹಾಗೂ ಆಕೆಯ ಕಾರ್ಯಚಟುವಟಿಕೆಗಳ ಕೇಂದ್ರ ಸ್ಥಾನವಾಗಿದ್ದ ಲಂಡನ್‌ನ ಮೇಯರ್ ಬೋರಿಸ್ ಜಾನ್ಸನ್, ಆಕೆ ಎಲ್ಲರಿಗೂ ಸ್ಫೂರ್ತಿಯ ಚಿಲುಮೆ. ಅವರ ಪರಂಪರೆ, ಒಲಿಂಪಿಕ್ ಪಾರ್ಕ್ ಹಾಗೂ ವಿಶ್ವಾದ್ಯಂತ ತಲೆ ಎತ್ತಿರುವ ಅತ್ಯದ್ಭುತ ಕಟ್ಟಡಗಳಲ್ಲಿ ಜೀವಂತವಾಗಿ ಉಳಿಯುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.
ಹದೀದ್ ಹುಟ್ಟಿ ಬೆಳೆದದ್ದು ಬಗ್ದಾದ್‌ನಲ್ಲಿ. ಓದಿದ್ದು ಅಮೆರಿಕದ ಬ್ಯೂರಟ್ ವಿಶ್ವವಿದ್ಯಾನಿಲಯದಲ್ಲಿ ಗಣಿತಶಾಸ್ತ್ರ. 1972ರಲ್ಲಿ ಲಂಡನ್ ವಾಸ್ತುಶಿಲ್ಪ ಸಂಘ ಸೇರಿಕೊಂಡರು. 1979ರಲ್ಲಿ ಲಂಡನ್‌ನಲ್ಲಿ ಝಹಾ ಹದೀದ್ ಆರ್ಕಿಟೆಕ್ಟ್ಸ್ ಎಂಬ ಸಂಸ್ಥೆ ಹುಟ್ಟುಹಾಕುವ ಮುನ್ನ ಡಚ್ ವಾಸುಶಿಲ್ಪ ರೆಮ್ ಕೂಲ್ಹಾಸ್‌ಗಾಗಿ ಶ್ರಮಿಸಿದ್ದರು. ಹದೀದ್ ಅವರ ಸೃಷ್ಟಿಕಾರ್ಯಕ್ಕೆ ಗಣಿತಶಾಸ್ತ್ರದ ಅಪಾರ ಜ್ಞಾನ ಬಹಳವಾಗಿ ನೆರವಾಯಿತು. ಜತೆಗೆ ಕಂಪ್ಯೂಟರ್ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಂಡು ಅತ್ಯದ್ಭುತ ಕಲ್ಪನೆಯ ಹಾಗೂ ನಿರೀಕ್ಷೆಯ ವಿನ್ಯಾಸಗಳನ್ನು ಜಗತ್ತಿಗೆ ಪರಿಚಯಿಸಿದವರು ಹದೀದ್.
ಇವರು ವಿಶ್ವಾದ್ಯಂತ ಹಲವಾರು ಅದ್ಭುತ ಕಟ್ಟಡಗಳನ್ನು ವಿನ್ಯಾಸಗೊಳಿಸಿದ್ದರೂ, ಕಾರ್ಯಕ್ಷೇತ್ರವಾದ ಬ್ರಿಟನ್‌ನಲ್ಲಿ ಮಾಡಿದ್ದು ಕಡಿಮೆಯೇ. ಜರ್ಮನಿಯ ಲೀಪ್‌ಝಿಗ್‌ನಲ್ಲಿರುವ ವಿಶಿಷ್ಟ ಬಿಎಂಡಬ್ಲ್ಯು ಘಟಕ, ಆಸ್ಟ್ರಿಯಾದ ಇನ್ಸ್‌ಬರ್ಗ್ ರೈಲು ನಿಲ್ದಾಣ, ಚೀನಾದ ಮಿನುಗುವ ಗೌಂರೆಹು ಅಪೇರಾ ಹೌಸ್, ರೋಮ್‌ನ ದೀಪಾಲಂಕೃತ ಮ್ಯಾಕ್ಸೀ ಮ್ಯೂಸಿಯಂ ಮತ್ತಿತರ ಕಟ್ಟಡಗಳು ಪ್ರಸ್ತುತ ಕಲೆ ಹಾಗೂ ವಾಸ್ತುಶಿಲ್ಪ ಕ್ಷೇತ್ರದಲ್ಲಿ ಅಮೂಲ್ಯ ಸ್ಮಾರಕಗಳೆನಿಸಿವೆ. ಅಝರ್‌ಬೈಜಾನ್‌ನ ಬಿಕು ನಗರದಲ್ಲಿರುವ ವರ್ತುಲಾಕಾರದ ಹೈದರ್ ಅಲಿಯೇವ್ ಇವರ ಸೃಜನಶೀಲತೆಗೆ ಕನ್ನಡಿಯಾಗಿದ್ದರೆ, ಕೆಲವೊಮ್ಮೆ ವಿವಾದಕ್ಕೂ ಕಾರಣವಾಗಿದೆ. ಸಿಯೋಲ್‌ನ ಡಂಗ್ಡೆಮನ್ ಡಿಸೈನ್ ಪ್ಲಾಝಾವನ್ನು ಅವರ ವಿರೋಧಿಗಳು ತುರ್ತು ಭೂಸ್ಪರ್ಶ ಮಾಡಿದ ಕೆಟ್ಟುಹೋದ ಬಾಹ್ಯಾಕಾಶ ನೌಕೆಯಂತಿದೆ ಎಂದು ಗೇಲಿ ಮಾಡಿದ್ದಿದೆ. ಕಳೆದ ವರ್ಷ ಜಪಾನ್ ಸರಕಾರ, 2020ರ ಟೋಕಿಯೊ ಒಲಿಂಪಿಕ್ಸ್ ಕ್ರೀಡಾಂಗಣ ನಿರ್ಮಾಣ ಕಾರ್ಯವನ್ನು ಅಧಿಕ ವೆಚ್ಚ ಕಾರಣಕ್ಕಾಗಿ ಕೈಬಿಟ್ಟಿತ್ತು.
ಇವರ ಅಪೂರ್ಣ ಕಾಮಗಾರಿಯ ವಿನ್ಯಾಸಗಳಲ್ಲಿ 2022ರ ಕತಾರ್ ವಿಶ್ವಕಪ್ ಫುಟ್ಬಾಲ್ ಕ್ರೀಡಾಂಗಣ ಹಾಗೂ ಬಗ್ದಾದ್‌ನ ಹೊಸ ಇರಾಕ್ ಸಂಸತ್ ಭವನ ಸೇರಿದೆ. ಹದೀದ್ ಎರಡು ಬಾರಿ ಬ್ರಿಟನ್‌ನ ಸ್ಟಿರ್‌ಲಿಂಗ್ ಪ್ರಶಸ್ತಿಗೆ ಆಯ್ಕೆಯಾಗಿದ್ದರೆ, 2004ರಲ್ಲಿ ವಾಸ್ತುಶಿಲ್ಪದ ನೊಬೆಲ್ ಎಂದೇ ಪರಿಗಣಿತವಾದ ಪ್ರಿಟ್ಝಕರ್ ಪ್ರಶಸ್ತಿಗೆ ಭಾಜನರಾಗಿದ್ದರು. ಆಧುನಿಕ ಶೈಲಿ ಮತ್ತು ಸಂಪ್ರದಾಯದ ಸವಾಲುಗಳನ್ನು ಮೆಟ್ಟಿನಿಂದ ಆಕೆಯ ಬದ್ಧತೆಯನ್ನು ಪ್ರಿಟ್ಜ್‌ಕರ್ ಪ್ರಶಸ್ತಿ ತೀರ್ಪುಗಾರರು ಮುಕ್ತಕಂಠದಿಂದ ಶ್ಲಾಘಿಸಿದ್ದರು. 2012ರ ಒಲಿಂಪಿಕ್ಸ್‌ಗಾಗಿ ಇವರು ನಿರ್ಮಿಸಿದ ಲಂಡನ್ ಆಕ್ವೆಟಿಕ್ಸ್ ಸೆಂಟರ್ ಇನ್ನೊಂದು ಪ್ರಮುಖ ಆಕರ್ಷಣೆ. ಇತರ ಎಲ್ಲ ವಾಸ್ತುಶಿಲ್ಪಿಗಳಂತೆ ಹದೀದ್ ಕೂಡಾ, ತಮ್ಮ ಮಹತ್ವಾಕಾಂಕ್ಷಿ ವಿನ್ಯಾಸಗಳನ್ನು ನಿರ್ಮಿಸುವ ವೇಳೆ ಕಷ್ಟಕ್ಕೆ ಸಿಲುಕಿ ಹಾಕಿಕೊಂಡ ನಿದರ್ಶನ ಇದೆ. ತಮ್ಮ ಆರಂಭಿಕ ಕೆಲ ಯೋಜನೆಗಳು ಇಂಜಿನಿಯರಿಂಗ್ ಕ್ಷೇತ್ರಕ್ಕೆ ಸವಾಲಾಗಿದ್ದವು ಎಂದು ಆಕೆ ನೆನಪಿಸಿಕೊಂಡಿದ್ದರು.
ಕಟ್ಟಡಗಳು ತೇಲುವಂತಿರಬೇಕು ಎನ್ನುವುದು ನನ್ನ ಬಯಕೆ; ಆದರೆ ಅವು ತೇಲಲಾರವು ಎನ್ನುವುದು ನನಗೆ ಮನವರಿಕೆಯಾಗಿದೆ ಎಂದು ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ಕಳೆದ ತಿಂಗಳು ಹೇಳಿದ್ದರು.
ಆಕೆಯದ್ದು ಮೊಂಡು ಹಾಗೂ ನೇರ ವ್ಯಕ್ತಿತ್ವ. ಈ ಗುಣಗಳು ಬ್ರಿಟಿಷ್ ಸಮಾಜದಲ್ಲಿ ಎಂದಿಗೂ ಇಷ್ಟವಾಗುವಂಥದ್ದಲ್ಲ.
ಈ ವರ್ಷದ ಆರಂಭದಲ್ಲಿ ಆಕೆಗೆ ರಾಯಲ್ ಇನ್‌ಸ್ಟಿಟ್ಯೂಟ್ ಆಫ್ ಬ್ರಿಟಿಷ್ ಆರ್ಕಿಟೆಕ್ಟ್ಸ್ ಚಿನ್ನದ ಪದಕ ನೀಡಿ ಗೌರವಿಸಿತ್ತು. ಸನ್ಮಾನ ಪತ್ರ ವಾಚಿಸುವ ವೇಳೆ ಮತ್ತೊಬ್ಬ ಅಪೂರ್ವ ವಾಸ್ತುಶಿಲ್ಪಿಪೀಟರ್ ಕುಕ್ ಹೀಗೆ ಹೇಳಿದ್ದರು. ನಮ್ಮ ಜಾಗರೂಕ ಹಾಗೂ ವಿನಮ್ರ ಸಂಸ್ಕೃತಿಯಲ್ಲಿ, ಆಕೆಯ ಕಾರ್ಯ ಖಂಡಿತವಾಗಿಯೂ ವಿನಮ್ರವಲ್ಲ. ಆಕೆಯ ಸ್ವಭಾವವೇ ವಿನಮ್ರತೆಗೆ ವಿರುದ್ಧವಾದುದು. ಅಂಥ ಆತ್ಮವಿಶ್ವಾಸ ಒಬ್ಬ ಚಿತ್ರನಿರ್ಮಾಪಕ ಅಥವಾ ಫುಟ್ಬಾಲ್ ವ್ಯವಸ್ಥಾಪಕರಲ್ಲಿ ಇದ್ದರೆ ಸ್ವೀಕರಿಸಬಹುದು. ಆದರೆ ಇದು ಕೆಲ ವಾಸ್ತುಶಿಲ್ಪಿಗಳಿಗೆ ಉಸಿರುಗಟ್ಟಿಸುವಂತಿತ್ತು. ಬಹುಶಃ ಅವರು ಆಕೆಯ ಪ್ರಶ್ನಾತೀತ ಪ್ರತಿಭೆಗೆ ಹೊಟ್ಟೆಕಿಚ್ಚು ಪಡುತ್ತಿದ್ದಿರಬೇಕು.
ಬ್ರಿಟಿಷ್ ವಾಸ್ತುಶಿಲ್ಪದಲ್ಲಿ ತಮಗೆ ಕೆಲವೊಮ್ಮೆ ಪರದೇಶಿ ಎಂಬ ಭಾವನೆ ಮೂಡುತ್ತಿದೆ ಎಂದು ಹದೀದ್ ಒಮ್ಮೆ ಹೇಳಿದ್ದರೂ, ಒಬ್ಬ ಮಹಿಳೆಯಾಗಿ, ವಿದೇಶಿ ಪ್ರಜೆಯಾಗಿ, ಅಪೂರ್ವ ಸಂಶೋಧಕಿಯಾಗಿದ್ದ ಆಕೆಯನ್ನು ರಾಣಿ ಎಲಿಜಬೆತ್-2 2012ರಲ್ಲಿ ಯಜಮಾನಿಯಾಗಿ ನೇಮಿಸಿದ್ದರು.
ನಾನು ಎಂದೂ ಅಧಿಕಾರ ವಿರೋಧಿಯಾಗಿರಲಿಲ್ಲ ಎಂದು ಅವರು ಬಿಬಿಸಿಗೆ ಸ್ಪಷ್ಟಪಡಿಸಿದ್ದರು.













