ಅನಂತ್ ಅಂಬಾನಿ 8 ತಿಂಗಳಲ್ಲಿ 108 ಕೆ.ಜಿ. ತೂಕ ಇಳಿಸಿಕೊಂಡಿದ್ದು ಹೇಗೆ ಗೊತ್ತೇ ?

ಅನಂತ್ ಅಂಬಾನಿ ನಿನ್ನೆ ತಮ್ಮ ಕುಟುಂಬ ಹಾಗೂ ಸ್ನೇಹಿತರನ್ನು ದಂಗುಬಡಿಸಿದರು. ಹೇಗೆ ಗೊತ್ತೇ? ತಮ್ಮ ರೂಪಾಂತರ ಮೂಲಕ. ಬಹುಶಃ ಭಾರತದ ದಂತಕಥೆ ಎನಿಸಿದ ಧೀರೂಬಾಯಿ ಅಂಬಾನಿ ಇದ್ದಿದ್ದರೆ ತಮ್ಮ ನಿರೀಕ್ಷೆ ಈಡೇರಿಸಿದ ಮೊಮ್ಮಗನ ಬಗ್ಗೆ ಹೆಮ್ಮೆ ಪಡುತ್ತಿದ್ದರು. ಧೀರೂಬಾಯಿಯವರ ಪ್ರಕಾರ, "ನಾವು ಒಂದು ವಿಷಯ ಬಗ್ಗೆ ಸತತವಾಗಿ ಗಮನ ಕೇಂದ್ರೀಕರಿಸಿದರೆ ಯಾವುದೂ ಅಸಾಧ್ಯವಲ್ಲ"
ನೀತಾ ಹಾಗೂ ಮುಕೇಶ್ ಅಂಬಾನಿ ದಂಪತಿಯ ಕಿರಿಮಗ ಒಂದೂವರೆ ವರ್ಷ ಹಿಂದೆ ಒಂದು ದೃಢಸಂಕಲ್ಪ ಕೈಗೊಂಡರು. ಅದು ಔಷಧಪ್ರೇರಿತ ಬೊಜ್ಜಿನ ವಿರುದ್ಧ ಹೋರಾಡಿ ಜಯಶಾಲಿಯಾಗುವುದು. ಕೊನೆಗೂ ಅವರ ದೃಢನಿರ್ಧಾರ ಗೆದ್ದಿದೆ. 18 ತಿಂಗಳಲ್ಲಿ 108 ಕೆ.ಜಿ. ತೂಕ ಇಳಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಅದು ಕೂಡಾ ಕಟು ಆಹಾರಪಥ್ಯ ಹಾಗೂ ದಿನಕ್ಕೆ ಐದರಿಂದ ಆರು ಗಂಟೆ ವ್ಯಾಯಾಮದ ಮೂಲಕ! ಪ್ರತಿದಿನ 21 ಕಿಲೋಮೀಟರ್ ನಡಿಗೆ, ಬಳಿಕ ಯೋಗ, ಭಾರ ಇಳಿಸುವ ತರಬೇತಿ, ಕಾರ್ಯಚಟುವಟಿಕೆ ತರಬೇತಿ ಹಾಗೂ ಗುರುತರ ಹೃದಯ ವ್ಯಾಯಾಮ. ಸಕ್ಕರೆ ರಹಿತ, ಕಡಿಮೆ ಕಾರ್ಬೊಹೈಡ್ರೇಟ್, ಸಮರ್ಪಕ ಕೊಬ್ಬು ಹಾಗೂ ಪ್ರೊಟೀನ್‌ಯುಕ್ತವಾದ ಆಹಾರಪಥ್ಯ ಇದು ಅವರ ಒಂದೂವರೆ ವರ್ಷದ ದಿನಚರಿ. ಮಗನ ಅದ್ಭುತ ಸಾಧನೆ ನೀತಾ ಅಂಬಾನಿಯವರನ್ನು ಬೆರಗುಗೊಳಿಸಿದೆ. 500 ದಿನಗಳ ಬೆವರು ಸುರಿಸುವ ದೈಹಿಕ ಕಸರತ್ತುಗಳನ್ನು ನೋಡುತ್ತಾ ಬಂದವರು. ತನ್ನ ಆರೋಗ್ಯದ ಬಗೆಗಿನ ಮಗನ ಬದ್ಧತೆಗೆ ಹ್ಯಾಟ್ಸಾಫ್ ಹೇಳಿದರು. ಈ ಕಠಿಣ ಸವಾಲು ಗೆದ್ದ ಅನಂತ್ ಎಲ್ಲರಿಗೆ ಸ್ಫೂರ್ತಿ ಎನ್ನುತ್ತಾರೆ ಹೆಮ್ಮೆಯ ಅಮ್ಮ. ಬಾಲ್ಯದಲ್ಲಿ ತೀವ್ರ ಆಸ್ತಮಾಕ್ಕೆ ಚಿಕಿತ್ಸೆ ಪಡೆದಿದ್ದ ಅನಂತ್‌ನ ದೇಹತೂಕ ಒಂದೇ ಸಮನೆ ಏರತೊಡಗಿತ್ತು. ಸಹಜವಾಗಿ ತೂಕ ಇಳಿಸುವುದು ಕಠಿಣ ಶ್ರಮದ ಕೆಲಸ. ಆದರೆ ಸಂಪೂರ್ಣ ಬದ್ಧತೆ ಇದ್ದರೆ 21ನೇ ಹುಟ್ಟುಹಬ್ಬಕ್ಕೆ ಮುನ್ನ ಸಾಧಿಸಬಹುದು ಎಂದು ವೈದ್ಯರು ಸಲಹೆ ಮಾಡಿದ್ದರು.
ಪ್ರಾಣಿ ಹಾಗೂ ವನ್ಯಮೃಗ ಪ್ರಿಯ ಅನಂತ್, ಈಗ ಅಮೆರಿಕದ ಬ್ರೌನ್ ವಿವಿಯಲ್ಲಿ ಜೂನಿಯರ್ ಕಲಿಕೆಯಲ್ಲಿದ್ದಾರೆ. ಕಠಿಣ ಪರಿಶ್ರಮ, ಬದ್ಧತೆ, ಗಮನ ಕೇಂದ್ರೀಕರಿಸಿದರೆ ಯಾವುದೂ ಅಸಾಧ್ಯವಲ್ಲ ಎನ್ನುವುದಕ್ಕೆ ಅನಂತ್ ಜೀವಂತ ನಿದರ್ಶನ.






