ಬನ್ಸಾಲಿ ಚಿತ್ರಕ್ಕೆ ಕರೀನಾ ಹೀರೊಯಿನ್

ಕರೀನಾ ಕಪೂರ್ ಚಿತ್ರಗಳು ಕಳೆದ ಕೆಲವು ಸಮಯದಿಂದ ಬಾಕ್ಸ್ ಆಫೀಸಿನಲ್ಲಿ ಅಷ್ಟೇನೂ ಸದ್ದು ಮಾಡುತ್ತಿರಲಿಲ್ಲ. ಆದರೆ ಈಗ ಆಕೆ ಮತ್ತೆ ಯಶಸ್ಸು ಒಲಿಯತೊಡಗಿದೆ. ‘ಕಿ ಆ್ಯಂಡ್ ಕ’ ಚಿತ್ರದ ಭರ್ಜರಿ ಹಿಟ್ ಕಂಡಿರುವ ಬೆನ್ನಿಗೇ ಬಾಲಿವುಡ್‌ನ ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಚಿತ್ರಕ್ಕೂ ಆಕೆ ನಾಯಕಿಯಾಗಿ ಆಯ್ಕೆ ಆಗಿದ್ದಾರೆಂಬ ಮಾತುಗಳು ಬಲವಾಗಿ ಕೇಳಿಬರುತ್ತಿವೆ.
ಬನ್ಸಾಲಿ ತನ್ನ ಮುಂದಿನ ಚಿತ್ರ ‘ಗುಸ್ತಾಖಿಯಾ’ ನಲ್ಲಿ ನಟಿಸುವಂತೆ ಕರೀನಾಗೆ ಕೊಡುಗೆ ನೀಡಿದ್ದರೆನ್ನಲಾಗಿದೆ. ಈ ಬಗ್ಗೆ ಅವರು ಕರೀನಾರನ್ನು ಭೇಟಿಯಾಗಿ ಮಾತುಕತೆ ಕೂಡ ನಡೆಸಿದ್ದಾರೆ. ಈ ಮೊದಲು ‘ಗುಸ್ತಾಖಿಯಾ’ನ ನಾಯಕಿಯಾಗಿ ಪ್ರಿಯಾಂಕ ಚೋಪ್ರಾ ನಟಿಸಲಿದ್ದಾರೆಂದು ಹೇಳಲಾಗುತ್ತಿತ್ತು. ಆದರೆ ಚೋಪ್ರಾ ಹಾಲಿವುಡ್‌ನ ಟಿವಿ ಸೀರಿಯಲ್ ಒಂದರಲ್ಲಿ ಬ್ಯುಸಿಯಾಗಿರುವುದರಿಂದ, ಆ ಪಾತ್ರವು ಕರೀನಾಗೆ ಪಾಲಾಗಿದೆಯೆನ್ನಲಾಗಿದೆ. ಆದೇನಿದ್ದರೂ ಈ ಬಗ್ಗೆ ಬನ್ಸಾಲಿ ತನ್ನ ಚಿತ್ರದ ನಾಯಕಿ ಯಾರೆಂಬ ಬಗ್ಗೆ ತಾನಾಗಿಯೇ ಯಾವುದೇ ಗುಟ್ಟು ಬಿಟ್ಟು ಕೊಟ್ಟಿಲ್ಲ.
ಸಾಹೀರ್ ಲುಧಿಯಾನ್ವಿ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾದ ಖ್ಯಾತ ಗೀತರಚನೆಕಾರ ಅಬ್ದುಲ್ ಹಯ್ದಿ ಹಾಗೂ ಖ್ಯಾತ ಕವಯತ್ರಿ, ಅಮೃತ ಪ್ರೀತಮ್ ಅವರ ನಡುವಿನ ಮಧುರ ಬಾಂಧವ್ಯದ ಕಥೆಯು ಹೇಳುವ ಈ ಚಿತ್ರದಲ್ಲಿ ಇರ್ಫಾನ್ ಖಾನ್ ನಾಯಕ. ಉಳಿದ ಪಾತ್ರವರ್ಗದ ಆಯ್ಕೆ ಭರದಿಂದ ನಡೆಯುತ್ತಿದ್ದು, ಎಲ್ಲಾ ಸರಿ ಹೋದಲ್ಲಿ ಚಿತ್ರವು ಆಗಸ್ಟ್ ವೇಳೆಗೆ ಚಿತ್ರೀಕರಣ ಆರಂಭಿಸಲಿದೆ.








