ಇಮ್ತಿಯಾಝ್ ಚಿತ್ರಕ್ಕೆ ಶಾರುಕ್-ಅನುಷ್ಕಾ ಜೋಡಿ

‘ರಬ್ ನೆ ಬನಾ ದಿ ಜೋಡಿ’, ‘ಜಬ್ ತಕ್ ಹೈ ಜಾನ್ ಚಿತ್ರಗಳ ಬಳಿಕ ಕಿಂಗ್‌ಖಾನ್ ಹಾಗೂ ಅನುಷ್ಕಾ ಶರ್ಮಾ ಮತ್ತೆ ಒಂದಾಗುತ್ತಿದ್ದಾರೆ. ಜಬ್ ವಿ ಮೆಟ್, ಲವ್ ಆಜ್ ಕಲ್, ಹೈ ವೇನಂತಹ ವಿಭಿನ್ನ ಶೈಲಿಯ ಚಿತ್ರಗಳನ್ನು ನಿರ್ದೇಶಿಸಿರುವ ಇಮ್ತಿಯಾಝ್ ಅಲಿ ಖಾನ್ ಚಿತ್ರದಲ್ಲಿ ಇವರಿಬ್ಬರು ನಾಯಕ, ನಾಯಕಿಯರಾಗಿ ಅಭಿನಯಿಸಲಿದ್ದಾರೆ. ಇದೊಂದು ಅಪ್ಪಟ ಕಾಮಿಡಿ ಚಿತ್ರವಾಗಿದ್ದು, ಶಾರುಕ್ ಖಾನ್ ಸಿಖ್ ಪ್ರವಾಸಿಗನ ಗೆಟಪ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.
ಶಾರುಕ್-ಅನುಷ್ಕಾ ಜೊತೆಯಾಗಿ ನಟಿಸಿದ ಮೊದಲಿನ ಎರಡೂ ಚಿತ್ರಗಳನ್ನು ಬಾಲಿವುಡ್ ಚಿತ್ರಪ್ರೇಮಿಗಳು ಮುಕ್ತಹೃದಯದಿಂದ ಸ್ವೀಕರಿಸಿದ್ದರು. ಅಂದಹಾಗೆ ಶಾರುಕ್ ಹಾಗೂ ಅನುಷ್ಕಾ, ಇಬ್ಬರೂ ಈ ತನಕ ಇಮ್ತಿಯಾಝ್ ಚಿತ್ರದಲ್ಲಿ ನಟಿಸಿರಲಿಲ್ಲ. ಇದೀಗ ಈ ಚಿತ್ರದೊಂದಿಗೆ ಈ ಮೂವರು ಮಹಾನ್ ಪ್ರತಿಭೆಗಳ ಸಂಗಮವು ಬಾಲಿವುಡ್‌ನಲ್ಲಿ ಭಾರೀ ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಸದ್ಯ ಶಾರುಕ್ ಖಾನ್ ತನ್ನ ನೂತನ ಚಿತ್ರ ‘ರಾಯಿಸ್’ ಚಿತ್ರದ ಶೂಟಿಂಗ್‌ನಲ್ಲಿ ನಿರತರಾಗಿದ್ದರೆ, ಅನುಷ್ಕಾ ಅವರು ಸಲ್ಮಾನ್‌ಖಾನ್ ಜೊತೆ ಮೊದಲ ಬಾರಿಗೆ ನಟಿಸುತ್ತಿರುವ ಸುಲ್ತಾನ್ ಚಿತ್ರದಲ್ಲಿ ಮಗ್ನರಾಗಿದ್ದಾರೆ. ಶಾರುಕ್ ಅವರ ಇನ್ನೊಂದು ಚಿತ್ರ ‘ಫ್ಯಾನ್’, ಎಪ್ರಿಲ್ 15ರಂದು ಬೆಳ್ಳಿತೆರೆಗೆ ಅಪ್ಪಳಿಸಲಿದೆ.





