ಅವಿವಾಹಿತ ಯುವಕನ ಆತ್ಮಹತ್ಯೆ ಶಂಕೆ ವ್ಯಕ್ತ ಪಡಿಸಿ ಕುಟುಂಬಸ್ಥರ ದೂರು

ತನಿಯಪ್ಪ ಕೊರಗ
ಪುತ್ತೂರು: ಅವಿವಾಹಿತ ಯುವಕರೊಬ್ಬರ ಮೃತದೇಹವು ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಭಾನುವಾರ ಪುತ್ತೂರು ತಾಲೂಕಿನ ಪಡ್ನೂರು ಗ್ರಾಮದ ಪಂಜಿಗುಡ್ಡೆ ಎಂಬಲ್ಲಿ ಪತ್ತೆಯಾಗಿದ್ದು, ಮೃತರ ಸಹೊದರಿ ಇದೊಂದು ಸಂಶಯಾಸ್ಪದ ಸಾವು ಎಂದು ಆಕ್ಷೇಪ ವ್ಯಕ್ತಪಡಿಸಿದ ಕಾರಣ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಸಂಶಯಾಸ್ಪದ ಪ್ರಕರಣ ದಾಖಲಿಸಿದ್ದಾರೆ. ಪಡ್ನೂರು ಗ್ರಾಮದ ಪಂಜಿಗುಡ್ಡೆ ನಿವಾಸಿ ತನಿಯಪ್ಪ ಕೊರಗ (28) ಮೃತಪಟ್ಟ ಯುವಕ. ಇವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಮನೆಯಲ್ಲಿ ಪತ್ತೆಯಾಗಿದೆ. ಇವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಮೇಲ್ನೋಟಕ್ಕೆ ಸಾಭೀತಾದರೂ ಮೃತರ ಸಹೋದರಿ ಸೇಸು ಎಂಬವರು ಸಾವಿನ ಬಗ್ಗೆ ಶಂಕೆ ವ್ಯಕ್ತ ಪಡಿಸಿದ್ದಾರೆ. ಮೃತ ತನಿಯಪ್ಪ ಅವಿವಾಹಿತರಾಗಿದ್ದು, ಇವರ ಮನೆಯಲ್ಲಿ ಇವರ ಜತೆ ವಾಸಿಸುವ ತಂದೆ, ತಾಯಿ, ಅಕ್ಕ ಮತ್ತು ತಮ್ಮ ಒಂದು ತಿಂಗಳ ಹಿಂದೆ ಪುರುಷರಕಟ್ಟೆಯಲ್ಲಿರುವ ಸಂಬಂಧಿಕರ ಮನೆಗೆ ತೆರಳಿದ ಕಾರಣ ತನಿಯಪ್ಪ ಒಬ್ಬರೇ ಮನೆಯಲ್ಲಿ ವಾಸಿಸುತ್ತಿದ್ದರು. ತನಿಯಪ್ಪ ಅವರು ತಮ್ಮ ಹಳೆಯ ಮನೆಯ ಸಮೀಪದಲ್ಲಿರುವ ತಮ್ಮದೇ ಹೊಸ ಮನೆಗೆ ತೆರಳಿ ಮೊದಲು ಆತ್ಮಹತ್ಯೆಗೆ ಯತ್ನಿಸಿದರಾದರೂ ಅದು ವಿಫಲವಾಗಿ ಹಳೆ ಮನೆಯಲ್ಲಿಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರು ಪ್ರತಿದಿನ ನಿರ್ಮಾಣ ಹಂತದಲ್ಲಿರುವ ಹೊಸ ಮನೆಗೆ ಮಲಗಲು ಹೋಗುತ್ತಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಶವದ ಕಾಲು ನೆಲವನ್ನು ಸ್ಪರ್ಶಿಸಿದ್ದ ಕಾರಣ ಇವರ ಆತ್ಮಹತ್ಯೆಯ ಕುರಿತು ಸಂಶಯ ವ್ಯಕ್ತವಾಗಿದೆ. ಶವವನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಯ ಅಪರಾಧ ವಿಧಿ ವಿಜ್ಞಾನ ಪ್ರಯೋಗಾಲಯದವರು ಅಲ್ಲಿಗೆ ಸ್ಥಳಾಂತರಿಸಿದ್ದಾರೆ. ಶವದ ಮರಣೋತ್ತರ ಪರೀಕ್ಷೆ ಅಲ್ಲಿ ನಡೆಯಲಿದೆ. ಪುತ್ತೂರು ಎಎಸ್ಪಿ ಸಿ.ಬಿ. ರಿಷ್ಯಂತ್ ಸ್ಥಳಕ್ಕೆ ಭೇಟಿ ನೀಡಿ ತನಿಖೆಗೆ ಮಾರ್ಗದರ್ಶನ ನೀಡಿದ್ದಾರೆ. ಪುತ್ತೂರು ನಗರ ಪೊಲೀಸ್ ಇನ್ಸ್ಪೆಕ್ಟರ್ ಮಹೇಶ್ ಪ್ರಸಾದ್ ಪ್ರಕರಣದ ಮುಂದಿನ ತನಿಖೆ ನಡೆಸಲಿದ್ದಾರೆ.





