ಕೊಲ್ಲಂ ಜಿಲ್ಲಾಸ್ಪತ್ರೆಗೆ ಪ್ರಧಾನಿ ಮೋದಿ ಭೇಟಿ; ಗಾಯಾಳುಗಳ ಯೋಗಕ್ಷಮ ವಿಚಾರಣೆ

ಕೊಲ್ಲಂ,ಎ.10: ದೇವಸ್ಥಾನದ ವಾರ್ಷಿಕೋತ್ಸವದ ವೇಳೆ ಅಗ್ನಿ ದುರಂತದಿಂದ ಗಾಯಗೊಂಡವರು ಚಿಕಿತ್ಸೆ ಪಡೆಯುತ್ತಿರುವ ಕೊಲ್ಲಂ ಜಿಲ್ಲಾಸ್ಪತ್ರೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಸಂಜೆ ಭೇಟಿ ನೀಡಿ ಗಾಯಾಳುಗಳ ಯೋಗಕ್ಷಮ ವಿಚಾರಿಸಿದರು.
ಇದೊಂದು ಹೃದಯ ವಿದ್ರಾವಕ ಘಟನೆ ಎಂದು ಬಣ್ಣಿಸಿದ ಪ್ರಧಾನಿ ಮೋದಿ ಅವರು ಕೇಂದ್ರ ಸರಕಾರದಿಂದ ಈ ಸಂಬಂಧ ಎಲ್ಲ ನೆರವು ನೀಡಲಾಗುವುದು ಎಂದರು.
ಪ್ರಧಾನಿ ಮೋದಿ ವಾಯುಪಡೆಯ ವಿಶೇಷ ವಿಮಾನದಲ್ಲಿ ತಿವನಂತಪುರಕ್ಕೆ ಆಗಮಿಸಿ, ಬಳಿಕ ಹೆಲಿಕಾಪ್ಟರ್‌ನಲ್ಲಿ ಕೊಲ್ಲಂಗೆ ತೆರಳಿದರು. ಮೋದಿ ಅವರಿಗೆ ಕೇರಳದ ಮುಖ್ಯಮಂತ್ರಿ ಉಮನ್ ಚಾಂಡಿ ಸಾಥ್ ನೀಡಿದರು.
ದೇವಸ್ಥಾನದ ಆವರಣದಲ್ಲಿ ಇಂದು ಬೆಳಗ್ಗಿನ ಜಾವ ಮಧ್ಯಾಹ್ನ 3.30ರ ಹೊತ್ತಿಗೆ ಪಟಾಕಿ ಸಿಡಿಸುವ ವೇಳೆ ಸಂಭವಿಸಿದ ಭಾರೀ ಅಗ್ನಿ ಅನಾಹುತದಿಂದಾಗಿ ಮೃತಪಟ್ಟವರ ಸಂಖ್ಯೆ 109ಕ್ಕೆ ಏರಿದ್ದು, 350ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ 45ಮಂದಿಯ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳು ಕೊಲ್ಲಂ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅಗ್ನಿ ದುರಂತ ಸಂಭವಿಸಿದ ಸ್ಥಳಕ್ಕೆ ಆಗಮಿಸಿದ್ದಾರೆ. ಹಿರಿಯ ಕಾಂಗ್ರೆಸ್ ನಾಯಕ ಎ.ಕೆ. ಆಂಟನಿ ಅವರು ರಾಹುಲ್ ಜತೆ ಇದ್ದಾರೆ.





