ವಿದೇಶಿಯರು ದೇಶದಲ್ಲಿ ತಂಗುವ ಕಾಲಾವಧಿ ನಿಶ್ಚಿಯಿಸಿಲ್ಲ: ಸೌದಿ ಕಾರ್ಮಿಕ ಸಚಿವಾಲಯ

ಜಿದ್ದಾ, ಎಪ್ರಿಲ್.10: ಸೌದಿಯಲ್ಲಿ ಉದ್ಯೋಗದಲ್ಲಿರುವ ವಿದೇಶಿಯರು ದೇಶದಲ್ಲಿ ತಂಗಬಹುದಾದ ಕಾಲಾವಧಿಗೆ ಸಂಬಂಧಿಸಿ ಈಗ ಯಾವ ತೀರ್ಮಾನವನ್ನೂ ಕೈಗೊಂಡಿಲ್ಲ ಎಂದು ಸೌದಿ ಕಾರ್ಮಿಕ ಸಚಿವಾಲಯ ತಿಳಿಸಿರುವುದಾಗಿ ವರದಿಯಾಗಿದೆ. ಇದಕ್ಕೆ ಸಂಬಂಧಿಸಿ ಪ್ರಚಾರವಾಗುವ ವಿಷಯಗಳು ಸಾರ್ವಜನಿಕ ಸಮುದಾಯದ ಅಭಿಪ್ರಾಯವನ್ನು ತಿಳಿಯಲಿಕ್ಕಾಗಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ ಕರಡು ದಾಖಲೆಗಳು ಮಾತ್ರವಾಗಿದೆ ಎಂದು ಸಹಸಚಿವ ಅಹ್ಮದ್ ಅಲ್‌ಹುಮೈದಾನ್ ಸ್ಪಷ್ಟಪಡಿಸಿದ್ದಾರೆ. ವೇತನ ಮತ್ತು ಸೌದಿಯಲ್ಲಿ ತಂಗಿದ ಕಾಲಾವಧಿಯನ್ನು ಅನುಸರಿಸಿ ನಿತಕಾತ್‌ನಲ್ಲಿ ವಿದೇಶಿಯರ ಗ್ರೇಡ್ ಬದಲಾವಣೆ ಎಂಬ ವಿಷಯದಲ್ಲಿ ಸಚಿವಾಲಯದ ವೆಬ್‌ಸೈಟ್‌ನಲ್ಲಿ ಸಾರ್ವಜನಿಕ ಸಮೂಹದ ಚರ್ಚೆಗಾಗಿ ಪ್ರಕಟಿಸಲಾಗಿದೆ. ಸಚಿವಾಲಯದ ಮನ್ ನುಹ್‌ಸಿನ್ ಎಂಬ ಯೋಜನೆಯ ಅಂಗವಾಗಿ ಯಾವುದಾದರೂ ವಿಷಯದಲ್ಲಿ ಕಾನೂನು ರೂಪಿಸುವ ಮೊದಲು ಸಾರ್ವಜನಿಕ ಚರ್ಚೆಗೆ ಒಳಪಡಿಸಲಾಗುವ ಪ್ರಕ್ರಿಯೆ ಇದಾಗಿದೆ ಎಂದು ಅವರು ತಿಳಿಸಿದ್ದಾರೆ.
ಉದ್ಯೋಗದ ವಿಷಯದಲ್ಲಿ ಚರ್ಚೆಮಾಡುವ ವಿವಿಧ ಸಮಿತಿಗಳಿಂದ ಮತ್ತು ಇತರ ವಿಭಾಗಗಳಿಂದ ಲಭಿಸಿದ ಅಭಿಪ್ರಾಯಗಳ ಆಧಾರದಲ್ಲಿ ಪ್ರಸ್ತುತ ಕರಡನ್ನು ಸಚಿವಾಲಯ ಹಿಂದಕ್ಕೆ ಪಡೆದಿತ್ತು. ಸಂಬಂಧಿಸಿದ ಎಲ್ಲ ವಿಭಾಗಗಳೊಂದಿಗೆ ಸೇರಿ ಸಮಾಲೋಚನೆ ನಡೆಸಿ ಅಗತ್ಯವೆನಿಸಿದರೆ ನಂತರ ಪುನಃ ಹೊಸ ಕರಡು ಸಮರ್ಪಿಸಲಾಗುವುದು. ಕಾರ್ಮಿಕ ಸಚಿವಾಲಯದ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ ಕರಡು ನಿರ್ದೇಶಗಳು ಕಾನೂನುಗಳಾಗಿವೆ ಎಂಬ ರೀತಿಯಲ್ಲಿ ವರದಿ ಮಾಡುವುದರಿಂದ ದೂರ ವಿರಬೇಕು ಮತ್ತು ಇಂತಹ ವಿಷಯಗಳಲ್ಲಿ ಮಾಧ್ಯಮಗಳು ಹೆಚ್ಚು ಸೂಕ್ಷ್ಮತೆಯನ್ನು ಪಾಲಿಸಬೇಕೆಂದು ಎಲ್ಲ ಮಾಧ್ಯಮಗಳೊಂದಿಗೆ ಸಚಿವರು ಆಗ್ರಹಿಸಿರುವುದಾಗಿ ವರದಿಯಾಗಿದೆ.







