ಬೆಳ್ತಂಗಡಿ : ಅಹಂಕಾರದಿಂದ ಸಾಧನೆಯ ಬೆಳವಣಿಗೆಗೆ ಅಡ್ಡಿ: ಡಾ.ವೀರೇಂದ್ರ ಹೆಗ್ಗಡೆ
11ನೆ ವಾರ್ಷಿಕ ಜಾನಪದ ಸಾಂಸ್ಕೃತಿಕ ಉತ್ಸವ, 2 ಮಂದಿ ಸಾಧಕರಿಗೆ ವಿಶ್ವ ಕನ್ನಡ ಕಣ್ಮಣಿ ಪ್ರಶಸ್ತಿ ಪ್ರದಾನ

ಬೆಳ್ತಂಗಡಿ, ಎ.10: ಅಹಂಕಾರದಿಂದ ಸಾಧನೆಯ ಬೆಳವಣಿಗೆಗೆ ಅಡ್ಡಿಯಾಗುತ್ತದೆ. ಸಮಾಜವು ಸಾಧಕರನ್ನು ಗುರುತಿಸಿದ ಮೇಲೆ ಅವರಲ್ಲಿ ಧನ್ಯತೆ, ಜವಾಬ್ದಾರಿ ಹೆಚ್ಚುತ್ತದೆ ಎಂಬುದನ್ನು ಸ್ವತಃ ಅನುಭವದಲ್ಲಿ ಕಂಡಿದ್ದೇನೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಹೇಳಿದರು.
ವಿಶ್ವ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಪರಿಷತ್ ಕರ್ನಾಟಕ ರಾಜ್ಯ ಸಮಿತಿ ವತಿಯಿಂದ ರವಿವಾರ ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ ನಡೆದ 11ನೆ ವಾರ್ಷಿಕ ಜಾನಪದ ಸಾಂಸ್ಕೃತಿಕ ಉತ್ಸವದಲ್ಲಿ ರಾಜ್ಯದ 42 ಮಂದಿ ಸಾಧಕರಿಗೆ ವಿಶ್ವ ಕನ್ನಡ ಕಣ್ಮಣಿ ಪ್ರಶಸ್ತಿಯನ್ನು ಪ್ರದಾನ ಮಾಡಿ ಅವರು ಮಾತನಾಡಿದರು.
ತಮ್ಮಲ್ಲಿನ ವಿದ್ಯೆ, ಜಾಣ್ಮೆಯಿಂದ ವಿವಿಧ ಕ್ಷೇತ್ರಗಳಲ್ಲಿ ಅವರದೇ ಆದ ಛಾಪು ಮೂಡಿಸುವಲ್ಲಿ ಇಂದಿನ ಪ್ರಶಸ್ತಿ ಪುರಸ್ಕೃತರು ಯಶಸ್ವಿಯಾಗಿದ್ದಾರೆ. ಸಮಾಜ ಅವರ ಸಾಧನೆಯನ್ನು ಕೊಂಡಾಡುತ್ತದೆಯೇ ಹೊರತು ಜಾತಿ,ವರ್ಗದ ಹಿನ್ನಲೆಯನ್ನಲ್ಲ. ಪ್ರಶಂಸೆ, ಪ್ರತಿಷ್ಠೆ, ಪ್ರಚಾರಕ್ಕಾಗಿ ಯಾರೂ ಸಾಧನೆ ಮಾಡುವುದಿಲ್ಲ ಎಂದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ರಾಜ್ಯದ 42 ಮಂದಿ ಸಾಧಕರನ್ನು ಡಾ.ಹೆಗ್ಗಡೆಯವರು ಸಮ್ಮಾನಿಸಿದರು. ಡಾ.ಯಲ್ಲಪ್ಪ ಕೆ.ಕೆ.ಪುರ ರಚಿಸಿರುವ ‘101 ಸೃಷ್ಟಿ ವೈಚಿತ್ರ್ಯಗಳು’ ಎಂಬ ಮಕ್ಕಳ ಸಚಿತ್ರ ಕೃತಿಯನ್ನು ಬಿಡುಗಡೆಗೊಳಿಸಿದರು. ಪರಿಷತ್ ವತಿಯಿಂದ ಡಾ.ಹೆಗ್ಗಡೆಯವರನ್ನು ಗೌರವಿಸಿದರು. ಅಧ್ಯಕ್ಷತೆಯನ್ನು ಪರಿಷತ್‌ನ ರಾಜ್ಯಾಧ್ಯಕ್ಷ ಅಗಸನೂರು ತಿಮ್ಮಪ್ಪ ವಹಿಸಿದ್ದರು. ವೇದಿಕೆಯಲ್ಲಿ ಅತಿಥಿಗಳಾಗಿ ಯುವ ನೇತಾರ ಎನ್. ವೇಣುಗೋಪಾಲ್, ಅಂತರಾಷ್ಟ್ರೀಯ ಯೋಗ ತಜ್ಞ ಡಾ.ನಿರಂಜನಮೂರ್ತಿ, ವೀರಗಾಸೆ ಪ್ರಶಸ್ತಿ ಪುರಸ್ಕೃತ ಎಂ.ಆರ್.ಬಸಪ್ಪಇದ್ದರು.
ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಬಿ.ಪಿ.ಸಂಪತ್‌ಕುಮಾರ್ ನಿರ್ವಹಿಸಿದ ಕಾರ್ಯಕ್ರಮದಲ್ಲಿ ಪರಿಷತ್ ಕಾರ್ಯದರ್ಶಿ ಡಾ.ಯಲ್ಲಪ್ಪ ಕೆ.ಕೆ.ಪುರ ಸ್ವಾಗತಿಸಿ, ಪ್ರಸ್ತಾವಿಸಿದರು. ಪತ್ರಕರ್ತ ಅಚ್ಚು ಮುಂಡಾಜೆ ವಂದಿಸಿದರು.







