ರಾಷ್ಟ್ರಧ್ವಜ-ಗೀತೆಗಳಿಗೆ ಅವಮಾನ ತಡೆಯುವಂತೆ ರಾಜ್ಯಗಳಿಗೆ ಕೇಂದ್ರದ ಸೂಚನೆ

ಹೊಸದಿಲ್ಲಿ, ಎ.10: ರಾಷ್ಟ್ರೀಯತೆಯ ಕುರಿತು ಬಿರುಸುಗೊಂಡಿರುವ ಚರ್ಚೆ ಹಾಗೂ ರಾಷ್ಟ್ರಗೀತೆ ಹಾಗೂ ರಾಷ್ಟ್ರಧ್ವಜಗಳನ್ನು ಅವಮಾನಿಸುವ ಕುರಿತಾದ ದೂರಗಳು ನಡುವೆಯೇ ಉಲ್ಲಂಘನೆಗೆ ಮೂರು ವರ್ಷಗಳ ಶಿಕ್ಷೆ ಸಾಧ್ಯವಿರುವ ಸಂಬಂಧಿತ ಕಾನೂನನ್ನು ಕಟ್ಟು ನಿಟ್ಟಾಗಿ ಪಾಲಿಸುವುದನ್ನು ಖಚಿತಪಡಿಸುವಂತೆ ಕೇಂದ್ರ ಸರಕಾರವು ರಾಜ್ಯಗಳಿಗೆ ನಿರ್ದೇಶನ ನೀಡಿದೆ.
ರಾಷ್ಟ್ರಗೀತೆ ಹಾಗೂ ರಾಷ್ಟ್ರಧ್ವಜಕ್ಕೆ ಅಗೌರವ ತೋರಿರುವ ಬಗ್ಗೆ ವಿವಿಧ ವಿಭಾಗಗಳಿಂದ ತನಗೆ ದೂರುಗಳು ಬಂದಿವೆಯೆಂದಿರುವ ಕೇಂದ್ರ ಗೃಹ ಸಚಿವಾಲಯವು, ಅವುಗಳ ಗೌರವ ರಕ್ಷಣೆಯನ್ನು ಖಚಿತಪಡಿಸುವಂತೆ ಎಲ್ಲ ರಾಜ್ಯಗಳು ಹಾಗೂ ಕೇಂದ್ರಡಳಿತ ಪ್ರದೇಶಗಳಿಗೆ ಬರೆದಿರುವ ಪತ್ರವೊಂದರಲ್ಲಿ ತಿಳಿಸಿದೆ.
ಪತ್ರವೊಂದಿಗೆ ಱರಾಷ್ಟ್ರ ಗೌರವ ಅವಮಾನ ತಡೆ ಕಾಯ್ದೆ-1971 ಹಾಗೂ ‘ಭಾರತೀಯ ಧ್ವಜ ಸಂಹಿತೆ-2002’ಗಳ ತಲಾ ಒಂದು ಪ್ರತಿಯನ್ನು ಕಳುಹಿಸಿದ್ದು, ಅವುಗಳಲ್ಲಿರುವ ಪ್ರಸ್ತಾವಗಳ ಕಡ್ಡಾಯ ಪಾಲನೆಯನ್ನು ಖಚಿತಪಡಿಸುವಂತೆ ಅವುಗಳಿಗೆ ಸೂಚಿಸಲಾಗಿದೆ.
ಈ ಅಪರಾಧಕ್ಕೆ ಮೂರು ವರ್ಷಗಳ ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಬಹುದು.
ಭಾರತದ ರಾಷ್ಟ್ರಗೀತೆಯನ್ನು ವಿವಿಧ ಸಂದರ್ಭಗಳಲ್ಲಿ ನುಡಿಸಲಾಗುತ್ತದೆ ಅಥವಾ ಹಾಡಲಾಗುತ್ತದೆ. ರಾಷ್ಟ್ರಗೀತೆಯ ಸರಿಯಾದ ಪಾಠ, ಅವುಗಳನ್ನು ನುಡಿಸುವ ಅಥವಾ ಹಾಡ ಬೇಕಾದ ಸಂದರ್ಭಗಳು ಹಾಗೂ ಆ ಸಂದರ್ಭಗಳಲ್ಲಿ ಸೂಕ್ತ ಶಿಷ್ಟಾಚಾರ ಪಾಲನೆಯ ಮೂಲಕ ಅದಕ್ಕೆ ಗೌರವ ನೀಡಬೇಕಾದ ಅಗತ್ಯದ ಕುರಿತು ಕಾಲಕಾಲಕ್ಕೆ ಸೂಚನೆಗಳನ್ನು ನೀಡಲಾಗಿದೆಯೆಂದು ಪತ್ರದಲ್ಲಿ ತಿಳಿಸಲಾಗಿದೆ.
ರಾಷ್ಟ್ರಧ್ವಜದ ಕುರಿತು ಉಲ್ಲೇಖಿಸಿರುವ ಗೃಹ ಸಚಿವಾಲಯದ ಪತ್ರ, ಪ್ರಮುಖ ಕಾರ್ಯಾಕ್ರಮಗಳಲ್ಲಿ ಕಾಗದದ ಬದಲು ಪ್ಲಾಸ್ಟಿಕ್‌ನಲ್ಲಿ ಮಾಡಿದ ರಾಷ್ಟ್ರಧ್ವಜ ಬಳಸುತ್ತಿರುವುದು ತನ್ನ ಗಮನಕ್ಕೆ ಬಂದಿದೆ. ಪ್ಲಾಸ್ಟಿಕ್ ಧ್ವಜಗಳು ಕಾಗದದಂತೆ ಬೇಗನೆ ಕೊಳೆಯುವುದಿಲ್ಲ. ಆದುದರಿಂದ ಅವು ಪರಿಸರಕ್ಕೆ ಹಾನಿಕರಕ. ಅಲ್ಲದೆ,ಸಲ್ಲಬೇಕಾದ ಗೌರವದೊಂದಿಗೆ ಪ್ಲಾಸ್ಟಿಕ್ ಧ್ವಜಗಳನ್ನು ಸರಿಯಾದ ವಿಧಾನದಿಂದ ನಾಶ ನಾಡುವುದು ಸಮಸ್ಯೆಯಾಗುತ್ತದೆಂದು ಹೇಳಿದೆ.





