ದಕ್ಷ ಅಧಿಕಾರಿಯ ವರ್ಗಾವಣೆಗೆ ಮರಳು ಮಾಫಿಯಾ ಪ್ರಯತ್ನ: ಆರೋಪ
<ಬಿ. ರೇಣುಕೇಶ್
ಶಿವಮೊಗ್ಗ,ಎ.10: ಶಿವಮೊಗ್ಗ ಜಿಲ್ಲೆಯಲ್ಲಿ ದಕ್ಷ-ಪ್ರಾಮಾಣಿಕ ಅಧಿಕಾರಿಗಳು ಹೆಚ್ಚು ದಿನ ಕಾರ್ಯನಿರ್ವಹಣೆ ಮಾಡುವು ದಿಲ್ಲವೆಂಬ ಮಾತು ಸಾರ್ವಜನಿಕ ವಲಯ ದಲ್ಲಿದೆ. ಈ ಮಾತಿಗೆ ಪುಷ್ಠಿ ಎಂಬಂತೆ, ಈ ಹಿಂದೆ ಸಾಕಷ್ಟು ದಕ್ಷ ಅಧಿಕಾರಿಗಳು ಜಿಲ್ಲೆಗೆ ಬಂದಷ್ಟೇ ವೇಗದಲ್ಲಿ ವರ್ಗಾವಣೆಯಾಗಿದ್ದಾರೆ. ಇತ್ತೀಚೆಗಷ್ಟೆ ಭದ್ರಾವತಿ ಎಂಪಿಎಂ. ವ್ಯವಸ್ಥಾಪಕ ನಿರ್ದೇಶಕ ಹರ್ಷಗುಪ್ತ, ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತ ಎ.ಆರ್.ರವಿಯವರನ್ನು ದಿಢೀರ್ ಎತ್ತಂಗಡಿ ಮಾಡಲಾಗಿತ್ತು. ಇದೀಗ ಈ ವರ್ಗಾವಣೆ ಪಟ್ಟಿಯಲ್ಲಿ ಜಿಲ್ಲೆಯ ಮತ್ತೋರ್ವ ದಕ್ಷ ಅಧಿಕಾರಿಯ ಹೆಸರು ಸೇರ್ಪಡೆಯಾಗುವ ಸಾಧ್ಯತೆಯಿದೆ.
ಜಿಲ್ಲೆಯಲ್ಲಿ ಅವ್ಯಾಹತವಾಗಿ ನಡೆದುಕೊಂಡು ಬಂದಿದ್ದ ಮರಳು ಲೂಟಿಗೆ ಕಡಿವಾಣ ಹಾಕಿ ಪಾರದರ್ಶಕತೆ ತರುವಲ್ಲಿ ಯಶಸ್ವಿಯಾಗಿರುವ, ಇಡೀ ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ಮರಳು ವಿತರಣೆಯ ಸಮಗ್ರ ವಿವರವನ್ನು ಆನ್‌ಲೈನ್‌ನಲ್ಲಿ ಪ್ರಕಟಿಸುವ ವ್ಯವಸ್ಥೆ ಆರಂಭಿಸಿದ ಲೋಕೋಪಯೋಗಿ ಇಲಾಖೆ (ಪಿಡಬ್ಲುಡಿ)ಯ ಶಿವಮೊಗ್ಗ-ದಾವಣಗೆರೆ-ಚಿತ್ರದುರ್ಗ ಜಿ
ಲ್ಲಾ ವ್ಯಾಪ್ತಿಯ ಅಧೀಕ್ಷಕ ಇಂಜಿನಿಯರ್ ಬಿ.ಎಸ್.ಬಾಲಕೃಷ್ಣರವರನ್ನು ವರ್ಗಾವಣೆ ಮಾಡಲು ಮರಳು ಮಾಫಿಯಾದಿಂದ ಪ್ರಯತ್ನ ನಡೆಯುತ್ತಿದೆ ಎಂಬ ಸಂಗತಿ ಬೆಳಕಿಗೆ ಬಂದಿದೆ. ಈಗಾಗಲೇ ಮರಳು ಮಾಫಿಯಾವು ಜಿಲ್ಲೆಯ ಪ್ರಭಾವಿ ರಾಜಕಾರಣಿಗಳ ಮೂಲಕ ಲೋಕೋಪಯೋಗಿ ಇಲಾಖೆ ಸಚಿವ ಎಚ್.ಸಿ.ಮಹದೇವಪ್ಪರವರ ಮೇಲೆ ತೀವ್ರ ಒತ್ತಡ ಹಾಕಿದೆ. ಸಚಿವರೇನಾದರೂ ಈ ಒತ್ತಡಕ್ಕೆ ಮಣಿದರೆ ಬಿ.ಎಸ್.ಬಾಲಕೃಷ್ಣರವರ ವರ್ಗಾವಣೆ ಆದೇಶ ಇಷ್ಟರಲ್ಲಿಯೇ ಹೊರಬೀಳುವುದು ನಿಶ್ಚಿತವೆಂದು ಪಿಡಬ್ಲುಡಿ ಇಲಾಖೆಯ ಉನ್ನತ ಮೂಲಗಳು ಮಾಹಿತಿ ನೀಡಿವೆ. ಅಕ್ರಮಗಳಿಗೆ ಕಡಿವಾಣ:ಜಿ
ಲ್ಲೆಯಲ್ಲಿ ಅಕ್ರಮ ಮರಳು ದಂಧೆ ಹಲವು ವರ್ಷಗಳಿಂದ ಎಗ್ಗಿಲ್ಲದೆ ನಡೆದುಕೊಂಡು ಬಂದಿದೆ. ಇದು ಬಹುಕೋಟಿ ರೂ.ಗಳ ಭಾರೀ ದೊಡ್ಡ ವ್ಯವಹಾರವಾಗಿದ್ದು, ನದಿ ಪಾತ್ರಗಳಿಂದ ಮರಳು ಸಂಗ್ರಹ ತನಕ ವಿತರಣೆ, ಸಾಗಣೆಯಲ್ಲಿ ಭಾರೀ ಗೋಲ್‌ಮಾಲ್ ನಡೆದುಕೊಂಡು ಬರುತ್ತಿತ್ತು. ನೀತಿ-ನಿಯಮ ಉಲ್ಲಂಘಿಸಿ ಮರಳು ಲೂಟಿ ಮಾಡಲಾಗುತ್ತಿತ್ತು. ಈ ಅವ್ಯವಹಾರಗಳಿಗೆ ಪಿಡಬ್ಲುಡಿ ಇಲಾಖೆಯ ಕೆಲ ಅಧಿಕಾರಿಗಳು ಬೆಂಗಾವಲಾಗಿ ನಿಂತಿದ್ದರೆಂಬ ಮಾತುಗಳು ಕೂಡ ಸಾ
ರ್ವಜನಿಕ ವಲಯದಿಂದ ಕೇಳಿಬಂದಿತ್ತು. ಯಾರೂ ನಿಯಂತ್ರಣ ಮಾಡದ ಮಟ್ಟಕ್ಕೆ ಮರಳು ದಂಧೆ ಜಿಲ್ಲೆಯಲ್ಲಿ ಬೆಳೆದು ಇಡೀ ಆಡಳಿತ ವ್ಯವಸ್ಥೆ ನಿಯಂತ್ರಣ ಮಾಡುವ ಮಟ್ಟಕ್ಕೆ ದಂಧೆಕೋರರು ಬೆಳೆದು ನಿಂತಿದ್ದರು. ಬಿ.ಎಸ್.ಬಾಲಕೃಷ್ಣರವರು ಶಿವಮೊಗ್ಗ ವೃತ್ತದ ಅಧೀಕ್ಷಕ ಇಂಜಿನಿಯರ್ ಆಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ಜಿಲ್ಲೆಯಲ್ಲಿ ನಿಯಮಬಾಹಿರವಾಗಿ ನಡೆಯುತ್ತಿದ್ದ ಮರಳು ದಂಧೆಗೆ ಕಡಿವಾಣ ಹಾಕಲು ಕ್ರಮಕೈಗೊಂಡರು. ಮರಳು ಮಾಫಿಯಾದ ವಿರುದ್ಧ್ದ ಅಕ್ಷರಶಃ ಸಮರ ಸಾರಿದರು. ಯಾವುದೇ ಒತ್ತಡಕ್ಕೆ ಮಣಿಯಲಿಲ್ಲ. ದಂಧೆಕೋರರ ಅವ್ಯವಹಾರಗಳಿಗೆ ಬೆಂಗಾವಲಾಗಿ ನಿಂತಿದ್ದ ಇಲಾಖೆಯ ಕೆಲ ಅಧಿಕಾರಿ-ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಜರಗಿಸಿದರು. ಹಲವರನ್ನು ಅಮಾನತು ಗೊಳಿಸಿದರು. ವರ್ಗಾವಣೆ ಮಾಡಲು ಒತ್ತಡ: ಬಿ.ಎಸ್.ಬಾಲಕೃಷ್ಣರವರ ಈ ಎಲ್ಲ ಕ್ರಮಗಳಿಂದ ಪ್ರಸ್ತುತ ಜಿಲ್ಲೆಯಲ್ಲಿ ಅವ್ಯಾಹತವಾಗಿ ಬೆಳೆದು ನಿಂತಿದ್ದ ಮರಳು ಮಾಫಿಯಾವು ಕ್ರಮೇಣ ತನ್ನ ಅಸ್ತಿತ್ವ ಕಳೆದುಕೊಳ್ಳಲಾರಂಭಿಸಿದೆ. ಇದರಿಂದ ಕಂಗೆಟ್ಟಿರುವ ಮರಳು ಮಾಫಿಯಾದವರು ಬಿ.ಎಸ್.ಬಾಲಕೃಷ್ಣರವರನ್ನು ಶಿವಮೊಗ್ಗ ವೃತ್ತದಿಂದ ಎತ್ತಂಗಡಿ ಮಾಡುವ ಪ್ರಯತ್ನ ನಡೆಸುತ್ತಿದ್ದಾರೆ. ಪ್ರಭಾವಿ ರಾಜಕಾರಣಿಗಳ ಮೂಲಕ ಲೋಕೋಪಯೋಗಿ ಇಲಾಖೆ ಸಚಿವರ ಮೇಲೆ ಪ್ರಭಾವ ಬೀರುವ ಕೆಲಸ ನಡೆಯ ುತ್ತಿದೆ. ಶತಾಯಗತಾಯ ಬಿ.ಎಸ್.ಬಾಲಕೃಷ್ಣರವರನ್ನು ವರ್ಗಾವಣೆ ಮಾಡಿಯೇ ತೀರುವುದಾಗಿ ಮರಳು ಮಾಫಿಯಾದವರು ಹೇಳಿಕೊಂಡು ಓಡಾಡುತ್ತಿದ್ದು, ಇವರಿಗೆ ಪಿಡಬ್ಲುಡಿ ಇಲಾಖೆಯ ಕೆಲ ಭ್ರಷ್ಟ ಅಧಿಕಾರಿಗಳು ಸಹಕಾರ ನೀಡುತ್ತಿದ್ದಾರೆಂಬ ಮಾಹಿತಿ ಹರಿದಾಡುತ್ತಿದೆ. ಒಟ್ಟಾರೆ ಮರಳು ವಿತರಣೆಯಲ್ಲಿ ಪಾರದರ್ಶಕತೆ ತಂದು, ಅವ್ಯವಹಾರಗಳಿಗೆ ಕಡಿವಾಣ ಹಾಕಿ ಇಡೀ ರಾಜ್ಯದ ಗಮನ ಸೆಳೆದಿರುವ ದಕ್ಷ ಅಧಿಕಾರಿ ಬಿ.ಎಸ್.ಬಾಲಕೃಷ್ಣ ಎತ್ತಂಗಡಿಗೆ ಸದ್ದುಗದ್ದಲವಿಲ್ಲದೆ ಸನ್ನಾಹ ನಡೆಸಲಾಗುತ್ತಿರುವುದಂತೂ ಸತ್ಯವಾಗಿದೆ. ಲೋಕೋಪಯೊೀಗಿ ಸಚಿವರು ಯಾವ ಕ್ರಮಕೈಗೊಳ್ಳುತ್ತಾರೆ ಎಂಬುವುದನ್ನು ಇನ್ನಷ್ಟೇ ಕಾದು ನೋಡಬೇಕಾಗಿದೆ.
ಪಿಡಬ್ಲುಡಿ ಇಲಾಖೆ ಸಚಿವರೇ ಹೊಗಳಿದ್ದರು: ಕಳಪೆ ಗುಣಮಟ್ಟದ ಕಾಮಗಾರಿ ತಡೆಗೆ ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ಗುಣಮಟ್ಟ ವಿಭಾಗ ಸ್ಥಾಪನೆ ಮಾಡಿದ್ದರು. ಪ್ರತ್ಯೇಕ ಅಧಿಕಾರಿ-ಸಿಬ್ಬಂದಿ ನಿಯೋಜಿ ಸಿದ್ದರು. ಬಿ.ಎಸ್.ಬಾಲಕೃಷ್ಣರವರ ಈ ಕ್ರಮಕ್ಕೆ ಪಿಡಬ್ಲುಡಿ ಇಲಾಖೆ ಸಚಿವ ಎಚ್.ಸಿ.ಮಹದೇವಪ್ಪರವರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಬಿ.ಎಸ್.ಬಾಲಕೃಷ್ಣರವರ ಕಾರ್ಯವೈಖರಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದರು. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಗುಣಮಟ್ಟ ವಿಭಾಗ ಅಸ್ತಿತ್ವಕ್ಕೆ ತರಲು ಕ್ರಮಕೈಗೊಳ್ಳುವುದಾಗಿ ಪ್ರಕಟಿಸಿದ್ದರು.









