ಚುಟುಕು ಸುದ್ದಿಗಳು
ಅನುದಾನ ಬಿಡುಗಡೆಗೆ ಸದಸ್ಯರ ಶ್ಲಾಘನೆ
ಕಾರ್ಕಳ, ಎ.10: ಪ್ರವಾಸೋದ್ಯಮ ಇಲಾಖೆಯ ಮೂಲಕ ನಬಾರ್ಡ್ ಯೋಜನೆಯಡಿ ಆನೆಕೆರೆಯಿಂದ ಹಿರಿಯಂಗಡಿ ಬಸದಿಯ ರಸ್ತೆ ಅಭಿವೃದ್ಧಿಗೆ 1.20 ಕೋಟಿ ರೂ. ಅನುದಾನವನ್ನು ಬಿಡುಗಡೆಗೊಳಿಸಿದ ಮುಖ್ಯಮಂತ್ರಿ, ಪ್ರವಾಸೋದ್ಯಮ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸಹಕರಿಸಿದ ಮಾಜಿ ಶಾಸಕ ಗೋಪಾಲ ಭಂಡಾರಿಗೆ ಪುರಸಭೆ ನಾಮನಿರ್ದೇಶಕ ಸದಸ್ಯರಾದ ವಿವೇಕಾನಂದ ಶೆಣೈ, ಪ್ರತಿಮಾ ಮೋಹನ್, ಸುನೀಲ್ ಕೋಟ್ಯಾನ್, ಮತ್ತು ಪ್ರಭಾ ಅಭಿನಂದಿಸಿದ್ದಾರೆ.
ಒಡಿಯೂರು ಗ್ರಾಮವಿಕಾಸ ಯೋಜನೆಯ ವಾರ್ಷಿಕೋತ್ಸವ
ಪುತ್ತೂರು, ಎ.10: ಪ್ರತಿಯೊಬ್ಬರೂ ಅವರವರ ಧರ್ಮದ ಕುರಿತು ತಿಳುವಳಿಕೆಯುಳ್ಳವರಾಗಬೇಕು. ಸಂಪತ್ತನ್ನು ಸದ್ಬಳಕೆ ಮಾಡಿಕೊಳ್ಳಲು ಧರ್ಮದ ಅರಿವು ಅಗತ್ಯ ಎಂದು ಒಡಿಯೂರು ಶ್ರೀ ಗುರು ದೇವಾನಂದ ಸ್ವಾಮೀಜಿ ಹೇಳಿದರು.
ಪರ್ಪುಂಜ ಸರಕಾರಿ ಹಿ.ಪ್ರಾ. ಶಾಲೆಯಲ್ಲಿ ಒಡಿಯೂರು ಶ್ರೀ ಗುರುದೇವ ಗ್ರಾಮ ವಿಕಾಸ ಯೋಜನೆಯ ಪರ್ಪುಂಜ ಘಟಕದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಒಳಮೊಗ್ರು ಗ್ರಾಪಂ ಅಧ್ಯಕ್ಷ ಯತಿರಾಜ್ ರೈ ನೀರ್ಪಾಡಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ತಾಪಂ ಅಧ್ಯಕ್ಷ ಮುಹಮ್ಮದ್ ಬಡಗನ್ನೂರು, ಯೋಜನೆಯ ಸಂಚಾಲಕ ತಾರನಾಥ ಕೊಟ್ಟಾರಿ, ರಾಮಜಾಲು ಬ್ರಹ್ಮಬೈದರ್ಕಗಳ ಗರಡಿ ಆಡಳಿತ ಮೊಕ್ತೇಸರ ಸಂಜೀವ ಪೂಜಾರಿ ಕೂರೇಲು, ಎಪಿಎಂಸಿ ಮಾಜಿ ಅಧ್ಯಕ್ಷ ಬೂಡಿಯಾರು ರಾಧಾಕೃಷ್ಣ ರೈ, ಪರ್ಪುಂಜ ಶಾಲಾ ಸಹ ಶಿಕ್ಷಕ ಅಶ್ರಫ್, ಪುತ್ತೂರು ವಕೀಲರ ಸಂಘದ ಅಧ್ಯಕ್ಷ ದುರ್ಗಾಪ್ರಸಾದ್ ರೈ ಕುಂಬ್ರ ಸಂದರ್ಭೋಚಿತವಾಗಿ ಮಾತನಾಡಿದರು.
ಪರ್ಪುಂಜ ಹಾಲು ಉತ್ಪಾದಕರ ಸಂಘದ ಸ್ಥಾಪಕಾಧ್ಯಕ್ಷ ನಾರಾಯಣ ರೈ ಬಾರಿಕೆ, ಆರ್ಯಾಪು ಗ್ರಾಪಂ ಅಧ್ಯಕ್ಷೆ ಗೀತಾ, ಪರ್ಪುಂಜ ಸ್ನೇಹ ಯುವಕಮಂಡಲದ ಅಧ್ಯಕ್ಷ ಪ್ರೇಮ್‌ರಾಜ್ ರೈ, ಪರ್ಪುಂಜ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ರಾಜೇಶ್ ರೈ ಪರ್ಪುಂಜ, ಸ್ನೇಹ ಮಹಿಳಾ ಮಂಡಲದ ಅಧ್ಯಕ್ಷ ಪ್ರಮೀಳಾ ಟಿ, ಗುರುಸೇವಾ ಬಳಗದ ಗೌರವಾಧ್ಯಕ್ಷ ದೇವಪ್ಪನೋಂಡ ಪುತ್ತೂರು, ಒಡಿಯೂರು ವಜ್ರಮಾತಾ ಮಹಿಳಾ ಪುತ್ತೂರು ಘಟಕದ ಅಧ್ಯಕ್ಷೆ ನಯನಾ ರೈ ಉಪಸ್ಥಿತರಿದ್ದರು.
ಪರ್ಪುಂಜ ಘಟಕದ ತುಳಸಿ ವರದಿ ವಾಚಿಸಿದರು. ಶಶಿ ಸ್ವಾಗತಿಸಿದರು. ಉಪಾಧ್ಯಕ್ಷ ತಿಮ್ಮಪ್ಪಗೌಡ ಡಿಂಬ್ರಿ ವಂದಿಸಿದರು. ಕಾರ್ಯದರ್ಶಿ ಬದ್ರುನ್ನಿಸಾ ಕಾರ್ಯಕ್ರಮ ನಿರೂಪಿಸಿದರು.
ಆಮಂತ್ರಣ ಪತ್ರಿಕೆ ಬಿಡುಗಡೆ
ಬೆಳ್ತಂಗಡಿ, ಎ.10: ಮಾಳವ ಯಾನೆ ಮಲ್ಲವ ಸಮಾಜಾಭ್ಯುದಯ ಸಂಘ ಬೆಳ್ತಂಗಡಿ ತಾಲೂಕು ವತಿಯಿಂದ 20ನೆ ವರ್ಷದ ಮಲ್ಲವ ಸಮಾಜೋತ್ಸವ, ಮಲ್ಲವ ಸಭಾಭವನ ಶಿಲಾನ್ಯಾಸ ಹಾಗೂ ಸಾಮೂಹಿಕ ಸತ್ಯನಾರಾಯಣ ಪೂಜೆ ಮಡಂತ್ಯಾರು ಗಾಣದಕೊಟ್ಯ ಶ್ರೀ ಮಹಾಕಾಳಿ ದೇವಸ್ಥಾನ ವಠಾರದಲ್ಲಿ ಮೇ 8ರಂದು ನಡೆಯಲಿರುವ ಆಮಂತ್ರಣ ಪತ್ರಿಕೆಯನ್ನು ಕವಲೇದುರ್ಗದ ಕೆಳದಿ ಸಂಸ್ಥಾನ ರಾಜಗುರು ಮಹಾಪತ್ತಿನ ಭುವನಗಿರಿ ಸಂಸ್ಥಾನ ಮಠಾಧ್ಯಕ್ಷ ಡಾ. ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿ ಕವಲೇದುರ್ಗ ಮಠದಲ್ಲಿ ಬಿಡುಗಡೆಗೊಳಿಸಿದರು. ಈ ಸಂದರ್ಭ ಸಂಘದ ಅಧ್ಯಕ್ಷ ಶಿವಶಂಕರ, ಕಾರ್ಯದರ್ಶಿ ಮೋನಪ್ಪ, ಕೋಶಾಧಿಕಾರಿ ಸತೀಶ್‌ರಾಜ್ ಉಪಸ್ಥಿತರಿದ್ದರು.
ಎ.14ರಿಂದ ಇಸ್ಲಾಮಿಕ್ ಬೇಸಿಗೆ ರಜಾದಿನ ಶಿಬಿರ
ಉಳ್ಳಾಲ, ಎ.10: ಸುನ್ನಿ ಬಾಲ ಸಂಘ, ಎಸ್‌ಬಿಎಸ್ ಉಳ್ಳಾಲ ವಲಯ ವತಿಯಿಂದ ಇಸ್ಲಾಮಿಕ್ ಬೇಸಿಗೆ ರಜಾದಿನ ಶಿಬಿರ ಎ.14ರಿಂದ 25ರ ತನಕ ಉಳ್ಳಾಲ ಮತ್ತು ತೊಕ್ಕೊಟ್ಟು ವಲಯಗಳಲ್ಲಿ ಏರಿಯಾಗಳಲ್ಲಿ ನಡೆಯಲಿದೆ. ಮಕ್ಕಳ ಮನಸ್ಸಿನಲ್ಲಿ ಪ್ರವಾದಿ ಪ್ರೇಮ ಮೂಡಿಸಲು ಮತ್ತವರ ಆದರ್ಶ ಬದುಕಿನ ಕುರಿತ ಸಂಕ್ಷಿಪ್ತ ವಿಷಯಗಳ ಕುರಿತು ತರಬೇತಿ ನೀಡಲಾಗುವುದು. ಪವಿತ್ರ ಕುರ್‌ಆನ್ ಬೇಸಿಕ್ ಸ್ಟಡಿ, ಈಜು, ಸ್ವರಕ್ಷಣೆ ತರಬೇತಿ, ಇಸ್ಲಾಮಿಕ್ ಥಿಯೇಟರ್ ಮತ್ತು ಮಕ್ಕಳ ಮನಸ್ಸಲ್ಲಿ ಸುಪ್ತವಾಗಿರುವ ಪ್ರತಿಭೆಗಳನ್ನು ಹೊರತರುವ ನಿಟ್ಟಿನಲ್ಲಿ ಉರ್ದು ಮುಖಾಬಲಾ, ಕರಾಟೆ, ತಾಲೀಮು, ಇಂಜಿನಿಯರಿಂಗ್ ಮತ್ತು ಮೆಡಿಕಲ್ ಕ್ರಿಯೇಟಿವ್ ಥಿಂಕಿಂಗ್ ತರಗತಿಗಳು ವಿಶೇಷ ಪ್ರಾತ್ಯಕ್ಷಿಕೆಗಳ ಮೂಲಕ ನಡೆಯಲಿದೆ.
8 ವರ್ಷದಿಂದ 15 ವರ್ಷವರೆಗಿನ ವಿದ್ಯಾರ್ಥಿಗಳಿಗೆ ವಿವಿಧ ಗುಂಪುಗಳಲ್ಲಿ ಬೆಳಗ್ಗೆ 9 ರಿಂದ ಮಧಾಹ್ನ 2ರ ತನಕ ನಡೆಯಲಿದೆ. ಒಳಾಂಗಣ ಕ್ರೀಡಾ ಚಟುವಟಿಕೆಗಳು ಮತ್ತು ಮಹಾತ್ಮರ ಸಂದರ್ಶನ ಶಿಬಿರದ ಪ್ರಮುಖ ಆಕರ್ಷಣೆಗಳಾಗಿವೆ. ಆಸಕ್ತ ವಿದ್ಯಾರ್ಥಿಗಳು ಎ.10 ರಿಂದ 14ರವರೆಗೆ ಸಂಘಟನೆಯ ಕಾರ್ಯಾಲಯದಲ್ಲಿ (ಮೊ.ಸಂ.7411713394, 9071063879)ಸಂಪರ್ಕಿಸಬಹುದು.
ಎ.12-17: ಮಕ್ಕಳ ಬೇಸಿಗೆ ಶಿಬಿರ
ಸುಳ್ಯ, ಎ.10: ಸುಳ್ಯದ ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನ ವತಿಯಿಂದ 'ಸಂಸ್ಕಾರವಾಹಿನಿ' ಮಕ್ಕಳ ಬೇಸಿಗೆ ಶಿಬಿರವು ಅಡ್ಕಾರು ಅಂಜನಾದ್ರಿ ಶ್ರೀ ಪ್ರಸನ್ನ ಆಂಜನೇಯ ಕ್ಷೇತ್ರದಲ್ಲಿ ಎ.12ರಿಂದ 17ರ ತನಕ ನಡೆಯಲಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಪುರೋಹಿತ ನಾಗರಾಜ ಭಟ್ ತಿಳಿಸಿದ್ದಾರೆ.
ಡಿ.16-17: ಬಳ್ಕುಂಜೆ ಸಂತ ಪೌಲ್ ಪ್ರಾಥಮಿಕ ಶಾಲೆಯ ಶತಮಾನೋತ್ಸವ
ಕಿನ್ನಿಗೋಳಿ, ಎ.10: ಬಳ್ಕುಂಜೆ ಸಂತ ಪೌಲ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಮಾರಂಭವು ಡಿ.16 ಮತ್ತು 17ರಂದು ನಡೆಯಲಿದೆ. ಇದರಂಗವಾಗಿ ಹಲವು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದ್ದು, ವಿವಿಧ ಸಮಿತಿಗಳನ್ನು ರಚಿಸಲಾಗಿದೆ ಎಂದು ಶಾಲಾ ಸಮಿತಿಯ ಕೋಶಾಧಿಕಾರಿ ನೆಲ್ಸನ್ ಲೋಬೊ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.
ರೆ. ಫಾ.ಇಮ್ಯಾನುವೆಲ್ ರೆಬೆಲ್ಲೊ ಸಂಚಾಲಕತ್ವದಲ್ಲಿ 1916 ಸೆ.1ರಂದು ಆರಂಭಗೊಂಡ ಸಂತ ಪೌಲ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಇದೀಗ ಶತಮಾನೋತ್ಸವದ ಸಂಭ್ರಮದಲ್ಲಿದೆ. ಈ ಹಿನ್ನೆಲೆಯಲ್ಲಿ ಗೌರವ ಶಿಕ್ಷಕರಿಗೆ 30 ಲಕ್ಷ ರೂ. ಮೊತ್ತದ ಸಂಭಾವನಾ ನಿಧಿ ಸ್ಥಾಪನೆ, 25 ಲಕ್ಷ ರೂ. ವೆಚ್ಚದಲ್ಲಿ ಶಾಲಾ ಕಟ್ಟಡ ದುರಸ್ತಿ, ತಲಾ 5 ಲಕ್ಷ ರೂ. ವೆಚ್ಚಗಳಲ್ಲಿ ಶೌಚಾಲಯ ಮತ್ತು ನೀರಿನ ಸೌಲಭ್ಯ ಅಭಿವೃದ್ಧಿ ಮತ್ತು ತಲಾ 3 ಲಕ್ಷ ರೂ. ವೆಚ್ಚದಲ್ಲಿ ಕಂಪ್ಯೂಟರ್ ಸಿಸಿಟಿವಿ ಕ್ಯಾಮರಾ ಹಾಗೂ ಸ್ಮರಣ ಸಂಚಿಕೆಗಳಿಗಾಗಿ ವ್ಯಯಿಸಲು ತೀರ್ಮಾನಿಸಲಾಗಿದೆ ಎಂದು ಅವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಶಾಲಾ ಸಂಚಾಲಕ ಫಾ. ಮೈಕಲ್ ಡಿಸಿಲ್ವ, ಅಧ್ಯಕ್ಷ ಡೆನಿಸ್ ಡಿಸೋಜ, ಉದಯ ರಾವ್, ದಿನಕರ ಶೆಟ್ಟಿ, ಮುಖ್ಯ ಶಿಕ್ಷಕಿ ಭಗಿನಿ ಹಿಲ್ಡಾ ಡಿಸೋಜ, ಕರುಣಾಕರ ಶೆಟ್ಟಿ, ಲೂಯಿಸ್ ಡಿಸೋಜ, ಹೆಲನ್ ಡಿಸೋಜ, ಸುಕುಮಾರ್, ಸಾವಿತ್ರಿ, ವೇದ, ರೇಷ್ಮಾ ಮತ್ತಿತರರಿದ್ದರು.
ಎ.21ರಂದು ಜ್ಞಾನಮಂದಿರ ಲೋಕಾರ್ಪಣೆ
ಬಂಟ್ವಾಳ, ಎ.10: ತಾಲೂಕಿನ ಸಜಿಪಮೂಡ ಗ್ರಾಮದ ಸುಭಾಶ್ ನಗರದಲ್ಲಿ ನಿರ್ಮಾಣ ಗೊಳ್ಳುತ್ತಿರುವ 'ಬ್ರಹ್ಮಶ್ರೀ ನಾರಾಯಣಗುರು ಜ್ಞಾನಮಂದಿರ'ವು ಎ.21 ರಂದು ಲೋಕಾರ್ಪ ಣೆಗೊಳ್ಳಲಿದೆ ಎಂದು ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಅಧ್ಯಕ್ಷ ಕೆ.ಸಂಜೀವ ಪೂಜಾರಿ ಹೇಳಿದರು. ಇತ್ತೀಚೆಗೆ ಈ ಬಗ್ಗೆ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಎ.20ರಂದು ಮೆಲ್ಕಾರ್ ಬಿರ್ವ ಸೆಂಟರ್ ಬಳಿಯಿಂದ ಹಸಿರು ಹೊರೆಕಾಣಿಕೆ ಮೆರವಣಿಗೆ ಮತ್ತು ಬ್ರಹ್ಮಶ್ರೀ ನಾರಾಯಣ ಗುರುಗಳ ಪಂಚಲೋಹದ ವಿಗ್ರಹ ಶೋಭಾ ಯಾತ್ರೆ ನಡೆಯಲಿದೆ. ಎ.21ರಂದು ಬೆಳಗ್ಗೆ ಬ್ರಹ್ಮಶ್ರೀ ನಾರಾಯಣ ಗುರುಗಳ ಮೂರ್ತಿ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುಮಂದಿರ ಲೋಕಾರ್ಪಣೆಗೊಳಿಸುವರು ಎಂದರು. ಪ್ರಮುಖರಾದ ಕೆ.ಹರಿಕೃಷ್ಣ ಬಂಟ್ವಾಳ್, ಬೇಬಿ ಕುಂದರ್, ಭುವನೇಶ್ ಪಚ್ಚಿನಡ್ಕ, ಪ್ರೇಮನಾಥ್, ಪ್ರಕಾಶ್ ಅಂಚನ್, ಮಹಾಬಲ ರೈ, ಎಂ.ಪರಮೇಶ್ವರ, ಸೀತಾರಾಮ ರೈ, ಯಶವಂತ ಪೂಜಾರಿ, ಚಂದ್ರಹಾಸ ಪೂಜಾರಿ, ಜಯಶಂಕರ ಪೆರ್ವ ರಮೇಶ್ ಅನ್ನಪ್ಪಾಡಿ, ಲೋಕೇಶ್ ಪೂಜಾರಿ, ಶಂಕರ ಯಾನೆ ಕೋಚ ಪೂಜಾರಿ, ರವಿ ಪೂಜಾರಿ, ವಾಸುದೇವ ಪೂಜಾರಿ, ಲೋಕನಾಥ ಪೂಜಾರಿ, ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.
ಗಿರೀಶ್ ಕುಮಾರ್ ಪೆರ್ವ ಸ್ವಾಗತಿಸಿದರು. ರತ್ನಾಕರ ಪೂಜಾರಿ ನಾಡಾರು ವಂದಿಸಿದರು.
'ವ್ಯವಹಾರದ ಶ್ರೇಷ್ಠತೆಗೆ ಪ್ರತಿಭೆಯ ಪೋಷಣೆ'
ಎ.12, 13ರಂದು ರಾಷ್ಟ್ರೀಯ ಅಧಿವೇಶನ
ಮಂಗಳೂರು, ಎ. 10: ಸ್ಕೂಲ್ ಆಫ್ ಸೋಶಿಯಲ್ ವರ್ಕ್ ರೋಶನಿ ನಿಲಯದಲ್ಲಿ ಎ.12 ಮತ್ತು 13ರಂದು 'ವ್ಯವಹಾರದ ಶ್ರೇಷ್ಠತೆಗೆ ಪ್ರತಿಭೆಯ ಪೋಷಣೆ' ಕುರಿತಾಗಿ ಎರಡು ದಿನದ ರಾಷ್ಟ್ರೀಯ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ.
ಎಚ್. ಆರ್. ವೃತ್ತಿಪರರಿಗೆ ಜ್ಞಾನ ಹೆಚ್ಚಿಸುವ ಸಲುವಾಗಿ, ಪ್ರತಿಭೆಯ ಬಳಕೆಯ ಬಗ್ಗೆ ಕಾಳಜಿ ಮೂಡಿಸಲು ಹಾಗೂ ಅದರ ಉದಯೋನ್ಮುಖ ಸಮಸ್ಯೆಗಳ ಬಗ್ಗೆ ಚರ್ಚಿಸಲು ಈ ಅಧಿವೇಶವನ್ನು ಆಯೋಜಿಸಲಾಗಿದೆ.
ಎ.12ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾಧಿಕಾರಿ ಎ. ಬಿ. ಇಬ್ರಾಹೀಂ ಅಧಿವೇಶ ನವನ್ನು ಉದ್ಘಾಟಿಸಲಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದ ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ಡಾ. ಪಿ. ಎಸ್. ಯಡಪಡಿತ್ತಾಯ ಮಾತನಾಡಲಿದ್ದಾರೆ. ಸಂಸ್ಥೆಯ ನಿರ್ದೇಶಕಿ ಡಾ.ಫಿಲೋಮಿನ ಡಿಸೋಜ ಅಧ್ಯಕ್ಷತೆ ವಹಿಸಲಿದ್ದಾರೆ.
ಸಮಾರೋಪ ಸಮಾರಂಭವು ಎ.13ರಂದು ಸಂಜೆ 3:45ಕ್ಕೆ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಎಂ.ಆರ್.ಪಿ.ಎಲ್.ಆಡಳಿತ ವಿಭಾಗದ ನಿವೃತ್ತ ಪ್ರಧಾನ ವ್ಯವಸ್ಥಾಪಕ ಪಿ.ಎ.ಜೋಸ್, ರೋಶನಿ ಅಲುಮ್ನಿ ಅಸೋಸಿಯೇಶನ್ ಮಂಗಳೂರು ವಿಭಾಗದ ಅಧ್ಯಕ್ಷ ಸ್ಟೀವನ್ ಪಿಂಟೊ ಭಾಗವಹಿಸಲಿದ್ದಾರೆ. ಸಂಸ್ಥೆಯ ನಿವೃತ್ತ ಪ್ರಾಂಶುಪಾಲೆ ಫಿಲೋಮಿನ ಸೆರಾವೊ ಅಧ್ಯಕ್ಷತೆ ವಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
ಸುಳ್ಯ: ಬೇಸಿಗೆ ತರಬೇತಿ ಶಿಬಿರ
ಸುಳ್ಯ, ಎ.10: ಸುಳ್ಯದ ಸ್ನೇಹ ಶಾಲೆಯಲ್ಲಿ ಬೇಸಿಗೆ ಶಿಬಿರಕ್ಕೆ ಕ್ಷೇತ್ರ ಸಮನ್ವಯಾಧಿಕಾರಿ ಎಂ.ಟಿ.ವೀಣಾ ಚಾಲನೆ ನೀಡಿದರು ಸಂಸ್ಥೆಯ ಅಧ್ಯಕ್ಷ ಡಾ.ಚಂದ್ರಶೇಖರ ದಾಮ್ಲೆ ಅಧ್ಯಕ್ಷತೆ ವಹಿಸಿದ್ದರು.
ಯೋಗಪಟು ಪುರುಷೋತ್ತಮ ದೇರಾಜೆ ಯನ್ನು ಸನ್ಮಾನಿಸಲಾಯಿತು. ಮುಖ್ಯ ಶಿಕ್ಷಕಿ ಜಯಲಕ್ಷ್ಮೀ ದಾಮ್ಲೆ ಸ್ವಾಗತಿಸಿದರು. ರಘುರಾಮ ದೊಡ್ಡತೋಟ ವಂದಿಸಿದರು. ಪ್ರಸನ್ನ ಐವರ್ನಾಡು ಪ್ರಾಸ್ತಾವಿಕವಾಗಿ ಮಾತನಾಡಿದರು.
ತೀಯಾ ಸಮಾಜದ ವಾರ್ಷಿಕ ಕ್ರೀಡೋತ್ಸವ
ದುಬೈ, ಎ.10: ಇಲ್ಲಿನ ತೀಯಾ ಸಮಾಜದ ವಾರ್ಷಿಕ ಕ್ರೀಡೋತ್ಸವವು ಇತ್ತೀಚೆಗೆ ಜಬೀಲ್ ಪಾರ್ಕ್ ಗ್ರೌಂಡ್‌ನಲ್ಲಿ ನಡೆಯಿತು. ಅಧ್ಯಕ್ಷ ಮನೀಶ್ ಕರ್ಕೇರ, ವೆಂಕಪ್ಪಉಳ್ಳಾಲ್ ಮಾತನಾಡಿದರು. ಲಕ್ಕಿಡಿಪ್‌ನ ಅದೃಷ್ಟ ಬಹುಮಾನವಾದ ಚಿನ್ನದ ಬಿಸ್ಕೆಟನ್ನು ಸಾನ್ವಿ ಕಿರಣ್ ಪಡೆದರು. ಸಮಾಜದ ಉಪಾಧ್ಯಕ್ಷ ಧರ್ಮೇಂದ್ರ ಬಂಗೇರ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಪ್ರೇಮ್ ಜೀತ್ ವಂದಿಸಿದರು.
ಪ್ರಥಮ ಚಿಕಿತ್ಸೆ ಬಗ್ಗೆ ಮಾಹಿತಿ ಶಿಬಿರ
ಮಂಗಳೂರು, ಎ.10: ಸ್ವಾಮಿ ಸದಾನಂದ ಸರಸ್ವತಿ ಆಂಗ್ಲಮಾಧ್ಯಮ ಪ್ರೌಢಶಾಲೆ ಹಾಗೂ ಶ್ರೀ ಭಾರತಿ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ನಡೆಯುತ್ತಿರುವ ಬೇಸಿಗೆ ರಜಾ ಶಿಬಿರದ ಅಂಗವಾಗಿ ಪ್ರಥಮ ಚಿಕಿತ್ಸೆಯ ಬಗ್ಗೆ ಮಾಹಿತಿ ಕಾರ್ಯಕ್ರಮ ನಡೆಯಿತು.
ಹೋಮ್ ಗಾರ್ಡ್ ಕಮಾಂಡೆಂಟ್ ಡಾ.ಮುರಳಿ ಮೋಹನ ಚೂಂತಾರ್ ಶಿಬಿರಾರ್ಥಿಗಳಿಗೆ ಬೆಂಕಿ, ನೀರು ಹಾಗೂ ಪ್ರಕೃತಿ ವಿಕೋಪಗಳಾದಾಗ ನೀಡಬೇಕಾದ ಪ್ರಥಮ ಚಿಕಿತ್ಸೆಯ ಬಗ್ಗೆ ಮಾಹಿತಿ ನೀಡಿದರು.
ಡೆಪ್ಯೂಟಿ ಹೋಮ್ ಗಾರ್ಡ್ ಕಮಾಂಡೆಂಟ್ ರಮೇಶ್ ಅಪಘಾತ ಸಂದರ್ಭ ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆಯನ್ನು ಹೇಗೆ ಮಾಡಬೇಕು? ನೀರಿನಲ್ಲಿ ಬಿದ್ದಾಗ ಯಾವ ರೀತಿ, ಬೆಂಕಿ ಆಕಸ್ಮಿಕದಲ್ಲಿ ಯಾವ ಯಾವ ಚಿಕಿತ್ಸೆ ಮಾಡಬೇಕು ಹಾಗೂ ಸುರಕ್ಷಾ ಕ್ರಮವಹಿಸಬೇಕು ಎನ್ನುವುದನ್ನು ಪ್ರಾತ್ಯಕ್ಷಿಕೆಯ ಮೂಲಕ ವಿವರಿಸಿದರು.
ಪ್ರಾಧ್ಯಾಪಕ ಅನಂತ ಪದಕಣ್ಣಾಯ ಸ್ವಾಗತಿಸಿದರು. ಪ್ರಾಂಶುಪಾಲೆ ವಿದ್ಯಾಭಟ್ ವಂದಿಸಿದರು.
ಪಟ್ಟೋರಿ: ಚೆಕ್ ವಿತರಣೆ
ಕೊಣಾಜೆ, ಎ.10: ಕೊಣಾಜೆ ಗಾಮದ ಪಟ್ಟೋರಿಯ ಶ್ರೀ ಪಟ್ಟೋರಿತ್ತಾಯ, ಪಿಲಿಚಾಮುಂಡಿ ಹಾಗೂ ಪರಿವಾರ ದೈವಗಳ ದೈವಸ್ಥಾನದ ನೂತನ ಗರ್ಭಗುಡಿ ಗೋಪುರದ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ನೀಡಿದ 1 ಲಕ್ಷ ರೂ.ಚೆಕ್ಕನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಂಗಳೂರು ವಿಭಾಗದ ನಿರ್ದೇಶಕ ಸುಧೀರ್ ಕುಮಾರ್ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ರಘುರಾಮ ಕಾಜವ ಪಟ್ಟೋರಿಗೆ ವಿತರಿಸಿದರು.
ಈ ಸಂದರ್ಭ ಜೀರ್ಣೋದ್ಧಾರ ಸಮಿತಿಯ ಶ್ರೀನಿವಾಸ ಕಾಜವ ಪಟ್ಟೋರಿ, ಕೋಶಾಧಿಕಾರಿ ದಿವಾಕರ ಭಂಡಾರಿ, ಸಂಚಾಲಕ ಸಂತೋಷ್ ಕುಮಾರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ಪಟ್ಟೋರಿ, ಕರುಣಾಕರ ಕಾನ, ಯೋಜನಾಧಿಕಾರಿ ರಾಘವ ಎಂ, ಮೇಲ್ವಿಚಾರಕರಾದ ಪ್ರದೀಪ್, ದೇವಕಿ, ಶಿಕ್ಷಕ ಮೋಹನ್ ಶಿರ್ಲಾಲ್, ವಿಶ್ವನಾಥ ಶೆಟ್ಟಿ ಉಪಸ್ಥಿತರಿದ್ದರು.
ಮರ್ಧಾಳ: ಹೊಲಿಗೆ ಯಂತ್ರ ವಿತರಣೆ
ಪುತ್ತೂರು, ಎ.10: ಮರ್ಧಾಳ ತರಬೇತಿ ಕೇಂದ್ರದಲ್ಲಿ 2014-15ನೆ ಸಾಲಿನ ಹೊಲಿಗೆ ತರಬೇತಿ ಪಡೆದು ಉತ್ತೀರ್ಣರಾದ ವಿದ್ಯಾರ್ಥಿನಿಯರಾದ ಮರುವಂತಿಲ ನಿವಾಸಿ ರಝೀನಾ, ಬಸವಪಾಲು ನಿವಾಸಿ ಝೈನಾಬಿಗೆ ಶಾಸಕಿ ಶಕುಂತಳಾ ಶೆಟ್ಟಿ ಹೊಲಿಗೆ ಯಂತ್ರ ವಿತರಿಸಿದರು. ಈ ಸಂದರ್ಭ ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ ಬಾಲಚಂದ್ರ ಕೆ., ಬನ್ನೂರು ಹಿಂ.ವ. ವಸತಿ ನಿಲಯ ಮೇಲ್ವಿಚಾರಕ ಜೋಸೆಫ್, ಯಶೋದಾ, ವಕೀಲ ಪ್ರವೀಣ್ ಕುಮಾರ್ ಉಪಸ್ಥಿತರಿದ್ದರು.
ಮಾಸ್ತಿಕಟ್ಟೆ: ಶಾಲಾ ವಾರ್ಷಿಕೋತ್ಸವ
ಮೂಡುಬಿದಿರೆ, ಎ.10: ಇಲ್ಲಿನ ಮಾಸ್ತಿಕಟ್ಟೆಯ ದ.ಕ. ಜಿಪಂ ಹಿ.ಪ್ರಾ. ಶಾಲೆ ಹಾಗೂ ಶಾಲಾ ಹಳೆ ವಿದ್ಯಾರ್ಥಿ ಸಂಘಗಳ ವಾರ್ಷಿಕೋತ್ಸವ ಇತ್ತೀಚೆಗೆ ನಡೆಯಿತು.
ಪುರಸಭಾ ಅಧ್ಯಕ್ಷೆ ರೂಪಾ ಎಸ್.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯ ಕೆ.ಪಿ ಸುಚರಿತ ಶೆಟ್ಟಿ, ಪುರಸಭಾ ಸದಸ್ಯೆ ಪ್ರೇಮಾ ಸಾಲ್ಯಾನ್, ಛಾಯಾಗ್ರಾಹಕ ದಿವ್ಯವರ್ಮ ಬಲ್ಲಾಳ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ನಾಗೇಶ್, ಪೊಣ್ಣೆಚ್ಚಾರಿಗುತ್ತು ಪೃಥ್ವಿರಾಜ್ ಜೈನ್, ತೋಡಾರು ಬಡಕೋಡಿ ಗುತ್ತುವಿನ ಉಮೇಶ್ ಹೆಗ್ಡೆ, ರಾಜೇಶ್ ನಾಯ್ಕೆ ಮುಖ್ಯ ಅತಿಥಿಗಳಾಗಿದ್ದರು.
ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ಸೆಲ್ವ ಕುಮಾರ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜಗೋಪಾಲ್ ಉಪಸ್ಥಿತರಿದ್ದರು. ಶಾಲೆಯ ಅಭಿವೃದ್ಧಿಗೆ ಸಹಕರಿಸುತ್ತಿರುವ ಹಿರಿಯರಾದ ಎಂ. ಬಾವುದ್ದೀನ್, ಬಿ. ಮೋಹನದಾಸ್ ಶೆಟ್ಟಿ, ಎಂ.ಶೀನ, ರವಿಚಂದ್ರ ಕೃಷ್ಣಗೌಡರನ್ನು ಇತ್ತೀಚೆಗೆ ಸನ್ಮಾನಿಸಲಾಯಿತು. ಎಸ್‌ಡಿಎಂಸಿ ಸದಸ್ಯೆ ಪ್ರಭಾ ಸ್ವಾಗತಿಸಿದರು. ಮುಖ್ಯ ಶಿಕ್ಷಕಿ ನಿರ್ಮಲಾ ವರದಿ ವಾಚಿಸಿದರು. ಮೋಹಿನಿ ಸನ್ಮಾನ ಪತ್ರ ವಾಚಿಸಿದರು. ಸಂಗೀತಾ ಕುಮಾರಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಅನ್ನಪೂರ್ಣೇಶ್ವರಿ ವಂದಿಸಿದರು.
ಸವಣೂರು: ವಾರ್ಷಿಕ ಕ್ರೀಡಾಕೂಟ
ಪುತ್ತೂರು, ಎ.10: ಪ್ರತಿಭೆ ಎಂಬುದು ಒಬ್ಬನ ಸೊತ್ತಲ್ಲ. ಕ್ರೀಡೆಯಲ್ಲಿ ಜಾತಿ, ಮತ ಭೇದವಿಲ್ಲ. ಅದು ಸಾಮರಸ್ಯ ಬೆಸೆಯುವ ವೇದಿಕೆಯಾಗಿದ್ದು, ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮ ಭವಿಷ್ಯ ರೂಪಿಸಿ ಕೊಳ್ಳಬೇಕು ಎಂದು ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಕೆ. ಸೀತಾರಾಮ ರೈ ಹೇಳಿದರು.
ಸವಣೂರಿನ ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ವಾರ್ಷಿಕ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವಾಮದಪದವು ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಕ ರಾಧಾಕೃಷ್ಣ ಎಚ್.ಬಿ. ಕ್ರೀಡಾ ಕೂಟಕ್ಕೆ ಚಾಲನೆ ನೀಡಿದರು. ಕಬಡಿ ಆಟಗಾರ ಮನೋಹರ್ ಮೆದು ಅವರನ್ನು ಸನ್ಮಾನಿಸ ಲಾಯಿತು. ಕಾಲೇಜಿನ ಕ್ರೀಡಾ ಸಂಘದ ಜೊತೆ ಕಾರ್ಯದರ್ಶಿ ರಮ್ಯಾ ಎಚ್. ಆರ್. ಪ್ರಮಾಣವಚನ ಬೋಧಿಸಿದರು. ಕ್ರಿಸ್ಟೋಫರ್ ಜೋಸೆಫ್ ಅತಿಥಿಗಳನ್ನು ಪರಿಚಯಿಸಿದರು. ದಿವ್ಯಾ ಎ.ಸ್ವಾಗತಿಸಿದರು. ಧನ್ಯಾ ಶ್ರೀ ಎಸ್.ಆರ್. ವಂದಿಸಿದರು. ವಿದ್ಯಾ ಎಸ್. ನಿರೂಪಿಸಿದರು.
ಪುತ್ತೂರು: ಪರಿಹಾರ ಚೆಕ್ ವಿತರಣೆ
ಪುತ್ತೂರು, ಎ.10: ಆಕಸ್ಮಿಕ ಮರಣ ಹೊಂದಿದ ರೈತರ ಕುಟುಂಬಕ್ಕೆ ಶಾಸಕಿ ಶಕುಂತಳಾ ಶೆಟ್ಟಿ ತಲಾ 1 ಲಕ್ಷ ರೂ. ಪರಿಹಾರ ಚೆಕ್ ವಿತರಿಸಿದರು. ಮೃತ ದೋಳ್ಪಾಡಿ ಮರಕಡ ಮೋನಪ್ಪಗೌಡರ ಪತ್ನಿ ಸುಂದರಿ, ಮೃತ ರೆಂಜಿಲಾಡಿ ರಾಮಣ್ಣ ಗೌಡರ ಪತ್ನಿ ಸುಶೀಲಾ, ಮೃತ ರಿತೇಶ್ ಕೆಯ್ಯೂರ್‌ರ ತಂದೆ ರಮೇಶ್ ಪರಿಹಾರ ಮೊತ್ತ ಪಡೆದುಕೊಂಡರು. ಈ ಸಂದರ್ಭ ಸಹಾಯಕ ಕೃಷಿ ನಿರ್ದೇಶಕ ನಯೀಮ್ ಹುಸೇನ್, ತಾಂತ್ರಿಕ ಅಧಿಕಾರಿ ಪದ್ಮನಾಭ ಶೆಟ್ಟಿ, ಸಮಾಜ ಕಲ್ಯಾಣ ಅಧಿಕಾರಿ ರಾಮಕೃಷ್ಣ, ಕಾರ್ಯ ನಿರ್ವಹಣಾಧಿಕಾರಿ ಜಗದೀಶ್, ಕೃಷ್ಣಪ್ರಸಾದ್ ಆಳ್ವ, ಸುಧಾಕರ್ ರೈ ಉಪಸ್ಥಿತರಿದ್ದರು







