ಕಂಪಿಸಿದ ಉತ್ತರಭಾರತ

ಹೊಸದಿಲ್ಲಿ,ಎ.10: ಅಫ್ಘಾನಿಸ್ತಾನದ ಹಿಂದುಕುಷ್ ಪರ್ವತ ಪ್ರದೇಶದಲ್ಲಿ ರವಿವಾರ ರಿಕ್ಟರ್ ಮಾಪಕದಲ್ಲಿ 6.8ರಷ್ಟು ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಭೂಕಂಪದ ಅನುಭವ ನೆರೆಯ ಪಾಕಿಸ್ತಾನಕ್ಕೂ ಆಗಿದ್ದು, ದಿಲ್ಲಿ, ಜಮ್ಮು-ಕಾಶ್ಮೀರ, ಪಂಜಾಬ್, ಹರ್ಯಾಣ, ಚಂಡಿಗಡ ಸೇರಿದಂತೆ ಉತ್ತರ ಭಾರತದ ಹಲವೆಡೆಗಳಲ್ಲಿ ಭೂಮಿ ಕಂಪಿಸಿದೆ. ಕಂಪನದ ಅನುಭವವಾಗುತ್ತಿದ್ದಂತೆ ಜನರೆಲ್ಲ ತಮ್ಮ ನಿವಾಸಗಳಿಂದ ರಸ್ತೆಗಳಿಗೆ ಧಾವಿಸಿದ್ದು ಆತಂಕದ ಸ್ಥಿತಿ ಸೃಷ್ಟಿಯಾಗಿತ್ತು.
ಯಾವುದೇ ಪ್ರಾಣ ಅಥವಾ ಆಸ್ತಿ ಹಾನಿ ಸಂಭವಿಸಿರುವುದು ವರದಿಯಾಗಿಲ್ಲ. ಇದೇ ವೇಳೆ ನಂದ್ವಿ ಪಟ್ಟಣವನ್ನು ಕೇಂದ್ರಬಿಂದುವಾಗಿಸಿಕೊಂಡು ಸಂಭವಿಸಿದ 3.4 ತೀವ್ರತೆಯ ಭೂಕಂಪವು ದಕ್ಷಿಣ ಗುಜರಾತ್‌ನ ಸೂರತ್ ಮತ್ತು ತಾಪಿ ಜಿಲ್ಲೆಗಳನ್ನು ನಡುಗಿಸಿದೆ.
ಭೂಮಿ ನಡುಗಿದ ಹಿನ್ನೆಲೆಯಲ್ಲಿ ದಿಲ್ಲಿ ಮೆಟ್ರೋ ರೈಲು ಸೇವೆಯನ್ನು ಕೆಲ ಸಮಯ ಸ್ಥಗಿತಗೊಳಿಸಲಾಗಿತ್ತು.
ಸಂಜೆ 3:58ರ ಸುಮಾರಿಗೆ ಹಿಂದುಕುಷ್ ಪರ್ವತ ಪ್ರದೇಶದಲ್ಲಿ ಭೂಕಂಪ ಸಂಭವಿಸಿದ್ದು,ಕೇಂದ್ರಬಿಂದು 190 ಕಿ.ಮೀ.ನೆಲದಾಳದಲ್ಲಿತ್ತು ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ನಿರ್ವಹಣಾ ಮುಖ್ಯಸ್ಥ ಜೆ.ಎಲ್.ಗೌತಮ್ ತಿಳಿಸಿದರು.
‘‘ಭೂಕಂಪ! ಅದು ನಿಜಕ್ಕೂ ಆತಂಕ ಹುಟ್ಟಿಸಿತ್ತು. ದಿಲ್ಲಿ ಸಚಿವಾಲಯದ ಆರನೆ ಮಹಡಿಯ ನನ್ನ ಕಚೇರಿಯಲ್ಲಿಯ ಪೀಠೋಪಕರಣಗಳು ಅಲುಗಾಡುತ್ತಿದ್ದವು ಮತ್ತು ಹೊರಗಡೆ ಮರಗಳು ಅತ್ತಿಂದಿತ್ತ ತೂಗಾಡುತ್ತಿದ್ದವು ಎಂದು ದಿಲ್ಲಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋದಿಯಾ ಟ್ವೀಟಿಸಿದ್ದಾರೆ.
ಪರಮಾಣು ವಿದ್ಯುತ್ ಸ್ಥಾವರಗಳನ್ನು ಹೊಂದಿರುವ ತಾಪಿ ಜಿಲ್ಲೆಯ ಕಾಕ್ರಾಪಾರ್ ಪಟ್ಟಣದಲ್ಲಿಯೂ ಕಂಪನ ಅನುಭವಕ್ಕೆ ಬಂದಿದ್ದು, ಸ್ಥಾವರಕ್ಕೆ ಯಾವುದೇ ಹಾನಿಯುಂಟಾಗಿಲ್ಲ.







