ವಿಶ್ವಸಂಸ್ಥೆ ಮುಖ್ಯಸ್ಥನ ಸ್ಪರ್ಧೆಯಲ್ಲಿ ವಿಶ್ವದ ಗಣ್ಯರು
ಮಾಜಿ ಅಧ್ಯಕ್ಷ ಮಾಜಿ ಪ್ರಧಾನಿಗಳು,ಮಾಜಿ ವಿದೇಶ ಸಚಿವರು
ವಿಶ್ವಸಂಸ್ಥೆ, ಎ. 10: ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಹುದ್ದೆ ತೆರವುಗೊಳ್ಳುತ್ತಿದೆ ಹಾಗೂ ಓರ್ವ ಮಾಜಿ ಅಧ್ಯಕ್ಷರು, ಮೂವರು ಮಾಜಿ ಪ್ರಧಾನಿಗಳು, ಹಲವಾರು ವಿದೇಶ ಸಚಿವರು ಮತ್ತು ಓರ್ವ ಅರೆಕಾಲಿಕ ಕವಿ ಮುಂದಿನ ಮಹಾಕಾರ್ಯದರ್ಶಿಯಾಗಲು ತುದಿಗಾಲಲ್ಲಿ ನಿಂತಿದ್ದಾರೆ.
ಈ ವರ್ಷದ ಉತ್ತರಾರ್ಧದಲ್ಲಿ ನಡೆಯಲಿರುವ ಚುನಾವಣೆಯಲ್ಲಿ, ಪ್ರಥಮ ಬಾರಿಗೆ ಪೂರ್ವ ಯುರೋಪ್‌ನ ವ್ಯಕ್ತಿಯೊಬ್ಬರು, ಅದರಲ್ಲೂ ಪ್ರಥಮ ಬಾರಿಗೆ ಓರ್ವ ಮಹಿಳೆ ವಿಶ್ವಸಂಸ್ಥೆಯ ಮುಖ್ಯಸ್ಥರಾಗುವ ಸಾಧ್ಯತೆಯಿದೆ.
ಈವರೆಗಿನ ಎಂಟು ಘೋಷಿತ ಅಭ್ಯರ್ಥಿಗಳ ವಿವರಗಳು ಇಂತಿವೆ:
ಐರೀನಾ ಬೊಕೊವ: 2009ರಿಂದ ಯುನೆಸ್ಕೊದ ಮುಖ್ಯಸ್ಥರಾಗಿರುವ63 ವರ್ಷದ ಐರೀನಾ ಬೊಕೋವ 1996ರಿಂದ 1997ರವರೆಗೆ ಬಲ್ಗೇರಿಯದ ವಿದೇಶ ಸಚಿವೆಯಾಗಿಯೂ ಕಾರ್ಯನಿರ್ವಹಿಸಿದ್ದರು. ಅವರನ್ನು ಪೂರ್ವ ಯುರೋಪ್‌ನ ಪ್ರಬಲ ಅಭ್ಯರ್ಥಿ ಎಂಬುದಾಗಿ ಪರಿಗಣಿಸಲಾಗಿದೆ.
ಹೆಲನ್ ಕ್ಲಾರ್ಕ್: 66 ವರ್ಷದ ಹೆಲನ್ ಕ್ಲಾರ್ಕ್ ನ್ಯೂಝಿಲ್ಯಾಂಡ್‌ನ ಮಾಜಿ ಮಹಿಳಾ ಪ್ರಧಾನಿ ಹಾಗೂ 2009ರಿಂದ ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮದ ಮುಖ್ಯಸ್ಥರಾಗಿದ್ದಾರೆ.
ನಟಾಲಿಯಾ ಹರ್ಮನ್: ಮೋಲ್ಡೋವದ ಮಾಜಿ ವಿದೇಶ ಸಚಿವೆಯಾಗಿರುವ 47 ವರ್ಷದ ನಟಾಲಿಯಾ ಹರ್ಮನ್ ಹಲವು ದೇಶಗಳಿಗೆ ರಾಯಭಾರಿಯಾಗಿದ್ದರು.
ಆಂಟೋನಿಯೊ ಗಟರಸ್: 66 ವರ್ಷದ ಆಂಟೋನಿಯೊ ಗಟರಸ್ 1995ರಿಂದ 2002ರವರೆಗೆ ಪೋರ್ಚುಗಲ್‌ನ ಪ್ರಧಾನಿಯಾಗಿದ್ದರು ಹಾಗೂ 10 ವರ್ಷಗಳ ಕಾಲ ವಿಶ್ವಸಂಸ್ಥೆಯ ನಿರಾಶ್ರಿತರಿಗಾಗಿನ ಹೈಕಮಿಶನರ್ ಆಗಿದ್ದರು.
ಸರ್ಗಜನ್ ಕರೀಂ: ಮೆಸಡೋನಿಯದ ಮಾಜಿ ವಿದೇಶ ಸಚಿವರಾಗಿರುವ ಕರೀಂ, ವಿಶ್ವಸಂಸ್ಥೆಗೆ ತನ್ನ ದೇಶದ ರಾಯಭಾರಿಯೂ ಆಗಿದ್ದರು.
ಇಗರ್ ಲುಕ್ಸಿಕ್: ಅವರು ಮೋಂಟೆನೆಗ್ರೊ ದೇಶದ ಪ್ರಧಾನಿ, ವಿದೇಶ ಸಚಿವ ಹಾಗೂ ಹಣಕಾಸು ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. 39 ವರ್ಷದ ಅವರು ಮೂರು ಕವನ ಹಾಗೂ ಗದ್ಯ ಪುಸ್ತಕಗಳನ್ನು ಪ್ರಕಟಿಸಿದ್ದಾರೆ.
ವೆಸ್ನಾ ಪುಸಿಕ್: 62 ವರ್ಷದ ವೆಸ್ನಾ ಕ್ರೊಯೇಶಿಯದ ವಿದೇಶ ಸಚಿವೆಯಾಗಿದ್ದರು. ಡನಿಲೊ ಟರ್ಕ್: ಸ್ಲೊವೇನಿಯದ ಮಾಜಿ ಅಧ್ಯಕ್ಷರಾಗಿರುವ ಅವರು 1992ರಲ್ಲಿ ವಿಶ್ವಸಂಸ್ಥೆಗೆ ದೇಶದ ಮೊದಲ ರಾಯಭಾರಿಯಾಗಿದ್ದರು.





