ಕ್ಯಾಮರೂನ್ ರಾಜೀನಾಮೆಗಾಗಿ ಬೃಹತ್ ಪ್ರತಿಭಟನಾ ಮೆರವಣಿಗೆ
ಲಂಡನ್, ಎ. 10: ಪನಾಮ ದಾಖಲೆಗಳು ಬಹಿರಂಗಪಡಿಸಿದ ಹಗರಣದ ಹಿನ್ನೆಲೆಯಲ್ಲಿ, ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮರೂನ್ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಸಾವಿರಾರು ಮಂದಿ ಶನಿವಾರ ಡೌನಿಂಗ್ ಸ್ಟ್ರೀಟ್‌ನಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ‘‘ಟೊರಿಸ್ ತೊಲಗಿ’’ ಮತ್ತು ‘‘ಕ್ಯಾಮರೂನ್ ಕೆಳಗಿಳಿಯಲೇ ಬೇಕು’’ ಎಂಬ ಬರಹಗಳನ್ನೊಳಗೊಂಡ ಫಲಕಗಳನ್ನು ಪ್ರತಿಭಟನಾಕಾರರು ಹಿಡಿದಿದ್ದರು. ತನ್ನ ದಿವಂಗತ ತಂದೆ ಪನಾಮದಲ್ಲಿ ಸ್ಥಾಪಿಸಿದ ಟ್ರಸ್ಟ್‌ನಪ್ರಯೋಜನವನ್ನು ತಾನು ಪಡೆದಿದ್ದಾಗಿ ಕ್ಯಾಮರೂನ್ ಒಪ್ಪಿ ಕೊಂಡಿರುವುದನ್ನು ಸ್ಮರಿಸಬಹುದಾಗಿದೆ. ಆದರೆ, 2010ರಲ್ಲಿ ಬ್ರಿಟನ್‌ನ ಪ್ರಧಾನಿಯಾಗುವ ತಿಂಗಳುಗಳ ಮೊದಲು ತನ್ನ ಪಾಲನ್ನು ಮಾರಾಟ ಮಾಡಿದ್ದೇನೆ ಎಂಬುದಾಗಿಯೂ ಅವರು ಹೇಳಿದ್ದಾರೆ. ಪ್ರಧಾನಿಯ ತಂದೆ ಇಯಾನ್ ಕ್ಯಾಮರೂನ್, ಬ್ಲೇರ್‌ಮೋರ್ ಹೋಲ್ಡಿಂಗ್ಸ್ ಎಂಬ ಹೆಸರಿನಲ್ಲಿ ವಿದೇಶದಲ್ಲಿ ಕಂಪೆನಿಯೊಂದನ್ನು ನಡೆಸುತ್ತಿದ್ದರು ಎಂಬುದಾಗಿ ಪನಾಮದ ಕಾನೂನು ಸಂಸ್ಥೆಯೊಂದರಿಂದ ಸೋರಿಕೆಯಾದ ದಾಖಲೆಗಳು ಹೇಳಿವೆ. ಇಯಾನ್ ಕ್ಯಾಮರೂನ್ 2010ರಲ್ಲಿ ನಿಧನರಾದರು.
ತೆರಿಗೆ ದಾಖಲೆಗಳ ಬಿಡುಗಡೆ ಪನಾಮ ಹೂಡಿಕೆ ದಾಖಲೆಗಳ ಸೋರಿಕೆಯ ಹಿನ್ನೆಲೆಯಲ್ಲಿ ಹೆಚ್ಚುತ್ತಿರುವ ಒತ್ತಡದ ನಡುವೆಯೇ, ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮರೂನ್ ತನ್ನ ವೈಯಕ್ತಿಕ ತೆರಿಗೆ ಪಾವತಿ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ ಹಾಗೂ ತೆರಿಗೆ ತಪ್ಪಿಸಿದ ಆರೋಪಗಳ ಬಗ್ಗೆ ತನಿಖೆ ನಡೆಸಲು ನೂತನ ಕಾರ್ಯಪಡೆಯೊಂದನ್ನು ಸ್ಥಾಪಿಸುವಂತೆಯೂ ಅವರು ಆದೇಶ ನೀಡಿದ್ದಾರೆ. ತನ್ನ ದಿವಂಗತ ತಂದೆ ವಿದೇಶದಲ್ಲಿ ಹೂಡಿಕೆ ಮಾಡಿದ್ದಾರೆನ್ನಲಾದ ಹಣಕ್ಕೆ ಸಂಬಂಧಿಸಿ ಉಂಟಾಗಿರುವ ವಿವಾದವನ್ನು ನಿವಾರಿಸುವ ದೃಷ್ಟಿಯಿಂದ ಅವರು ಈ ಕ್ರಮ ತೆಗೆದುಕೊಂಡಿದ್ದಾರೆ.







