ಅಂಗವಿಕಲರಿಗೆ ಜಾಗತಿಕ ಗುರುತು ಕಾರ್ಡ್: ಗುರ್ಜರ್
ಹೊಸದಿಲ್ಲಿ, ಎ.10: ದೇಶಾದ್ಯಂತದ ಅಂಗವಿಕಲರಿಗೆ ಜಾಗತಿಕ ಗುರುತು ಕಾರ್ಡುಗಳನ್ನು ನೀಡಲು ಕೇಂದ್ರ ಸರಕಾರ ನಿರ್ಧರಿಸಿದೆಯೆಂದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಹಾಯ ಸಚಿವ ಕೃಷ್ಣಪಾಲ್ ಗುರ್ಜರ್ ಶನಿವಾರ ತಿಳಿಸಿದ್ದಾರೆ.
ಕೆಲವು ರಾಜ್ಯಗಳು ಇತರ ಕಾರ್ಡ್‌ಗಳನ್ನು ಅಂಗೀಕರಿಸುವುದಿಲ್ಲ. ಇದರಿಂದ ಸಮಸ್ಯೆಯಾಗುತ್ತಿದೆ. ಅದನ್ನು ನಿವಾರಿಸಲು ಕೇಂದ್ರ ಸರಕಾರವು ಜಾಗತಿಕ ಕಾರ್ಡ್‌ಗಳನ್ನು ನೀಡಲು ನಿರ್ಧರಿಸಿದೆಯೆಂದು ಅವರು ಹೇಳಿದರು.
ವಿಜಯವಾಡದಿಂದ 25 ಕಿ.ಮೀ. ದೂರದ ಅಟ್ಕುರ್ ಗ್ರಾಮದಲ್ಲಿ ನಡೆದ ಅರೋಗ್ಯ ಶಿಬಿರವೊಂದರಲ್ಲಿ ಗುರ್ಜರ್ ಮಾತನಾಡುತ್ತಿದ್ದರು.
ಫಲಾನುಭವಿಗಳಿಗೆ ಯಂತ್ರ ಚಾಲಿತ ಗಾಲಿಕುರ್ಚಿಗಳನ್ನು ಸಬ್ಸಿಡಿ ದರದಲ್ಲಿ ಒದಗಿಸಲು ತನ್ನ ಸಚಿವಾಲಯ ನಿರ್ಧರಿಸಿದೆ. ಅಂಗವಿಕಲರಿಗೆ ಕಟ್ಟಡಗಳೊಳಗೆ ಸುಲಭ ಪ್ರವೇಶಕ್ಕಾಗಿ ರ್ಯಾಪ್‌ಗಳನ್ನು ಒದಗಿಸುವಂತೆ 50 ನಗರಗಳ ಸರಕಾರಿ ಇಲಾಖೆಗಳಿಗೆ ಅದು ಸೂಚಿಸಿದೆಯೆಂದು ಅವರು ಹೇಳಿದರು. ಕೇಂದ್ರದ ಯೋಜನೆಗಳನ್ನು ಪಟ್ಟಿ ಮಾಡಿದ ಗುರ್ಜರ್, ಸ್ವ ಉದ್ಯೋಗ ಅಥವಾ ಉತ್ತಮ ಉದ್ಯೋಗ ಮೂಲಗಳನ್ನು ಪಡೆಯಲು ಅನುಕೂಲವಾಗುವಂತೆ ಸರಕಾರವು ಪ್ರಧಾನ ಮಂತ್ರಿ ಕೌಶಲ ಯೋಜನೆಯಲ್ಲಿ ಸುಮಾರು 15 ಲಕ್ಷ ಅಂಗವಿಕಲ ಯುವಕರಿಗೆ ಕೌಶಲಾಭಿವೃದ್ಧಿ ತರಬೇತಿಯನ್ನು ನೀಡುತ್ತಿದೆ. ಅದಲ್ಲದೆ, ಸಚಿವಾಲಯವು ಎಲ್ಲ ಸಂಸದೀಯ ಕ್ಷೇತ್ರಗಳಲ್ಲಿ ಆರೋಗ್ಯ ಶಿಬಿರಗಳನ್ನು ಸಂಘಟಿಸುತ್ತಿದೆ. ಈ ವರೆಗೆ ದೇಶದಾದ್ಯಂತ ಅಂತಹ 113 ಶಿಬಿರಗಳನ್ನು ನಡೆಸಲಾಗಿದೆ. ಜೈಪುರ ಕೃತಕ ಕಾಲು ಹಾಗೂ ಇತರ ಉಪಕರಣಗಳನ್ನು ಸುಮಾರು 1.14ಲಕ್ಷ ಫಲಾನುಭವಿಗಳಿಗೆ ವಿತರಿಸಲಾಗಿದೆಯೆಂದು ಗುರ್ಜರ್ ವಿವರಿಸಿದರು.
ಶ್ರವಣ ಯಂತ್ರ ಹಾಗೂ ಕ್ಯಾಲಿಪರ್ಸ್‌ಗಳಂತಹ ಉಪಕರಣಗಳ ತಂತ್ರಜ್ಞಾನ ಸುಧಾರಣೆಗಾಗಿ ತನ್ನ ಸಚಿವಾಲಯವು ಜರ್ಮನಿ ಹಾಗೂ ಇಂಗ್ಲೆಂಡ್‌ಗಳ 2 ಸಂಸ್ಥೆಗಳೊಂದಿಗೆ ಒಪ್ಪಂದವನ್ನು ನಡೆಸಿದೆಯೆಂದು ಅವರು ತಿಳಿಸಿದರು.
ಶಿಬಿರದಲ್ಲಿ, ಸುಮಾರು 400 ಮಂದಿ ಅಂಗವಿಕಲರಿಗೆ ಟ್ರೈಸಿಕಲ್, ಶ್ರವಣ ಸಾಧನ ಜೈಪುರ ಕಾಲು ಹಾಗೂ ಕ್ಯಾಲಿಪರ್ಸ್‌ಗಳನ್ನು ವಿತರಿಸಲಾಗಿದೆ.
ಕೇಂದ್ರ ಸಚಿವ ಎಂ. ವೆಂಕಯ್ಯ ನಾಯ್ಡು, ಆಂಧ್ರ ಪ್ರದೇಶದ ಆರೋಗ್ಯ ಸಚಿವ ಡಾ.ಕೆ.ಶ್ರೀನಿವಾಸ್ ಸಹ ಶಿಬಿರದಲ್ಲಿ ಉಪಸ್ಥಿತರಿದ್ದರು.





