ಕೆನಡಾವನ್ನು ಕೆಡವಿದ ಸರ್ದಾರ್ ಸಿಂಗ್ ಬಳಗ
ಸುಲ್ತಾನ್ ಅಝ್ಲಾನ್ ಷಾ ಹಾಕಿ ಟೂರ್ನಮೆಂಟ್
ಮಲೇಷ್ಯಾ, ಎ.10: ಸುಲ್ತಾನ್ ಅಝ್ಲಾನ್ ಷಾ ಹಾಕಿ ಟೂರ್ನಮೆಂಟ್‌ನಲ್ಲಿ ಭಾರತ ತಂಡ ಕೆನಡಾದ ವಿರುದ್ಧ 3-1 ಅಂತರದಿಂದ ಭರ್ಜರಿ ಜಯ ಸಾಧಿಸಿದೆ.
ರವಿವಾರ ಇಲ್ಲಿ ನಡೆದ ಪಂದ್ಯದಲ್ಲಿ ಕರ್ನಾಟಕದ ಆಟಗಾರ ನಿಕಿನ್ ತಿಮ್ಮಯ್ಯ 3ನೆ ನಿಮಿಷದಲ್ಲಿ ಗೋಲು ಬಾರಿ ಭಾರತಕ್ಕೆ 1-0 ಮುನ್ನಡೆ ಒದಗಿಸಿಕೊಟ್ಟರು. 23ನೆ ನಿಮಿಷದಲ್ಲಿ ಗೋಲು ಬಾರಿಸಿದ ಕೀಗನ್ ಪೆರೇರಾ ಕೆನಡಾ 1-1 ರಿಂದ ಸಮಬಲ ಸಾಧಿಸಿ ತಿರುಗೇಟು ನೀಡಲು ನೆರವಾದರು.
41ನೆ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಾಗಿ ಪರಿವರ್ತಿಸಿದ ಹರ್ಮನ್‌ಪ್ರೀತ್ ಸಿಂಗ್ ಭಾರತದ ಮುನ್ನಡೆಯನ್ನು 2-1ಕ್ಕೆ ಏರಿಸಿದರು.
ನಾಯಕ ಸರ್ದಾರ್ ಸಿಂಗ್ ನೀಡಿದ ಪಾಸ್‌ನ ನೆರವಿನಿಂದ 67ನೆ ನಿಮಿಷದಲ್ಲಿ ಗೋಲು ಬಾರಿಸಿದ ತಲ್ವಿಂದರ್ ಸಿಂಗ್ ಭಾರತ 3-1 ಗೋಲುಗಳ ಅಂತರದಿಂದ ಗೆಲುವು ಸಾಧಿಸಲು ನೆರವಾದರು.
ಟೂರ್ನಿಯಲ್ಲಿ ಆಡಿದ 3ನೆ ಪಂದ್ಯದಲ್ಲಿ 2ನೆ ಗೆಲುವು ಸಾಧಿಸಿರುವ ಭಾರತ ಎ.12 ರಂದು ನಡೆಯಲಿರುವ 4ನೆ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ. ಭಾರತ ತಂಡ ಜಪಾನ್ ವಿರುದ್ಧದ ಮೊದಲ ಪಂದ್ಯವನ್ನು ಜಯಿಸಿತ್ತು. ಆದರೆ, ಆಸ್ಟ್ರೇಲಿಯ ವಿರುದ್ಧದ 2ನೆ ಪಂದ್ಯವನ್ನು ಹೀನಾಯವಾಗಿ ಸೋತಿತ್ತು.
ಆಸ್ಟ್ರೇಲಿಯ-ನ್ಯೂಝಿಲೆಂಡ್‌ಗೆ ಜಯ
ವಿಶ್ವ ಚಾಂಪಿಯನ್ ಆಸ್ಟ್ರೇಲಿಯ ತಂಡ ಪಾಕಿಸ್ತಾನ ತಂಡವನ್ನು 4-0 ಗೋಲುಗಳ ಅಂತರದಿಂದಲೂ, ನ್ಯೂಝಿಲೆಂಡ್ ತಂಡ ಜಪಾನ್ ತಂಡವನ್ನು 4-1 ಅಂತರದಿಂದಲೂ ಮಣಿಸಿತು.
ಟೂರ್ನಿಯಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಆಸ್ಟ್ರೇಲಿಯ 3 ಪಂದ್ಯಗಳಲ್ಲಿ 9 ಅಂಕವನ್ನು ಗಳಿಸಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದಿದೆ. ಹಾಲಿ ಚಾಂಪಿಯನ್ ನ್ಯೂಝಿಲೆಂಡ್ ತಂಡ 4 ಪಂದ್ಯಗಳಲ್ಲಿ 8 ಅಂಕವನ್ನು ಗಳಿಸುವುದರೊಂದಿಗೆ ಎರಡನೆ ಸ್ಥಾನದಲ್ಲಿದೆ.







