ಭೂಮಿ ಕಂಪಿಸಿತ್ತು ಎಲ್ಲೆಲ್ಲೂ ಚೀತ್ಕಾರ ಕೇಳುತ್ತಿತ್ತು
ಕೊಲ್ಲಂ ದುರಂತದ ಪ್ರತ್ಯಕ್ಷದರ್ಶಿಗಳ ಹೃದಯ ವಿದ್ರಾವಕ ಅನುಭವ
ರವಿವಾರ ಮುಂಜಾನೆ 3:30. ಕೊಲ್ಲಂ ಸಮೀಪದ 100 ವರ್ಷಗಳ ಇತಿಹಾಸವಿರುವ ಪುಟ್ಟಿಂಗಲ್ ದೇವಿ ದೇವಸ್ಥಾನದಲ್ಲಿ ಸಂಭವಿಸಿದ ಸಿಡಿಮದ್ದು ಸ್ಫೋಟದ ತೀವ್ರತೆಯೆಷ್ಟಿತ್ತೆಂದರೆ, ಒಂದು ಕಿ.ಮೀ.ದೂರದವರೆಗೂ ಭೂಮಿ ಕಂಪಿಸಿದ ಅನುಭವವಾಗಿತ್ತು ಎಂದು ಪರಿಸರದ ನಿವಾಸಿ ಗಿರಿಜಾ ಹೇಳುತ್ತಾರೆ.
ಪುಟ್ಟಿಂಗಲ್ ದೇವಿ ಕ್ಷೇತ್ರದಲ್ಲಿ ನಡೆದ ಏಳು ದಿನಗಳ ಮೀನಾ ಭರಣಿ ಉತ್ಸವದ ಕೊನೆಯ ದಿನದಂದು ಆಯೋಜಿಸಲಾದ ಸಿಡಿಮದ್ದು ಪ್ರದರ್ಶನದ ಸಂದರ್ಭದಲ್ಲಿ ಈ ದುರಂತ ಸಂಭವಿಸಿತ್ತು. ಸುಡುಮದ್ದು ಪ್ರದರ್ಶನ ವೀಕ್ಷಿಸಲು ತಿರುವನಂತಪುರ ಹಾಗೂ ಕೊಲ್ಲಂ ಜಿಲ್ಲೆಗಳಿಂದ ಸಹಸ್ರಾರು ಮಂದಿ ಆಗಮಿಸಿದ್ದರು. ಪಟಾಕಿಗಳನ್ನು ಸಂಗ್ರಹಿಸಿಡಲಾಗಿದ್ದ ‘ಕಂಬಪುರಂ’ ಗೋದಾಮಿನಲ್ಲಿ ಪಟಾಕಿಯ ಕಿಡಿಯೊಂದು ಬಿದ್ದುದರಿಂದ ಅಲ್ಲಿದ್ದ ಸಾವಿರಾರು ಪಟಾಕಿಗಳು ಕಿವಿಗಡಚಿಕ್ಕುವ ಸದ್ದಿನೊಂದಿಗೆ ಸ್ಫೋಟಿಸಿದವೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಉತ್ಸವದ ಕೊನೆಯ ಘಟ್ಟದಲ್ಲಿ ಈ ದುರಂತ ಸಂಭವಿಸಿದ್ದಾಗಿ, ಸಿಡಿಮದ್ದು ಪ್ರದರ್ಶನವನ್ನು ಸಮೀಪದ ತಾರಸಿಮಹಡಿಯಿಂದ ವೀಕ್ಷಿಸಿದ್ದ ಟಿವಿ ಪತ್ರಕರ್ತ ಲಾಲು ತಿಳಿಸಿದ್ದಾರೆ. ಸ್ಫೋಟದ ಬಳಿಕ ಬೃಹತ್ ಬೆಂಕಿಯ ಗೋಳವನ್ನು ಕಂಡೆ ಹಾಗೂ ಸಿಡಿಲಿಗಿಂತಲೂ ಪ್ರಚಂಡವಾದ ಸದ್ದನ್ನು ಕೇಳಿದೆನೆಂದು ಅವರು ಹೇಳುತ್ತಾರೆ. ಕೂಡಲೇ ಇಡೀ ಪ್ರದೇಶದಲ್ಲಿದ್ದ ವಿದ್ಯುತ್ ಸಂಪರ್ಕ ಕಡಿದುಹೋಗಿತ್ತು ಹಾಗೂ ಜನರ ಚೀತ್ಕಾರಗಳಷ್ಟೇ ಕೇಳಿಬರುತ್ತಿದ್ದವು. ಇದೊಂದು ಅತ್ಯಂತ ಯಾತನಾಮಯವಾದ ಅನುಭವ ಎಂದವರು ಹೇಳುತ್ತಾರೆ. ಕೂಡಲೇ ತಾನು ಸ್ಥಳಕ್ಕೆ ಧಾವಿಸಿದಾಗ ಅಲ್ಲಿ 10ರಿಂದ 15 ಶವಗಳು ಬಿದ್ದಿರುವುದನ್ನು ಕಂಡೆ. ದೇವಾಲಯದ ಆವರಣದಲ್ಲಿಡೀ ಸುಟ್ಟುಕರಕಲಾದ ದೇಹಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವೆಂದು ಅವರು ಹೇಳುತ್ತಾರೆ.
ಸ್ಫೋಟ ಸಂಭವಿಸಿದ ಸ್ಥಳದಲ್ಲಿಡೀ ರಕ್ತದಿಂದ ತೊಯ್ದ ಬಟ್ಟೆಗಳು ಹಾಗೂ ಪಾದರಕ್ಷೆಗಳು ಚದುರಿಬಿದ್ದಿರುವುದಾಗಿ ಪರಿಸರದ ಇನ್ನೋರ್ವ ನಿವಾಸಿ ರಾಜು ಹೇಳುತ್ತಾರೆ.ಈ ಸ್ಫೋಟದಲ್ಲಿ ಸಿಡಿಮದ್ದುಗಳನ್ನು ಸಂಗ್ರಹಿಸಿಡಲಾಗಿದ್ದ ಕಾಂಕ್ರಿಟ್ ಕಟ್ಟಡವು ಸಂಪೂರ್ಣವಾಗಿ ನಾಶವಾಗಿದೆ. ಅದರ ಬೃಹತ್ ಗಾತ್ರದ ಸಿಮೆಂಟ್ ಸ್ಲಾಬ್‌ಗಳು, ಅವಘಡದ ಸ್ಥಳದಿಂದ 10 ಮೀಟರ್ ದೂರದವರೆಗೂ ಬಂದುಬಿದ್ದಿವೆ ಎಂದು ಪ್ರತ್ಯಕ್ಷದರ್ಶಿಗಳಲ್ಲೊಬ್ಬರಾದ 63 ವರ್ಷ ವಯಸ್ಸಿನ ವಿಜಯನ್ ಹೇಳುತ್ತಾರೆ. ಅನೇಕ ಮೃತದೇಹಗಳು ಗುರುತು ಹಿಡಿಯಲೂ ಸಾಧ್ಯವಾಗದಷ್ಟು ಸುಟ್ಟುಕರಕಲಾಗಿವೆ ಎಂದವರು ಹೇಳುತ್ತಾರೆ. ದುರಂತವು ನಸುಕಿಲ್ಲಿ ಸಂಭವಿಸಿದ ಕಾರಣ ಗಾಯಾಳುಗಳನ್ನು ಸಾಗಿಸುವುದಕ್ಕೆ ವಾಹನಗಳು ಸಿಗುವುದು ಕಷ್ಟವಾಗಿತ್ತು. ಆದರೆ ಕೆಲವೇ ನಿಮಿಷಗಳ ಬಳಿಕ ಗಾಯಾಳುಗಳನ್ನು ಹಾಗೂ ಮೃತದೇಹಗಳನ್ನು ವಿವಿಧ ಆಸ್ಪತ್ರೆಗಳಿಗೆ ಸಾಗಿಸಲಾಯಿತು. ದುರಂತದ ಸ್ಥಳಕ್ಕೆ ತಲುಪಿದವರಲ್ಲಿ ತಾನು ಹಾಗೂ ತನ್ನ ಸ್ನೇಹಿತ ಮೊದಲಿಗರೆಂದು ಸ್ಥಳೀಯ ಕೂಲಿ ಕಾರ್ಮಿಕ ಸುರೇಶ್ ಬಾಬುಹೇಳುತ್ತಾರೆೆ. ತಾನು ಸ್ಥಳಕ್ಕೆ ತಲುಪಿದ ಕೂಡಲೇ ಮೃತದೇಹಗಳನ್ನು ತೆರವುಗೊಳಿಸುವ ಹಾಗೂ ಗಾಯಾಳುಗಳಿಗೆ ನೆರವಾಗುವ ಕೆಲಸ ಆರಂಭಿಸಿದ್ದಾಗಿ ಆತ ಹೇಳುತ್ತಾರೆ. ‘‘ ಇಂತಹ ಘೋರ ದೃಶ್ಯವನ್ನು ನಾನು ಎಲ್ಲೂ ನೋಡಿಲ್ಲ. ಎಲ್ಲೆಲ್ಲೂ ಸುಟ್ಟು ಕರಕಲಾದ ಶವಗಳು, ಮುರಿದ ಅವಯವಗಳು, ವಿರೂಪಗೊಂಡ ದೇಹಗಳೇ ಕಾಣುತ್ತಿದ್ದವು. ಈ ಆಘಾತದಿಂದ ನಾನಿನ್ನೂ ಹೊರಬಂದಿಲ್ಲ ಹಾಗೂ ಆಹಾರ, ನೀರು ಕೂಡಾ ಸೇವಿಸಲು ಈಗಲೂ ತನಗೆ ಸಾಧ್ಯವಾಗುತ್ತಿಲ್ಲವೆಂದು ಆತ ಹೇಳಿದ್ದಾರೆ.
ಸಿಡಿಮದ್ದು ಸ್ಫೋಟದಿಂದಾಗಿ ಭಾರೀ ಸಂಖ್ಯೆಯ ಕಾಂಕ್ರಿಟ್ ಕಂಬಗಳು ಹಾಗೂ ಕಬ್ಬಿಣದ ಸರಳುಗಳು ನೆರೆದಿದ್ದ ಜನರ ಮೇಲೆ ಬಿದ್ದುದರಿಂದ ಭಾರೀ ಸಂಖ್ಯೆಯ ಸಾವುಗಳು ಸಂಭವಿಸಿದ್ದಾಗಿ ವಿಜಯನ್ ಹೇಳಿದ್ದಾರೆ. ಪರಿಹಾರ ಕಾರ್ಯಾಚರಣೆಯಲ್ಲಿ ಕೈಜೋಡಿಸಿರುವ ರೆಡ್‌ಕ್ರಾಸ್ ಅಧಿಕಾರಿಗಳು ಕೂಡಾ ಇದನ್ನೇ ಹೇಳಿದ್ದಾರೆ.