ಬಂಟ್ವಾಳ: ವ್ಯಕ್ತಿಯೋರ್ವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ
ಬಂಟ್ವಾಳ: ವ್ಯಕ್ತಿಯೋರ್ವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಎಲಿಯನಡುಗೋಡು ಗ್ರಾಮದ ಬಾರ್ದೈಲ್‌ನ ಗುಡ್ಡೆಯಲ್ಲಿ ಸೋಮವಾರ ಬೆಳಗ್ಗೆ ಪತ್ತೆಯಾಗಿದೆ.
ಪತ್ತೆಯಾದ ಮೃತದೇಹವನ್ನು ಇಲ್ಲಿನ ನಿವಾಸಿ ದಿ.ಬಾಬು ಶೆಟ್ಟಿ ಅವರ ಪುತ್ರ ಸತೀಶ್ ಶೆಟ್ಟಿ(42) ಗುರುತಿಸಲಾಗಿದೆ. ಅವರ ಮನೆಯ ಸಮೀಪದ ಗುಡ್ಡದಲ್ಲಿ ಮೃತದೇಹವು ಕವುಚಿ ಬಿದ್ದು ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸ್ಥಳೀಯರೊಬ್ಬರು ಗುಡ್ಡಕ್ಕೆ ಹೋಗಿದ್ದಾಗ ಮೃತದೇಹ ಕಂಡು ಬಂದಿತ್ತು. ಸ್ಥಳದಲ್ಲಿ ದೊರೆತ ಪ್ಯಾಂಟ್ ಹಾಗೂ ಶೂನ ಆಧಾರದಲ್ಲಿ ಸತೀಶ್ ಅವರ ಮೃತದೇಹವನ್ನು ಮನೆಯವರು ಗುರುತಿಸಿದ್ದಾರೆ. ಸತೀಶ್ ಅವರು ಮುಂಬೈಯಲ್ಲಿ ಕಿರು ಉದ್ಯಮ ಹೊಂದಿದ್ದು ಊರಿನ ಜಾತ್ರೆಗೆಂದು ಆಗಮಿಸಿದ್ದರು. ಮಾ.30ರಂದು ಮುಂಬೈಗೆ ವಾಪಾಸು ತೆರಳಿದ್ದ ಅವರು ಅಲ್ಲಿಗೆ ತಲುಪಿರಲಿಲ್ಲ. ಈ ಬಗ್ಗೆ ಅವರ ಪತ್ನಿ ಮಹಾರಾಷ್ಟ್ರ ರಾಜ್ಯದ ಥಾಣಾ ಜಿಲ್ಲೆಯ ಕನ್ನಕ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಇದೀಗ ಸತೀಶ್ ಅವರ ಮೃತದೇಹ ಮನೆಯ ಸಮೀಪದ ಗುಡ್ಡದಲ್ಲಿ ಪತ್ತೆಯಾಗಿದ್ದು ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿದ್ದ ಅವರು ವಾಪಾಸ್ ಮುಂಬೈಗೆ ತೆರಳದೆ ಯಾವುದೋ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆಗೈದಿರಬೇಕೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ನಡೆಸುತ್ತಿದ್ದಾರೆ.





