ಮೂಡುಬಿದಿರೆ: ಏ.15ರಿಂದ ಮೂಡುಬಿದಿರೆಯಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ ಜಾರಿ
.jpg)
ಮೂಡುಬಿದಿರೆ: ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವಾಲಯದ ಅಧಿಸೂಚನೆಯಂತೆ ಪ್ಲಾಸ್ಟಿಕ್ ಕ್ಯಾರಿಬ್ಯಾಗ್, ಪ್ಲಾಸ್ಟಿಕ್ ಭಿತ್ತಿಪತ್ರ, ಪ್ಲಾಸ್ಟಿಕ್ ತೋರಣ ಪ್ಲಾಸ್ಟಿಕ್ ಬಾವುಟ, ಪ್ಲಾಸ್ಟಿಕ್ ತಟ್ಟೆ, ಪ್ಲಾಸ್ಟಿಕ್ ಲೋಟ, ಪ್ಲಾಸ್ಟಿಕ್ ಚಮಚ, ಕ್ಲಿಂಗ್ ಪಿಲ್ಮ್ಸ್ ಮತ್ತು ಊಟದ ಮೇಜಿನ ಮೇಲೆ ಹರಡುವ ಪ್ಲಾಸ್ಟಿಕ್ ಹಾಳೆ,ಥರ್ಮೊಕೋಲ್ ,ಪ್ಲಾಸ್ಟಿಕ್ ಮೈಕ್ರೊ ಬೀಡ್ಸ್‌ನಿಂದ ತಯಾರಿಸಿದಂತಹ ವಸ್ತುಗಳನ್ನು ಏ.15ರಿಂದ ನಿಷೇಧಿಸಲಾಗಿದೆ ಎಂದು ಪುರಸಭಾ ಪರಿಸರ ಅಭಿಯಂತರೆ ಶಿಲ್ಪಾ ತಿಳಿಸಿದ್ದಾರೆ.
ಅವರು ಪುರಸಭಾ ಅಧ್ಯಕ್ಷೆ ರೂಪಾ ಸಂತೋಷ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಸೋಮವಾರ ಪುರಸಭಾ ಸಭಾಂಗಣದಲ್ಲಿ ಪ್ಲಾಸ್ಟಿಕ್ ನಿಷೇಧದ ಕುರಿತು ಮೂಡುಬಿದಿರೆ ಪುರಸಭಾ ಸದಸ್ಯರು, ಮಾಧ್ಯಮದವರೊಂದಿಗೆ ನಡೆದ ಸಮಾಲೋಚನಾ ಸಭೆಯಲ್ಲಿ ಮಾಹಿತಿ ನೀಡಿದರು. ಸಾರ್ವಜನಿಕರು ಪ್ಲಾಸ್ಟಿಕ್ ಬಳಕೆಗೆ ಪರ್ಯಾಯವಾಗಿ ಪೇಪರ್ ಚೀಲ, ಬಟ್ಟೆ ಚೀಲ, ಬುಟ್ಟಿ, ಡಬ್ಬಗಳು, ಬಾಳೆಎಲೆ, ಅಡಿಕೆಹಾಳೆ ಇನ್ನಿತರ ವಸ್ತುಗಳ ಬಳಕೆಗೆ ಸೂಚಿಸಲಾಗಿದೆ. ಬಟ್ಟೆ ಚೀಲಗಳ ತಯಾರಿಕೆಗೆ ಸ್ವಸಹಾಯ ಸಂಘಗಳಿಗೆ ಪ್ರೋತ್ಸಾಹ ನೀಡಲು ಪುರಸಭೆ ನಿರ್ಧರಿಸಿದೆ ಎಂದರು. ಮಾಧ್ಯಮ, ನಾಗರಿಕರಿಗೆ ಕರಪತ್ರ ಹಂಚಿಕೆ, ವರ್ತಕರೊಡನೆ ಸಮಾಲೋಚನೆ, ವಾಹನಗಳ ಮೂಲಕ ಬಹಿರಂಗ ಜಾಗೃತಿ ಪ್ರಚಾರದ ಮೂಲಕ ಪ್ಲಾಸ್ಟಿಕ್ ನಿಷೇಧ ಕುರಿತು ಜಾಗೃತಿ ಮೂಡಿಸಲಾಗುವುದು. ಏ.15ರ ನಂತರ ಪ್ಲಾಸ್ಟಿಕ್ ಬಳಕೆ ಕಂಡುಬಂದಲ್ಲಿ 1 ಸಾವಿರ ದಂಡ ವಿಧಿಸಲಾಗುವುದು. ಇದು ಪುನಾರರ್ವತನೆಗೊಂಡಲ್ಲಿ ಹೆಚ್ಚಿನ ದಂಡ ವಿಧಿಸಿ ಜಾಗೃತಿ ಮೂಡಿಸಲಾಗುವುದೆಂದು ಶಿಲ್ಪಾ ಮಾಹಿತಿ ನೀಡಿದರು.
ವ್ಯಾಪಾರಿಗಳ ಸಭೆ: ಪ್ಲಾಸ್ಟಿಕ್ ಚೀಲಗಳ ನಿಷೇಧದ ಹಿನ್ನೆಲೆಯಲ್ಲಿ ಅದಕ್ಕೆ ಪರ್ಯಾಯವಾಗಿ ಸೂಚಿಸಿದ ವಸ್ತುಗಳ ಮಾರಾಟ ಮತ್ತು ಬಳಕೆಯ ಕುರಿತು ಮಾಹಿತಿ ನೀಡಲು ಶೀಘ್ರದಲ್ಲೆ ಇಲ್ಲಿನ ವರ್ತಕರ ಸಭೆ ಕರೆಯಲಾಗುವುದು ಎಂದು ಪುರಸಭೆ ಅಧ್ಯಕ್ಷೆ ರೂಪಾ ಎಸ್. ಶೆಟ್ಟಿ ಹೇಳಿದರು.
ಏ.15ರಿಂದ ನಿಷೇಧ ಜಾರಿಗೊಳಿಸಿ, ಪುರಸಭಾ ವ್ಯಾಪ್ತಿಯಲ್ಲಿ ಜಾಗೃತಿಗೊಳಿಸಬೇಕು. ಏ.30ರ ನಂತರ ದಂಡ ವಿಧಿಸುವ ಬಗ್ಗೆ ಚಿಂತನೆ ಮಾಡುವುದು ಉತ್ತಮ ಎಂದು ಮೂಡಾ ಅಧ್ಯಕ್ಷ ಸುರೇಶ್ ಕೋಟ್ಯಾನ್ ಸಲಹೆ ನೀಡಿದರು. ಹಿರಿಯ ಸದಸ್ಯ ಪಿ.ಕೆ ಥೋಮಸ್ ಮಾತನಾಡಿ, ಸ್ವಸಹಾಯ ಸಂಘಗಳು ತಯಾರಿಸುವ ಬಟ್ಟೆಯ ಕ್ಯಾರಿ ಬ್ಯಾಗ್‌ಗಳನ್ನು ಪುರಸಭೆಯವರು ಖರೀದಿಸಿ ಅದನ್ನು ವರ್ತಕರ ಮೂಲಕ ಗ್ರಾಹಕರಿಗೆ ಉಚಿತವಾಗಿ ತಲುಪಿಸುವ ವ್ಯವಸ್ಥೆ ಮಾಡಿದಲ್ಲಿ ಪುರಸಭೆಯಿಂದಲೇ ಪ್ರೇರಣೆ ನೀಡಿದಂತಾಗುತ್ತದೆ. ಈ ಕುರಿತು ಪುರಸಭಾ ಕೌನ್ಸಿಲ್‌ನ ಅಭಿಪ್ರಾಯ ಕೇಳಿ ನಿರ್ಣಯ ಮಾಡುವುದು ಉತ್ತಮ ಎಂದು ಸಲಹೆಯಿತ್ತರು. ಪುರಸಭಾ ಉಪಾಧ್ಯಕ್ಷೆ ಶಕುಂತಳಾ ದೇವಾಡಿಗ, ಪುರಸಭಾ ಸದಸ್ಯರಾದ ಅಬ್ದುಲ್ ಬಶೀರ್, ಪ್ರೇಮಾ ಸಾಲ್ಯಾನ್, ರತ್ನಾಕರ ದೇವಾಡಿಗ, ಆರೋಗ್ಯ ಅಧಿಕಾರಿ ಇಂದು, ಮೂಡುಬಿದಿರೆ ಪ್ರೆಸ್‌ಕ್ಲಬ್ ಕಾರ್ಯದರ್ಶಿ ಪ್ರಸನ್ನ ಹೆಗ್ಡೆ, ಉಪಾಧ್ಯಕ್ಷ ಸೀತಾರಾಮ ಆಚಾರ್ಯ, ಜೈಸನ್ ತಾಕೋಡೆ ಉಪಸ್ಥಿತರಿದ್ದರು.
ಮೂಡುಬಿದಿರೆ ಪುರಸಭೆಯಲ್ಲಿ ಪ್ಲಾಸ್ಟಿಕ್ ನಿಷೇಧದ ಕುರಿತು ಸಮಾಲೋಚನಾ ಸಭೆ ನಡೆಯಿತು.







