ಪುತ್ತೂರು: ಗ್ರಾ.ಪಂ ಉಪಚುನಾವಣೆ 9 ನಾಮಪತ್ರ ಹಿಂತೆಗೆತ
ಪುತ್ತೂರು: ತಾಲೂಕಿನ ಆರು ಗ್ರಾ.ಪಂಗಳ ತಲಾ ಒಂದು ಸ್ಥಾನಗಳಿಗೆ ಎ.17ರಂದು ನಡೆಯಲಿರುವ ಚುನಾವಣೆಗೆ ಸಂಬಂಧಿಸಿದಂತೆ ಎ.11ರಂದು ನಾಮಪತ್ರ ಹಿಂತೆಗೆದುಕೊಳ್ಳುವ ಪ್ರಕ್ರಿಯೆ ಅಂತಿಮಗೊಂಡಿದ್ದು ಐದು ಗ್ರಾ.ಪಂಗಳಲ್ಲಿ ಒಟ್ಟು 9 ಮಂದಿ ಅಭ್ಯರ್ಥಿಗಳು ನಾಮಪತ್ರ ಹಿಂತೆಗೆದುಕೊಂಡಿದ್ದಾರೆ.
ನೆಟ್ಟಣಿಗೆ ಮುಡ್ನೂರು:
ನೆಟ್ಟಣಿಗೆ ಮುಡ್ನೂರು ಗ್ರಾ.ಪಂನಲ್ಲಿ 6ನೇ ವಾರ್ಡ್‌ನ 'ಹಿಂದುಳಿದ ವರ್ಗ ಎ'ಗೆ ಮೀಸಲಾಗಿದ್ದು ಇಲ್ಲಿ ಉಮ್ಮರ್ ಪಿ. ಈಶ್ವರಮಂಗಲ ಹಾಗೂ ರಮೇಶ್ ಪೂಜಾರಿ ಮುಂಡ್ಯ ನಾಮಪತ್ರ ಹಿಂತೆಗೆದುಕೊಂಡಿದ್ದಾರೆ. ಒಟ್ಟು 6 ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು ಈ ಪೈಕಿ ಎ.ಎಂ. ಅಬ್ದುಲ್‌ಕುಂಞಿ ಆಲಂತಡ್ಕರವರ ನಾಮಪತ್ರ ಮೀಸಲಾತಿ ಪ್ರಮಣಪತ್ರ ಲಗತ್ತಿಸದ ಹಿನ್ನೆಲೆಯಲ್ಲಿ ತಿರಸ್ಕೃತಗೊಂಡಿರುತ್ತದೆ. ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಎಸ್. ಅಬ್ದುಲ್ ಖಾದರ್ ಕರ್ನೂರು, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಮಹಮ್ಮದ್ ಅಶ್ರಫ್ ಈಶ್ವರಮಂಗಲ ಹಾಗೂ ಎಸ್‌ಡಿಪಿಐ ಬೆಂಬಲಿತ ಅಭ್ಯರ್ಥಿಯಾಗಿ ಮಹಮ್ಮದ್ ಆರಿಫ್ ಈಶ್ವರಮಂಗಲರವರು ಕಣದಲ್ಲಿದ್ದಾರೆ.
ಕಡಬ:
ಕಡಬ ಗ್ರಾ.ಪಂನ ಕಡಬ ಗ್ರಾ.ಪಂನ ಕೋಡಿಂಬಾಳ 2 ವಾರ್ಡ್‌ನ 'ಸಾಮಾನ್ಯ' ಸ್ಥಾನಕ್ಕೆ ಮೀಸಲಾದ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಅನೀಶ್ ಮ್ಯಾಥ್ಯೂ ಕೋಡಿಂಬಾಳ ನಾಮಪತ್ರ ಹಿಂತೆಗೆದುಕೊಂಡಿರುತ್ತಾರೆ. ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಸಂಜೀವ ನಾಯ್ಕ ಅಜ್ಜಿಕಟ್ಟೆ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಕೃಷ್ಣಪ್ಪ ನಾಯ್ಕ, ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ಅಬ್ದುಲ್ ಲತೀಫ್ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ನಿವೃತ್ತ ಅಭಿವೃದ್ಧಿ ಅಧಿಕಾರಿ ಸೈಮನ್ ಲೂವಿಸ್ ರೋಡ್ರಿಗಸ್ ಕಣದಲ್ಲಿದ್ದಾರೆ.
ನೂಜಿಬಾಳ್ತಿಲ:
ನೂಜಿಬಾಳ್ತಿಲ ಗ್ರಾ.ಪಂ.ನ 1ನೇ ವಾರ್ಡ್ ಸಾಮಾನ್ಯ ಮೀಸಲು ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಕಾಂಬಗ್ರೆಸ್ ಬೆಂಬಲಿತ ಪಿ.ಪಿ. ಎಲಿಯಾಸ್ ಹಾಗೂ ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ಹರಿಪ್ರಸಾದ್ ಎನ್ಕಾಜೆ ನಾಮಪತ್ರ ಹಿಂತೆಗೆದುಕೊಂಡಿದ್ದಾರೆ. ಒಟ್ಟು ಐದು ನಾಮಪತ್ರಗಳು ಸಲ್ಲಿಸಿಕೆಯಾಗಿದ್ದ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಆಂಜೇರಿ ಜೋಸ್ ಎರಡು ನಾಮಪತ್ರ ಸಲ್ಲಿಸಿದ್ದು ಒಂದು ನಾಮಪತ್ರ ತಿರಸ್ಕೃತಗೊಂಡಿರುತ್ತದೆ. ಉಳಿದಂತೆ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಆಂಜೇರಿ ಜೋಸ್, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಪಿ.ಯು. ಸ್ಕರಿಯಾ ಕಣದಲ್ಲಿದ್ದು ನೇರ ಸ್ಪರ್ಧೆ ನಡೆಯಲಿದೆ.
ಕೊಳ್ತಿಗೆ:
ಕೊಳ್ತಿಗೆ ಗ್ರಾ.ಪಂನ ಮೂರನೇ ವಾರ್ಡ್‌ನ 'ಅನುಸೂಚಿತ ಜಾತಿ' ಮೀಸಲು ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾಗಿ ಕಣಿಯಾರು ಸಿಆರ್‌ಸಿ ಕಾಲನಿಯ ಷಣ್ಮುಖಲಿಂಗಂ ಹಾಗೂ ಪೆರ್ಲಂಪಾಡಿ ಸಿಆರ್‌ಸಿ ಕಾಲನಿ ಕಂದಸ್ವಾಮಿ, ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾಗಿ ಕರುಣಾನಿಧಿ ಹಾಗೂ ಕನಕರಾಜ್ ನಾಮಪತ್ರ ಸಲ್ಲಿಸಿದ್ದು ಈ ಪೈಕಿ ಕಾಂಗ್ರೆಸ್‌ನ ಕಂದಸ್ವಾಮಿ ಹಾಗೂ ಬಿಜೆಪಿಯ ಕನಕರಾಜ್ ನಾಮಪತ್ರ ಹಿಂತೆಗೆದುಕೊಂಡಿದ್ದಾರೆ. ಬಿಜೆಪಿ ಬೆಂಬಲಿತ ಅಭ್ಯರ್ಥಿ ಕರುಣಾನಿಧಿ ಹಾಗೂ ಕಾಂಗ್ರೆಸ್ ಬೆಂಬಿತ ಅಭ್ಯರ್ಥಿ ಷಣ್ಮುಖಲಿಗಂ ಕಣದಲ್ಲಿದ್ದು ನೇರ ಸ್ಪರ್ಧೆ ನಡೆಯಲಿದೆ.
ಅರಿಯಡ್ಕ:
ಅರಿಯಡ್ಕ ಗ್ರಾ.ಪಂನ 'ಸಾಮಾನ್ಯ ಮಹಿಳೆ' ಮೀಸಲು ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾಗಿ ಸುಚೇತಾ ರೈ ಡೆಂಬಾಳೆ ಹಾಗೂ ಶಾಂತಾ ಜೆ ರೈ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾಗಿ ಜಯಂತಿ ಗಂಗಾಧರ, ಸುನೀತಾ ಮಾಣಿಯಡ್ಕ ಹಾಗೂ ಸರೋಜಿನಿಯವರು ನಾಮಪತ್ರ ಸಲ್ಲಿಸಿದ್ದು ಈ ಪೈಕಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಸುಚೇತಾ ರೈ ಡೆಂಬಾಳೆ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸುನೀತಾ ಮಾಣಿಯಡ್ಕ ನಾಮಪತ್ರ ಹಿಂತೆಗೆದುಕೊಂಡಿದ್ದಾರೆ. ಬಿಜೆಪಿ ಬೆಂಬಲಿತ ಅಭ್ಯರ್ಥಿ ಶಾಂತಾ ಜೆ ರೈ ಹಾಗೂ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾಗಿ ಜಯಂತಿ ಗಂಗಾಧರ ಹಾಗೂ ಸರೋಜಿನಿ ಕಣದಲ್ಲಿದ್ದು ತ್ರಿಕೋಣ ಸ್ಪರ್ಧೆ ನಡೆಯಲಿದೆ.
ಬಡಗನ್ನೂರು:
ಬಡಗನ್ನೂರು ಗ್ರಾ.ಪಂ ಪಡುವನ್ನೂರು ಒಂದನೇ ವಾರ್ಡ್‌ನ 'ಹಿಂದುಳಿದ ವರ್ಗ ಎ' ಮೀಸಲಿಸಿದ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಸವಿತಾ ಮಡ್ಯಲಮೂಲೆ ಸಜಂಕಾಡಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಯಾಗಿ ಜ್ಯೋತಿ ಅರ್ತಿಕಜೆ ತಲಾ ಎರಡೇ ನಾಮಪತ್ರ ಸಲ್ಲಿಕೆಯಾಗಿದ್ದು ಇಲ್ಲಿ ಯಾವುದೇ ನಾಮಪತ್ರ ಹಿಂತೆಗೆದುಕೊಂಡಿರುವುದಿಲ್ಲ. ಇಲ್ಲಿ ನೇರ ಸ್ಪರ್ಧೆ ನಡೆಯಲಿದೆ.







