ಸ್ವತಃ ದೋಸೆ ತಯಾರಿಸಿ ರುಚಿ ನೋಡಿದ ರಾಜಕುಮಾರ ವಿಲಿಯಂ ಮತ್ತು ಕೇಟ್

ಮುಂಬೈ,ಎ.11:ಕ್ಯಾಂಬ್ರಿಜ್‌ನ ಡ್ಯೂಕ್ ಮತ್ತು ಡಚೆಸ್ ರಾಜಕುಮಾರ ವಿಲಿಯಂ ಮತ್ತು ಕೇಟ್ ಮಿಡ್ಲಟನ್ ಅವರು ಸೋಮವಾರ ಇಲ್ಲಿ ಭಾರತೀಯ ಸ್ಟಾರ್ಟ್‌ಪ್ ಕಂಪನಿಯೊಂದು ಆವಿಷ್ಕರಿಸಿರುವ ದೋಸಾ ಯಂತ್ರದ ಮೂಲಕ ದಕ್ಷಿಣ ಭಾರತದ ಜನಪ್ರಿಯ ಖಾದ್ಯವಾಗಿರುವ ದೋಸೆಯನ್ನು ಸ್ವತಃ ತಯಾರಿಸಿ ರುಚಿ ನೋಡಿದರು.
ಬೆಂಗಳೂರಿನ ಸ್ಟಾರ್ಟ್‌ಪ್ ಕಂಪನಿ ದೋಸಾಮ್ಯಾಟಿಕ್ ಆವಿಷ್ಕರಿಸಿರುವ ಯಂತ್ರದಲ್ಲಿ ಪ್ರಿನ್ಸ್ ವಿಲಿಯಂ ಹಿಟ್ಟನ್ನು ಸುರಿದರೆ ಪತ್ನಿ ಕೇಟ್ ಕೆಲವು ಬಟನ್‌ಗಳನ್ನು ಒತ್ತುವುದರೊಂದಿಗೆ ಯಂತ್ರಕ್ಕೆ ಚಾಲನೆ ನೀಡಿದರು. ನಿಮಿಷದಲ್ಲಿಯೇ ಗರಿಗರಿಯಾದ ದೋಸೆ ಹೊರಬಂದಾಗ ವಿಲಿಯಂ ಸಣ್ಣ ತುಂಡನ್ನು ತೆಗೆದುಕೊಂಡು ರುಚಿ ನೋಡಿದರು. ನಮಸ್ತೆ ಮುಂಬೈ! ದೋಸೆಯ ಅನುಭವ ನೀಡಿದ್ದಕ್ಕೆ ಕೃತಜ್ಞತೆಗಳು ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.
ಬ್ರಿಟಿಷ್ ರಾಜ ಮನೆತನದವರು ಸಾರ್ವಜನಿಕವಾಗಿ ಆಹಾರವನ್ನು ಸೇವಿಸುವುದಿಲ್ಲ. ಆದರೆ ವಿಲಿಯಂ ದಂಪತಿಗಳು ಈ ಸಂಪ್ರದಾಯವನ್ನು ಮುರಿದು ದೋಸೆಯ ರುಚಿಯನ್ನು ಸವಿದರು ಎಂದು ಮೂಲಗಳು ತಿಳಿಸಿದವು.
ಕೇಟ್ ಅವರು ಹೆಚ್ಚು ಆಸಕ್ತಿಯನ್ನು ವ್ಯಕ್ತಪಡಿಸಿ ದೋಸೆಯಂತ್ರ ಮತ್ತು ದೋಸೆ ತಯಾರಾಗುವ ಪ್ರಕ್ರಿಯೆಯ ಕುರಿತು ದೋಸಾಮ್ಯಾಟಿಕ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಈಶ್ವರ ಕೆ.ವಿಕಾಸ ಅವರಿಗೆ ಹಲವಾರು ಪ್ರಶ್ನೆಗಳನ್ನು ಕೇಳಿ ಉತ್ತರಗಳನ್ನು ಪಡೆದುಕೊಂಡರು.









