ಬೇವೂತ್ ಇಸ್ಲಾಮಿಕ್ ಸಿಟಿಗೆ ಸೌದಿ ದೊರೆ ಶಂಕುಸ್ಥಾಪನೆ

ಕೈರೋ, ಎ. 11: ಸುಮಾರು 30,000 ವಿದ್ಯಾರ್ಥಿಗಳಿಗೆ ಆಶ್ರಯ ಕಲ್ಪಿಸುವ ವಿದ್ಯಾರ್ಥಿ ನಿಲಯವನ್ನು ಒಳಗೊಂಡ ಬೇವೂತ್ ಇಸ್ಲಾಮಿಕ್ ಸಿಟಿಗೆ ಸೌದಿ ಅರೇಬಿಯದ ದೊರೆ ಸಲ್ಮಾನ್ ಶನಿವಾರ ಕೈರೋದ ಅಲ್-ಅಝರ್ ವಿಶ್ವವಿದ್ಯಾನಿಲಯದಲ್ಲಿ ಶಂಕುಸ್ಥಾಪನೆ ನೆರವೇರಿಸಿದರು.
ಹಲವಾರು ರಾಜಕುಮಾರರು ಮತ್ತು ಸಚಿವರ ಜೊತೆಗೆ ಆಗಮಿಸಿದ ದೊರೆಯನ್ನು ಅಲ್-ಅಝರ್‌ನ ಗ್ರಾಂಡ್ ಶೇಖ್ ಅಹ್ಮದ್ ಅಲ್-ತಾಯಿಬ್ ಸ್ವಾಗತಿಸಿದರು. ಅವರು 1000 ವರ್ಷ ಹಳೆಯ ಅಲ್-ಅಝರ್ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಸೀದಿಯ ನವೀಕರಣ ಯೋಜನೆಯ ಬಗ್ಗೆ ಅವರಿಗೆ ವಿವರಗಳನ್ನು ನೀಡಲಾಯಿತು.
ಮಸೀದಿ ಮತ್ತು ವಿಶ್ವವಿದ್ಯಾನಿಲಯದ ನವೀಕರಣಕ್ಕಾಗಿ ಹಾಗೂ ವಿದೇಶಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ನಿಲಯ ಸ್ಥಾಪನೆಗಾಗಿ ಸೌದಿ ಅರೇಬಿಯವು 2014ರಲ್ಲಿ ಈಜಿಪ್ಟ್‌ಗೆ ನಿಧಿಗಳನ್ನು ನೀಡಿತ್ತು. ಅದೇ ವರ್ಷ ಈಜಿಪ್ಟ್‌ನ ಅಧ್ಯಕ್ಷ ಅಬ್ದೆಲ್ ಫತ್ತಾ ಅಲ್ ಸಿಸಿ ನೂತನ ನಗರಕ್ಕಾಗಿ ನ್ಯೂ ಕೈರೋದ ಫಿಫ್ತ್ ಸೆಟಲ್‌ಮೆಂಟ್ ಸಿಟಿಯಲ್ಲಿ ಜಮೀನು ಒದಗಿಸಿದ್ದರು.
ಅದೇ ವೇಳೆ, ದೊರೆ ಸಲ್ಮಾನ್ ಈಜಿಪ್ಟ್‌ನ ಕಾಪ್ಟಿಕ್ ಆರ್ತೊಡಾಕ್ಸ್ ಪೋಪ್ ಎರಡನೆ ಟವಾಡ್ರಸ್‌ರನ್ನು ಶುಕ್ರವಾರ ಭೇಟಿಯಾದರು. ಈ ಮೂಲಕ, ಕಾಪ್ಟಿಕ್ ಆರ್ತೊಡಾಕ್ಸ್ ಪೋಪ್‌ರನ್ನು ಭೇಟಿಯಾದ ಮೊದಲ ಸೌದಿ ದೊರೆಯಾದರು.