ದ್ವಿಚಕ್ರ ವಾಹನ ಕಳವು ಪ್ರಕರಣ: ಮೂವರ ಬಂಧನ
ಸೊತ್ತು ವಶ

ಹರಿಹರ, ಎ.11: ಜಿಲ್ಲೆಯ ವಿವಿಧೆಡೆ ದ್ವಿಚಕ್ರ ವಾಹನಗಳನ್ನು ಕಳವು ಮಾಡಿದ್ದ ಮೂರು ಮಂದಿ ಆರೋಪಿಗಳನ್ನು ಬಂಧಿಸಿ ಸುಮಾರು 9.40 ಲಕ್ಷ ರೂ. ಮೌಲ್ಯದ 18 ವಿವಿಧ ಕಂಪೆನಿಗಳ ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಎಸ್. ಗುಳೇದ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಣೇಬೆನ್ನೂರು ತಾಲೂಕಿನ ಕವಲೆತ್ತು ಗ್ರಾಮದ ಅಬ್ಬು(24), ಹೊಸಪೇಟೆಯ ಕೋಡಿಯಾಲದ ಫೈರೋಝ್ (24) ಹಾಗೂ ಹಾನಗಲ್ ತಾಲೂಕಿನ ಫರೀದ್ (26) ಬಂಧಿತ ಆರೋಪಿಗಳು. ಜಿಲ್ಲೆಯ ವಿವಿಧೆಡೆಗಳಲ್ಲಿ ಮನೆಯ ಮುಂದೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ನಿಲ್ಲಿಸಿದ್ದ ದ್ವಿಚಕ್ರವಾಹನಗಳನ್ನು ಆರೋಪಿಗಳು ಕಳವು ಮಾಡಿ ಮಾರಾಟ ಮಾಡುತ್ತಿದ್ದರು ಎಂದು ಅವರು ವಿವರಿಸಿದರು.
ಈ ಆರೋಪಿಗಳ ಮೇಲೆ ಹರಿಹರ ನಗರ ಠಾಣೆಯಲ್ಲಿ 7 ಪ್ರಕರಣ, ರಾಣೇಬೆನ್ನೂರಿನಲ್ಲಿ 2, ಹಾವೇರಿಯಲ್ಲಿ 2, ಚಿತ್ರದುರ್ಗ, ಹೊಸದುರ್ಗ, ತರೀಕೆರೆ, ಕಡೂರು, ಹೊಸನಗರ, ಸೊರಬ ಹಾಗೂ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ತಲಾ ಒಂದು ಪ್ರಕರಣ ದಾಖಲಾಗಿದ್ದವು ಎಂದು ತಿಳಿಸಿದರು.
ಆರೋಪಿಗಳನ್ನು ಪತ್ತೆ ಹಚ್ಚಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ್ ಎಸ್. ಗುಳೇದ್, ಎಎಸ್ಪಿ ಗಿರಿರಾಜ್ ಭಾವಿಮನಿ ಮಾರ್ಗದರ್ಶನದಲ್ಲಿ, ಗ್ರಾಮಾಂತರ ಡಿವೈಎಸ್ಪಿ ಬಿ.ಎಸ್. ನೇಮೇಗೌಡ ನೇತೃತ್ವದಲ್ಲಿ ಹರಿಹರ ವೃತ್ತ ನಿರೀಕ್ಷಕ ಜೆ.ಎಸ್. ನ್ಯಾಮೇಗೌಡರ್, ಪಿಎಸ್ಸೈ ಹನುಮಂತಪ್ಪಶಿರೇಹಳ್ಳಿ, ಸಣ್ಣನಿಂಗಣ್ಣನವರ್ ಹಾಗೂ ಸಿಬ್ಬಂದಿ ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದರು.
ಕಾರ್ಯಾಚರಣೆಯಲ್ಲಿ ಎಎಸ್ಸೈ ಮಾರಣ್ಣ, ಕುಬೇರನಾಯ್ಕ, ಮಂಜುನಾಥ್ ಬಿ.ವಿ. ಸೈಯದ್ ಗಫಾರ್, ಎಸ್.ಬಿ. ರಮೇಶ್, ಶಾಂತರಾಜ್, ಸಿದ್ದನಗೌಡ, ದ್ವಾರಕೀಶ್, ಫಕ್ರುದ್ದೀನ್ ಅಲಿ, ಧನಲಾಲ್, ನಟರಾಜ್, ಶಿವಪದ್ಮ, ಚಂದ್ರಕಲಾ ಭಾಗವಹಿಸಿದ್ದರು. ಇವರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಬಹುಮಾನ ಘೋಷಿಸಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.







