ಶಿವಮೊಗ್ಗ ಮನಪಾ ಆಯುಕ್ತೆಯಾಗಿ ತುಷಾ ರಮಣಿ
ಮೂಕಪ್ಪ ಕರಭೀಮಣ್ಣವರ್, ಎ.ಆರ್.ರವಿ ರೀತಿ ಆಡಳಿತದಲ್ಲಿ ತರಲಿದ್ದಾರಾ ಬದಲಾವಣೆ?

ಶಿವಮೊಗ್ಗ,ಎ.11: ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರಾಗಿ ಸೋಮವಾರ ತುಷಾ ರಮಣಿಯವರು ನಿರ್ಗಮಿತ ಆಯುಕ್ತ ಎ.ಆರ್.ರವಿಯವರಿಂದ ಅಧಿಕಾರ ಸ್ವೀಕರಿಸಿದ್ದಾರೆ. ವಿದ್ಯುಕ್ತವಾಗಿ ತಮ್ಮ ಕಾರ್ಯಭಾರ ಆರಂಭಿಸಿದ್ದಾರೆ. ಎಂದಿನಂತೆ ನೂತನ ಆಯುಕ್ತೆಗೆ ಕಾರ್ಪೊರೇಟರ್‌ಗಳು, ಅಧಿಕಾರಿ-ಸಿಬ್ಬಂದಿ ವರ್ಗದವರು ಪುಷ್ಪಗುಚ್ಛ ನೀಡಿ ಶುಭ ಹಾರೈಸಿದರು. ಶಿವಮೊಗ್ಗ ಮಹಾನಗರ ಪಾಲಿಕೆಗೆೆ ಪ್ರಪ್ರಥಮ ಮಹಿಳಾ ಆಯುಕ್ತರೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ತುಷಾ ರಮಣಿಯವರ ಮುಂದೆ ನೂರೆಂಟು ಸವಾಲುಗಳಿವೆ. ಪ್ರಸ್ತುತ ಪಾಲಿಕೆ ಆಡಳಿತ ಹಾಗೂ ನಗರದ ರಾಜಕೀಯ ಚಿತ್ರಣ ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ. ಪಾಲಿಕೆಯ ಆಯುಕ್ತರು ಕ್ರಮಿಸಬೇಕಾದ ಹಾದಿಯು ಹೂವಿಗಿಂತ, ಕಲ್ಲು-ಮುಳ್ಳುಗಳೇ ಹೆಚ್ಚಿರುವುದು ಕಂಡುಬರುತ್ತದೆ. ಅತ್ಯಂತ ಎಚ್ಚರಿಕೆ, ಜವಾಬ್ದಾರಿಯಿಂದ ಕಾರ್ಯನಿರ್ವಹಣೆ ಮಾಡಬೇಕಾಗಿದೆ.
ಆಯುಕ್ತರಾಗಿ ಯಾವುದೇ ನಿರ್ಧಾರ ಕೈಗೊಳ್ಳುವಾಗಲೂ ಅತ್ಯಂತ ಜಾಗರೂಕತೆಯಿಂದ ನಡೆದುಕೊಳ್ಳಬೇಕಾಗುತ್ತದೆ. ಕೊಂಚ ಎಡವಟ್ಟಾದರೂ ನಾನಾ ರೀತಿಯ ಆರೋಪ, ಟೀಕೆಗಳಿಗೆ ಗುರಿಯಾಗಬೇಕಾಗುವುದು ನಿಶ್ಚಿತವಾಗಿದೆ. ಎಲ್ಲದಕ್ಕಿಂತ ಮುಖ್ಯವಾಗಿ ರಾಜಕೀಯ ಬಣ್ಣ ಪಡೆದುಕೊಂಡು ರಾಜಕಾರಣಿಗಳ ಬಾಯಿಗೆ ಆಹಾರವಾಗಬೇಕಾಗುತ್ತದೆ. ಹತ್ತು ಹಲವು ರೀತಿಯ ಸಂಕಷ್ಟ, ಮಾನಸಿಕ ಒತ್ತಡಕ್ಕೆ ತುತ್ತಾಗಬೇಕಾಗುತ್ತದೆ ಎಂದು ಹೆಸರು ಬಹಿರಂಗಪಡಿಸಲಿಚ್ಛಿಸದ ಹಿರಿಯ ಅಧಿಕಾರಿಯೋರ್ವರು ಹೇಳುತ್ತಾರೆ. ನೂರೆಂಟು ಸವಾಲುಗಳು:
x
ನೂತನ ಆಯುಕ್ತೆ ತುಷಾ ರಮಣಿಯವರ ಮುಂದೆ ನೂರೆಂಟು ಸವಾಲುಗಳಿವೆ. ಎಲ್ಲದಕ್ಕಿಂತ ಮುಖ್ಯವಾಗಿ ಪಾಲಿಕೆ ಆಡಳಿತವನ್ನು ಯಾವ ರೀತಿಯಲ್ಲಿ ತಮ್ಮ ನಿಯಂತ್ರಣದಲ್ಲಿಟ್ಟುಕೊಳ್ಳುತ್ತಾರೆ ಎಂಬುವುದು ಪ್ರಮುಖವಾಗಿದೆ. ಈ ನಿಟ್ಟಿನಲ್ಲಿ ಆಯುಕ್ತೆಯ ಆಡಳಿತ ಶೈಲಿ ಯಾವ ರೀತಿಯಲ್ಲಿರಲಿದೆ ಎಂಬುವುದು ಸಾರ್ವಜನಿಕ ವಲಯದಲ್ಲಿ ಕುತೂಹಲ ಮೂಡಿಸಿದೆ. ಪ್ರಸ್ತುತ ಶಿವಮೊಗ್ಗ ನಗರವು ಕೇಂದ್ರ ಸರಕಾರದ ಸ್ಮಾರ್ಟ್ ಸಿಟಿ ಹಾಗೂ ಅಮೃತ್ ಯೋಜನೆಯಡಿ ಆಯ್ಕೆಯಾಗಿದೆ. ಅಮೃತ್ ಯೋಜನೆಯಡಿ ಕೆಲಸ ಕಾರ್ಯಗಳು ಅನುಷ್ಠಾನ ಹಂತದಲ್ಲಿದೆ. ಸ್ಮಾರ್ಟ್ ಸಿಟಿಯ ಎರಡನೇ ಹಂತದ ಅಭಿವೃದ್ಧಿಯಲ್ಲಿ ಶಿವಮೊಗ್ಗ ನಗರ ಆಯ್ಕೆಯಾಗುವ ಸಾಧ್ಯತೆಯಿದೆ. ಮತ್ತೊಂದೆಡೆ 24 7 ಕುಡಿಯುವ ನೀರು ಯೋಜನೆ ಕಾರ್ಯಗತಗೊಳ್ಳುವ ಹಂತದಲ್ಲಿದ್ದು ಇವುಗಳ ಸಮರ್ಪಕ ಮೇಲುಸ್ತುವಾರಿಯನ್ನು ಆಯುಕ್ತೆ ಮಾಡಬೇಕಾಗಿದೆ. ಉಳಿದಂತೆ ಈಗಿರುವ ಪೇಪರ್‌ಲೆಸ್ ಆಡಳಿತ, ಆನ್‌ಲೈನ್ ಮೂಲಕ ದೂರು ದಾಖಲಿಸುವ ವ್ಯವಸ್ಥೆ, ಪಾಲಿಕೆ ಆಸ್ತಿ ಸಂರಕ್ಷಣೆ, ಒತ್ತುವರಿ ತೆರವು, ಸೆಟ್‌ಬ್ಯಾಕ್ ನಿಯಮ ಉಲ್ಲಂಘಿಸಿ ನಿರ್ಮಾಣ ಮಾಡುವ ಕಟ್ಟಡಗಳ ಪತ್ತೆ, ಕುಡಿಯುವ ನೀರು ಪೂರೈಕೆ, ಘನತ್ಯಾಜ್ಯ ಸಮಸ್ಯೆ, ಕಡತಗಳ ವಿಲೇವಾರಿ ಸೇರಿದಂತೆ ಇತರೆ ಗುರುತರ ಜವಾಬ್ದಾರಿಗಳನ್ನು ನೂತನ ಆಯುಕ್ತೆ ಯಾವ ರೀತಿಯಲ್ಲಿ ನಿರ್ವಹಣೆ ಮಾಡುತ್ತಾರೆ ಎಂಬುವುದನ್ನು ಇನ್ನಷ್ಟೆ ಕಾದು ನೋಡಬೇಕಾಗಿದೆ.







