ಬಜೆಟ್‌ನಲ್ಲಿ ಸರಕಾರ ಮುಜರಾಯಿ ಇಲಾಖೆಗೆ ಅನುದಾನ ನೀಡಿಲ್ಲ: ಶಾಸಕ ವೈಎಸ್‌ವಿ. ದತ್ತ
ಶ್ರೀ ಕಳ್ಳಿಬೀರಲಿಂಗೇಶ್ವರ ನೂತನ ದೇವಾಲಯದ ಪ್ರವೇಶ ಉತ್ಸವ,ಗೋಪುರದ ಕಳಸಾರೋಹಣ

ಕಡೂರು, ಎ.11: ಜನರಲ್ಲಿ ದೈವಭಕ್ತಿ ದೇವರಲ್ಲಿ ನಂಬಿಕೆ ಇರಬೇಕು ಎಂಬ ಕಾರಣಕ್ಕೆ ದೇವಾಲಯಗಳು ನಿರ್ಮಾಣದ ಜೊತೆಗೆ ಗ್ರಾಮಗಳ ಅಭಿವೃದ್ಧಿಯಾಗಬೇಕಿದೆ ಎಂದು ಶಾಸಕ ವೈಎಸ್‌ವಿ. ದತ್ತ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಅವರು ತಾಲೂಕಿನ ಗರ್ಜೆ ಗ್ರಾಮದಲ್ಲಿ ಶ್ರೀ ಕಳ್ಳಿಬೀರ ಲಿಂಗೇಶ್ವರ ಸ್ವಾಮಿ ನೂತನ ದೇವಾಲಯದ ಪ್ರವೇಶ ಉತ್ಸವ ಮತ್ತು ಗೋಪುರ ದ ಕಳಸಾರೋಹಣ ಹಾಗೂ ಕನಕದಾಸರ ಪ್ರತಿಮೆ ಅನಾವರಣದ ಧಾರ್ಮಿಕ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕ್ಷೇತ್ರದ ಯಾವುದೇ ಗ್ರಾಮಗಳಿಗೆ ಭೇಟಿ ನೀಡಿದರೆ, ಪ್ರಥಮವಾಗಿ ಗ್ರಾಮಕ್ಕೆ ಬೇಕಾದ ಮೂಲಭೂತ ಸೌಲಭ್ಯಗಳನ್ನು ಕೇಳದೆ ದೇವಾಲಯಗಳ ನಿರ್ಮಾಣಕ್ಕೆ ಹಣ ಕೇಳುವುದು ವಾಡಿಕೆಯಾಗಿದೆ. ದೇವಾಲಯಗಳ ನಿರ್ಮಾಣಕ್ಕಿಂತ ಪ್ರತಿಯೊಂದು ಗ್ರಾಮಗಳ ಅಭಿವೃದ್ಧಿಯಾಗಬೇಕಿದೆ ಎಂದು ಹೇಳಿದರು.
ಪ್ರತಿ ಗ್ರಾಮದಲ್ಲಿ ಸಮುದಾಯಕ್ಕೊಂದು ದೇವಾಲಯ ಎಂಬಂತಾಗಿದೆ. ಯಾವುದೇ ದೇವಾಲಯ ನಿರ್ಮಾಣವಾದರೂ ಇದರ ಜೊತೆಗೆ ಮನುಷ್ಯರು ಪರಿವರ್ತನೆಯಾಗಬೇಕಿದೆ. ಈ ಸಾಲಿನ ಬಜೆಟ್‌ನಲ್ಲಿ ಮುಜರಾಯಿ ಇಲಾಖೆಗೆ ಸರಕಾರ ನಯಾಪೈಸೆ ನೀಡಿರುವುದಿಲ್ಲ, ಶ್ರೀಮಂತ ದೇವರುಗಳಿಗೆ ಸರಕಾರ ಯಾವುದೇ ಅನುದಾನ ನೀಡುವುದು ಬೇಡ ಕೆಳವರ್ಗದ ಅಹಿಂದ ದೇವರುಗಳಿಗೆ ಅನುದಾನ ನೀಡಲು ಮುಂದಿನ ದಿನಗಳಲ್ಲಿ ಅಭಿವೃದ್ಧಿ ಕೆಲಸಗಳಿಗೆ ಗಮನಹರಿಸಬೇಕಿದೆ ಎಂದರು.
ಜಿಪಂ ಸದಸ್ಯ ಕೆ.ಆರ್. ಮಹೇಶ್‌ಒಡೆಯರ್ ಮಾತನಾಡಿ, ಭಕ್ತಿ, ನಂಬಿಕೆ ಇರುವವರು ದೇವಾಲಯಗಳಿಗೆ ಹೋಗುತ್ತಾರೆ ಎಂಬುದನ್ನು ರೂಢಿಸಿಕೊಂಡು ಬಂದಿರುತ್ತೇವೆ. ಹಿಂದೆ ಗುರುವಿಗೆ ಅತಿ ಭಕ್ತಿ ಈಗ ಇತ್ತೀಚೆಗೆ ಜನ ಧಾರ್ಮಿಕತೆಯಿಂದ ದೂರವಾಗುತ್ತಿದ್ದಾರೆ. ಸಂಕುಚಿತ ಭಾವನೆ ಎಲ್ಲರಲ್ಲೂ ಆವರಿಸಿದೆ. ಇದು ಹೋಗಬೇಕಿದೆ. ಧಾರ್ಮಿಕವಾಗಿ ದೇವಾಲಯಗಳು ಬೇಕಿದೆ, ನಂಬಿಕೆಗಿಂತ ಹೆಚ್ಚಾಗಿ ಹೆದರಿಕೆಯಿಂದ ದೇವಾಲಯಗಳಿಗೆ ಹಣ ನೀಡುವುದೇ ಹೆಚ್ಚಾಗಿದೆ ಎಂದು ನುಡಿದರು.
ಸಮಾರಂಭದಲ್ಲಿ ಕಾಗಿನೆಲೆ ಹೊಸದುರ್ಗ ಶಾಖಾ ಮಠದ ಶ್ರೀ ಈಶ್ವರನಂದಾಪುರಿ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಜಿಪಂ ಸದಸ್ಯರಾದ ವನಮಾಲ ದೇವರಾಜ್, ಕಾವೇರಿಲಕ್ಕಪ್ಪ, ಲೋಲಾಕ್ಷಿಬಾಯಿ, ತಾಪಂ ಸದಸ್ಯೆ ಕವಿತಾಜಗದೀಶ್, ಗರ್ಜೆ ಗ್ರಾಪಂ ಅಧ್ಯಕ್ಷೆ ಲಕ್ಕಮ್ಮ ಕರಿಯಪ್ಪ, ಆಸಂದಿ ರೇವಣಸಿದ್ದೇಶ್ವರ ಸಂಸ್ಥಾನ ಮಠದ ಅಧ್ಯಕ್ಷ ರೇವಣ್ಣ, ಮುಖಂಡರಾದ ಕೆ.ಎಂ. ಮಹೇಶ್ವರಪ್ಪ, ರೇವಣ್ಣ, ಬಿ.ಕೆ. ಜಯಣ್ಣ, ಎಸ್. ತಮ್ಮಯ್ಯ ಉಪಸ್ಥಿತರಿದ್ದರು.







