ಎಸಿಬಿ ಹಿಂಪಡೆಯುವ ಪ್ರಶ್ನೆಯೇ ಇಲ್ಲ: ಸಚಿವ ಪರಮೇಶ್ವರ್

ಬೆಂಗಳೂರು, ಎ.11: ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ರಚನೆ ಮಾಡಿ ಸರಕಾರ ಹೊರಡಿಸಿರುವ ಆದೇಶವನ್ನು ಹಿಂಪಡೆಯುವ ಪ್ರಶ್ನೆಯೆ ಇಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.
ಸೋಮವಾರ ವಿಕಾಸಸೌಧದಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಲೋಕಾಯುಕ್ತ ದಲ್ಲಿದ್ದ ಪ್ರಕರಣಗಳನ್ನು ಎಸಿಬಿಗೆ ವರ್ಗಾವಣೆ ಮಾಡಬೇಕೆಂಬ ಸರಕಾರದ ನಿರ್ಧಾರಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಅಲ್ಲದೆ, ಸಾರ್ವಜನಿಕ ವಲಯದಲ್ಲಿ ಮೂಡಿರುವ ಗೊಂದಲಗಳನ್ನು ದೂರ ಮಾಡಬೇಕಿದೆ ಎಂದರು.
ರಾಜ್ಯದಲ್ಲಿ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಎಸಿಬಿ ಹೊಸ ಹೆಜ್ಜೆ ಎಂಬುದನ್ನು ಸಾರ್ವಜನಿಕರಿಗೆ ಮನದಟ್ಟು ಮಾಡಿ ಕೊಡಬೇಕಿದೆ. ಎಸಿಬಿ ರಚನೆ ಮಾಡುತ್ತಿರುವ ಮೊದಲ ರಾಜ್ಯ ನಮ್ಮದಲ್ಲ. ದೇಶದ 18 ರಾಜ್ಯಗಳಲ್ಲಿ ಎಸಿಬಿ ಕಾರ್ಯನಿರ್ವಹಿಸುತ್ತಿದೆ. ಮಹಾರಾಷ್ಟ್ರ, ಆಂಧ್ರಪ್ರದೇಶಗಳಲ್ಲಿ 1965ರಿಂದಲೂ ಎಸಿಬಿ ಅಸ್ತಿತ್ವದಲ್ಲಿದೆ ಎಂದು ಅವರು ತಿಳಿಸಿದರು.
ಎಸಿಬಿ ಅಸ್ತಿತ್ವದಲ್ಲಿರುವ 18 ರಾಜ್ಯಗಳಲ್ಲಿ ಲೋಕಾಯುಕ್ತ ಸಂಸ್ಥೆಯು ಇದೆ. ಈ ಎರಡು ಸಂಸ್ಥೆಗಳು ಪ್ರತ್ಯೇಕ ಕಾಯ್ದೆಗಳಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಸುಮಾರು 12 ರಾಜ್ಯಗಳಲ್ಲಿ ಮುಖ್ಯಮಂತ್ರಿಯ ಅಧೀನದಲ್ಲೆ ಎಸಿಬಿಯಿದೆ. ಕೆಲವು ರಾಜ್ಯಗಳಲ್ಲಿ ಗೃಹ ಇಲಾಖೆ ಅಡಿಯಲ್ಲಿ ಹಾಗೂ ನಾಲ್ಕು ರಾಜ್ಯಗಳಲ್ಲಿ ಮುಖ್ಯಮಂತ್ರಿ ಹಾಗೂ ಗೃಹ ಇಲಾಖೆ ಅಡಿಯಲ್ಲಿ ಎಸಿಬಿಯಿದೆ ಎಂದು ಅವರು ಮಾಹಿತಿ ನೀಡಿದರು.
ಎಸಿಬಿಗೆ ಅಗತ್ಯವಿರುವ ಸಿಬ್ಬಂದಿಯನ್ನು ನೀಡಲಾಗಿದೆ. ಎಡಿಜಿಪಿ ಹುದ್ದೆಯನ್ನು ಸೃಜಿಸಲಾಗಿದೆ. ಇದಲ್ಲದೆ, ಎಸ್ಪಿಗಳು, ಡಿವೈಎಸ್ಪಿಗಳನ್ನು ನೇಮಕ ಮಾಡಲಾಗಿದೆ. ಎಸಿಬಿ ಪೂರ್ಣ ಪ್ರಮಾಣದಲ್ಲಿ ಅಸ್ತಿತ್ವಕ್ಕೆ ಬರುವವರೆಗೆ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಯಲ್ಲಿ ಬರುವ ದೂರುಗಳನ್ನು ದಾಖಲಿಸಿಕೊಳ್ಳುವಂತೆ ರಾಜ್ಯದ ಎಲ್ಲ ಪೊಲೀಸ್ ಠಾಣೆಗಳಿಗೂ ಸೂಚನೆ ನೀಡಲಾಗಿದೆ ಎಂದು ಪರಮೇಶ್ವರ್ ಹೇಳಿದರು.
ಕಲಬುರ್ಗಿ ಹತ್ಯೆ ಪ್ರಕರಣ: ಸಂಶೋಧಕ ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಸರಕಾರ ವಿಶೇಷ ತಂಡವನ್ನು ರಚನೆ ಮಾಡಿ, 30-40 ಇನ್ಸ್‌ಪೆಕ್ಟರ್‌ಗಳು, ಡಿವೈಎಸ್ಪಿಗಳನ್ನು ನೇಮಿಸಿದೆ. ಅಂತಾರಾಜ್ಯಕ್ಕೆ ಸಂಬಂಧಿಸಿದ ಪ್ರಕರಣವಾಗಿರುವುದರಿಂದ ಪರಿಣಿತರನ್ನು ಒದಗಿಸಲಾಗಿದೆ. ಹಂತರನ್ನು ಶೀಘ್ರವೆ ಬಂಧಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಪರಮೇಶ್ವರ್ ತಿಳಿಸಿದರು.
ಸಂಘರ್ಷಕ್ಕಿಂತ ಪರಿಹಾರ ಮುಖ್ಯ: ಪಿಯು ಉಪನ್ಯಾಸಕರ ಧರಣಿ ಕುರಿತು ಪ್ರತಿಕ್ರಿಯಿಸಿದ ಅವರು, ಸಮಸ್ಯೆಗೆ ಸಂಘರ್ಷಕ್ಕಿಂತ ಶಾಶ್ವತ ಪರಿಹಾರ ಮುಖ್ಯ. ಪ್ರತಿ ವರ್ಷ ವೌಲ್ಯಮಾಪನದ ಸಂದರ್ಭದಲ್ಲಿ ಈ ರೀತಿಯ ಧರಣಿಗಳು ನಡೆಯುವುದು ಸರಿಯಲ್ಲ. ಉಪನ್ಯಾಸಕರ ಬೇಡಿಕೆಗಳಿಗೆ ಸಂಬಂಧಿಸಿದಂತೆ ಸರಕಾರವು ಸೂಕ್ತ ತೀರ್ಮಾನ ಕೈಗೊಳ್ಳಬೇಕಿದೆ ಎಂದರು.
ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಪಿಯು ಉಪನ್ಯಾಸಕರು ತಮ್ಮ ಧರಣಿಯನ್ನು ಕೈಬಿಡಬೇಕು. ಸರಕಾರ ಅವರ ಎಲ್ಲ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಲಿದೆ. 1.75 ಲಕ್ಷ ಮಕ್ಕಳು ಪರೀಕ್ಷೆ ಬರೆದಿದ್ದಾರೆ. ಎ.12ರಂದು ರಸಾಯನ ಶಾಸ್ತ್ರ ಮರುಪರೀಕ್ಷೆ ನಡೆಯಲಿದೆ. ಆನಂತರ, ಉತ್ತರ ಪತ್ರಿಕೆಗಳ ವೌಲ್ಯಮಾಪನ ಕಾರ್ಯ ಆರಂಭವಾಗಬೇಕಿದೆ. ಎಸ್ಮಾ ಜಾರಿ ಸಂಬಂಧ ಚಿಂತನೆ ನಡೆಸಿಲ್ಲ ಎಂದು ಅವರು ಹೇಳಿದರು.
ಪಿಯು ರಸಾಯನ ಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಶಿವಕುಮಾರ್ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಶೋಧ ಕಾರ್ಯ ನಡೆಸಲಾಗಿದೆ. ಆದಷ್ಟು ಶೀಘ್ರದಲ್ಲೆ ಆರೋಪಿಯನ್ನು ಬಂಧಿಸಿ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ಸಿಐಡಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಪರಮೇಶ್ವರ್ ಹೇಳಿ ದರು.
‘ಎಸಿಬಿ’ ಸಭೆ ಮುಂದೂಡಿಕೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಎಸಿಬಿ ಕುರಿತು ಚರ್ಚೆ ನಡೆಸಲು ಇಂದು ಸಭೆಯನ್ನು ಕರೆದಿದ್ದರು. ಆದರೆ, ಕಾನೂನು ಸಚಿವ ಟಿ.ಬಿ. ಜಯಚಂದ್ರ ಅನುಪಸ್ಥಿತಿ ಹಿನ್ನೆಲೆಯಲ್ಲಿ ಸಭೆಯನ್ನು ಎ.12ರಂದು ಬೆಳಗ್ಗೆ 10 ಗಂಟೆಗೆ ಮುಂದೂಡಲಾಗಿದೆ.
ಡಾ.ಜಿ.ಪರಮೇಶ್ವರ್, ಗೃಹ ಸಚಿವ.







