ದ.ಕ. ಜಿಲ್ಲೆಯಲ್ಲಿ 169 ಕೋಟಿ ರೂ. ರಾಜಸ್ವ ಸಂಗ್ರಹ
ಮಂಗಳೂರು, ಎ.11: ನಗರದ (ಮಂಗಳೂರು) ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಪ್ರತಿ ತಿಂಗಳು ಸರಾಸರಿ 3,500 ವಿವಿಧ ವರ್ಗಗಳ ವಾಹನಗಳು ನೋಂದಣಿಯಾಗುತ್ತಿವೆ. ಇದರಿಂದ ನಗರದಲ್ಲಿ ವಾಹನ ದಟ್ಟಣೆ ಇನ್ನಷ್ಟು ಹೆಚ್ಚುವ ಸಂಭವವಿದೆ. ಈ ಪೈಕಿ 300 ಸಿ.ಸಿ ವರೆಗಿನ ಸಾಮರ್ಥ್ಯದ (ಸಾರಿಗೇತರ)ವಾಹನಗಳು, ಲಘು ಮೋಟಾರು ವಾಹನಗಳು ಗರಿಷ್ಠ ಪ್ರಮಾಣದಲ್ಲಿ ನೋಂದಣಿಯಾಗುತ್ತಿವೆ. ಸಾರಿಗೆ ವಾಹನಗಳ ಪೈಕಿ ಸರಕು ಸಾಗಾಟ ವಾಹನಗಳು ಹಾಗೂ ಆಟೊ ರಿಕ್ಷಾ ಗರಿಷ್ಠ ಪ್ರಮಾಣದಲ್ಲಿ ನೋಂದಣಿಯಾಗುತ್ತಿವೆ ಎಂದು ಸಾರಿಗೆ ಇಲಾಖೆಯ ಮೂಲಗಳು ತಿಳಿಸಿವೆ.
ಸಾರಿಗೆ ವಾಹನಗಳಲ್ಲಿ 300 ಸಿಸಿವರೆಗಿನ ಸಾಮರ್ಥ್ಯದ ವಾಹನಗಳು 2,200, ಲಘು ಮೋಟಾರು ವಾಹನ 850.50 ಸಿಸಿಗಿಂತ ಕಡಿಮೆ ಸಾರ್ಮಥ್ಯದ ವಾಹನಗಳು 27. 300 ಸಿಸಿಗಿಂತ ಹೆಚ್ಚಿನ ಸಾಮರ್ಥ್ಯದ ವಾಹನಗಳು 40. ಸಾರಿಗೆ ವಾಹನಗಳ ಪೈಕಿ ಪ್ರತಿ ತಿಂಗಳು 170 ಸರಕು ಸಾಗಣೆ ವಾಹನಗಳು, 150 ಆಟೊ ರಿಕ್ಷಾಗಳು, 40 ಟ್ಯಾಕ್ಸಿಗಳು, 11 ಮೋಟಾರ್ ಕ್ಯಾಬ್‌ಗಳು, 8 ಶಾಲಾ ವಾಹನಗಳು, 4 ಮಜಲು ವಾಹನಗಳು,2 ಒಪ್ಪಂದದ ವಾಹನಗಳು,1 ಪ್ರವಾಸಿ ವಾಹನ ಸರಾಸರಿ ನೋಂದಣಿಯಾಗುತ್ತದೆ.
ಮಂಗಳೂರಿನಲ್ಲಿ ವಾಹನ ನೋಂದಣಿ ಸಂಖ್ಯೆ ಹೆಚ್ಚಿರುವ ಕಾರಣ ಸರಕಾರದ ಬೊಕ್ಕಸಕ್ಕೆ ನಿಗದಿತ ಗುರಿಗಿಂತಲೂ ಹೆಚ್ಚಿನ ರಾಜಸ್ವ ಸಂಗ್ರಹವಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಿಸಿದಂತೆ 2015-16ನೆ ಸಾಲಿಗೆ 165ಕೋಟಿ ರಾಜಸ್ವ ಸಂಗ್ರಹವಾಗಬಹುದೆಂದು ಅಂದಾಜಿಸಲಾಗಿತ್ತು. ಆದರೆ ನಿಗದಿಪಡಿಸಿದ ಗುರಿ ಮೀರಿ 169 ಕೋಟಿ 76 ಲಕ್ಷ ರೂ. ರಾಜಸ್ವ ಸಂಗ್ರಹ ವಾಗಿದೆ. ಹಿಂದಿನ ವರ್ಷಗಳಲ್ಲಿ ಈ ಪ್ರಮಾಣ 150 ಕೋಟಿಗಳಿಗೆ ಸೀಮಿತವಾಗಿತ್ತು ಎಂದು ಸಾರಿಗೆ ಇಲಾ ಖೆಯ ಮೂಲಗಳು ತಿಳಿಸಿವೆ.
ಬಂಗ್ರಕೂಳೂರಿನಲ್ಲಿ ವಾಹನ ತಪಾಸಣೆ: ಮಂಗಳೂರು ಪ್ರಾದೇಶಿಕ ಸಾರಿಗೆ ಆವರಣದಲ್ಲಿ ವಾಹನ ತಪಾಸಣೆ ಪರವಾನಿಗೆ ಗಾಗಿ ಹಾಗೂ ಇನ್ನಿತರ ಇಲಾಖಾ ಕ್ರಮಗಳಿಗಾಗಿ ವಾಹನಗಳು ಆಗಮಿಸುತ್ತಿರುವುದರಿಂದ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಬಂಗ್ರ ಕೂಳೂರು ಪ್ರದೇಶದಲ್ಲಿ ಸಾರಿಗೆ ವಾಹನಗಳ ತಪಾಸಣೆ ನಡೆಯುತ್ತಿದೆ.
ನರ್ಮ್ ಬಸ್‌ಗಳ ಓಡಾಟ: ನಗರದ ಮೂಲಕ ನರ್ಮ್ ಯೋಜನೆಯಡಿ 17 ಮಾರ್ಗಗಳಲ್ಲಿ ನಗರ ಸಾರಿಗೆ ವಾಹನಗಳಿಗೆ ರಹದಾರಿ ನೀಡಲಾಗಿದೆ. ಮುಂದಿನ ಹಂತದಲ್ಲಿ ನಗರದ ಕೇಂದ್ರದಿಂದ (ಸ್ಟೇಟ್‌ಬ್ಯಾಂಕ್ ಬಳಿಯಿಂದ) ವಿವಿಧ ಕಡೆಗೆ ನಗರ ಸಾರಿಗೆ ಬಸ್ಸುಗಳು ಓಡಾಟ ನಡೆಸಲಿದೆ ಎಂದು ರಾಜ್ಯ ಸಾರಿಗೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.





