ಮರಳು ಸಂಕಷ್ಟ: ಸರಕಾರ ಸ್ಪಂದಿಸಲಿ
ಮಾನ್ಯರೆ,
ಕರ್ನಾಟಕದ ಜನರಿಗೆ ಮರಳಿನ ಅಭಾವ ಈ ತನಕ ಕಂಡರಿಯದ ಒಂದು ಕಹಿ ನೆನಪು. ಅದರಲ್ಲೂ ನಮ್ಮ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಜನರು ಇಂತಹ ಪರಿಸ್ಥಿತಿಯನ್ನು ಕನಸಿನಲ್ಲೂ ಎನಿಸಲಿಲ್ಲ. ನಮ್ಮ ಕಾಲ ಬುಡದಲ್ಲಿ ಸಿಗುವ ಮರಳಿಗೆ ಜನರು ಪಡುವ ಕಷ್ಟ ಹೇಳತೀರದು. ನಮ್ಮ ಮಾನ್ಯ ಮಂತ್ರಿಯವರಲ್ಲಿ ಕೇಳಿದರೆ ಈ ತೊಂದರೆ ನಮ್ಮ ಸರಕಾರದಿಂದ ಆಗುತ್ತಿರುವುದಲ್ಲ. ಸುಪ್ರೀಂ ಕೋರ್ಟ್ ನ ತೀರ್ಪಿನಿಂದಾಗಿ ಈ ರೀತಿ ಕಷ್ಟ ಆಗಿರುತ್ತದೆ. ಇನ್ನು ಕೆಲವೇ ದಿನಗಳಲ್ಲಿ ಸರಿ ಹೋಗುತ್ತದೆ ಎಂದು ಸಮಜಾಯಿಷಿ ನೀಡುತ್ತಾರೆ. ಈ ಮಾತನ್ನೇ ಎರಡು ತಿಂಗಳುಗಳಿಂದ ಕೇಳುತ್ತಾ ಇದ್ದೇವೆ. ಹಾಗಾದರೆ ಕರ್ನಾಟಕದಲ್ಲಿ ಕಾಂಗ್ರೆಸ್‌ನ್ನು ಬೆಂಬಲಿಸಿ, ಆ ಪಕ್ಷದ ಸರಕಾರ ಬರುವಂತೆ ಮಾಡಿದ ಜನರ ಪರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ಹೋರಾಡಿ ಜನರಿಗೆ ನ್ಯಾಯ ದೊರಕಿಸಿಕೊಡಲು ಸರಕಾರಕ್ಕೆ ಸಾಧ್ಯವಿಲ್ಲವೇ?
ಕೀಳು ರಾಜಕೀಯದಿಂದಾಗಿ ನಮ್ಮಳಗೆ ನಾವು ಹೋರಾಡುತ್ತಿದ್ದರೂ ಜನರ ಗೋಳಿಗೆ ಯಾವ ಪಾರ್ಟಿಯವರು ತಲೆಬಿಸಿ ಮಾಡಿಕೊಳ್ಳುವುದು ತೋರುವುದಿಲ್ಲ.
ಸರಕಾರ ಜನರಿಗೆ ಅನ್ನಭಾಗ್ಯ, ಸೈಕಲ್‌ಭಾಗ್ಯ, ಶೂ ಭಾಗ್ಯ, ಇತ್ಯಾದಿ ಸವಲತ್ತುಗಳನ್ನು ಕೊಟ್ಟಿದರೂ, ಸರಕಾರದ ಬೊಕ್ಕಸಕ್ಕೆ ಏನೂ ಖರ್ಚು ಇಲ್ಲದ ಮರಳು ಭಾಗ್ಯವನ್ನು ಜನರಿಗೆ ಕೊಡಲು ನಮ್ಮ ಸರಕಾರದಿಂದ ಆಗದ್ದು ವಿಷಾದನೀಯ.





