ಪರಮಾಣು ಅಸ್ತ್ರಗಳಿಲ್ಲದ ಜಗತ್ತಿನ ನಿರ್ಮಾಣಕ್ಕೆ ಜಿ7 ಘೋಷಣೆ

ಸೋಮವಾರ ಹಿರೋಶಿಮ ಶಾಂತಿ ಸ್ಮಾರಕ ಪಾರ್ಕ್ನಲ್ಲಿ ಹೂಮಾಲೆಗಳನ್ನು ಇರಿಸಿ ಹೊರಬರುತ್ತಿರುವ ಜಿ-7 ಗುಂಪಿನ ವಿದೇಶ ಸಚಿವರು.
ಹಿರೋಶಿಮ (ಜಪಾನ್), ಎ. 11: ‘‘ಪರಮಾಣು ಅಸ್ತ್ರಗಳಿಲ್ಲದ ಜಗತ್ತಿ’’ನ ನಿರ್ಮಾಣಕ್ಕಾಗಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರಿ ಮತ್ತು ಜಿ7ಗುಂಪಿನ ವಿದೇಶ ಸಚಿವರು ಇಂದು ಕರೆ ನೀಡಿದ್ದಾರೆ. ಆದರೆ, ಇದನ್ನು ಸಾಧಿಸುವಲ್ಲಿ ಶಸ್ತ್ರಾಸ್ತ್ರಗಳನ್ನು ಪ್ರದರ್ಶಿಸಿ ಬೆದರಿಸುವ ಉತ್ತರ ಕೊರಿಯದ ಪ್ರವೃತ್ತಿ ದೊಡ್ಡ ಸವಾಲಾಗಿದೆ ಎಂದಿದ್ದಾರೆ.
‘‘ಜಗತ್ತನ್ನು ಎಲ್ಲರಿಗೂ ಸುರಕ್ಷಿತವಾಗಿಸುವ ಹಾಗೂ ಅಂತಾರಾಷ್ಟ್ರೀಯ ಸ್ಥಿರತೆಗೆ ಪೂರಕವಾಗಿ ಪರಮಾಣು ಅಸ್ತ್ರಗಳಿಲ್ಲದ ಜಗತ್ತಿಗಾಗಿ ಪರಿಸ್ಥಿತಿಯನ್ನು ಹದಗೊಳಿಸುವ ನಮ್ಮ ಬದ್ಧತೆಯನ್ನು ನಾವು ಪುನರುಚ್ಚರಿಸುತ್ತೇವೆ’’ ಎಂದು ತನ್ನ ‘ಹಿರೋಶಿಮ ಘೋಷಣೆ’ಯಲ್ಲಿ ಗುಂಪು ಹೇಳಿದೆ.
ಜಪಾನ್ ಹಿರೋಶಿಮ ನಗರದಲ್ಲಿರುವ ಪರಮಾಣು ಬಾಂಬ್ ಸ್ಮಾರಕಕ್ಕೆ ಭೇಟಿ ನೀಡಿದ ಬಳಿಕ ಗುಂಪು ಈ ಘೋಷಣೆಯನ್ನು ಹೊರಡಿಸಿದೆ.
‘‘ಸಿರಿಯ ಮತ್ತು ಉಕ್ರೇನ್ ಮುಂತಾದ ಹಲವಾರು ವಲಯಗಳಲ್ಲಿ ಹದಗೆಡುತ್ತಿರುವ ಭದ್ರತಾ ಪರಿಸ್ಥಿತಿ, ಅದರಲ್ಲೂ ಮುಖ್ಯವಾಗಿ ಪದೇ ಪದೇ ಉತ್ತರ ಕೊರಿಯ ನೀಡುತ್ತಿರುವ ಪ್ರಚೋದನೆಗಳಿಂದಾಗಿ ಈ ಕಾರ್ಯ ಸಂಕೀರ್ಣಗೊಳ್ಳುತ್ತಿದೆ’’ ಎಂದಿದೆ.
ಖಂಡಾಂತರ ಪ್ರಕ್ಷೇಪಕ ಕ್ಷಿಪಣಿಗಾಗಿ ವಿನ್ಯಾಸ ಗೊಳಿಸಲಾಗಿರುವ ಇಂಜಿನ್ನ ಪ್ರಾಯೋಗಿಕ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿರುವುದಾಗಿ ಉತ್ತರ ಕೊರಿಯ ಶನಿವಾರ ಹೇಳಿತ್ತು. ಇದರಿಂದ ಅಮೆರಿಕದ ಮೇಲೆ ಪರಮಾಣು ದಾಳಿ ನಡೆಸುವ ಸಾಮರ್ಥ್ಯ ತನಗೆ ಬಂದಿದೆ ಎಂದು ಅದು ಹೇಳಿಕೊಂಡಿತ್ತು. ಜಿ7 ಗುಂಪಿನ ಸಮ್ಮೇಳನದ ಕೊನೆಯಲ್ಲಿ ಘೋಷಣೆಯನ್ನು ಹೊರಡಿಸಲಾಯಿತು.
ಪರಮಾಣು ಬಾಂಬ್ ಸ್ಮಾರಕಕ್ಕೆ ಪ್ರಥಮ ಭೇಟಿ ನೀಡಿದ ಕೆರಿ
ಹಿರೋಶಿಮ, ಎ. 11: ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರಿ ಸೋಮವಾರ ಹಿರೋಶಿಮದ ಪರಮಾಣು ಬಾಂಬ್ ಮ್ಯೂಸಿಯಂಗೆ ಭೇಟಿ ನೀಡಿದರು. ಹಾಗೂ ಆ ಮೂಲಕ, 1945ರಲ್ಲಿ ಅಮೆರಿಕದ ನಡೆಸಿದ ಪರಮಾಣು ಬಾಂಬ್ ದಾಳಿಯ ಸಂತ್ರಸ್ತರ ಸ್ಮರಣೆಗಾಗಿ ನಿರ್ಮಿಸಿದ ಸ್ಮಾರಕಕ್ಕೆ ಭೇಟಿ ನೀಡಿದ ಅಮೆರಿಕದ ಮೊದಲ ವಿದೇಶಾಂಗ ಕಾರ್ಯದರ್ಶಿಯಾದರು.
ಜಿ7 ಗುಂಪಿನ ಇತರ ದೇಶಗಳಾದ ಬ್ರಿಟನ್, ಕೆನಡ, ಫ್ರಾನ್ಸ್, ಜರ್ಮನಿ, ಇಟಲಿ ಮತ್ತು ಜಪಾನ್ಗಳ ವಿದೇಶ ಸಚಿವರೂ ಸ್ಮಾರಕಕ್ಕೆ ಭೇಟಿ ನೀಡಿದರು.
ಜಿ7 ಗುಂಪಿನಲ್ಲಿರುವ ಇತರ ಎರಡು ಪರಮಾಣು ಶಕ್ತ ದೇಶಗಳಾದ ಬ್ರಿಟನ್ ಮತ್ತು ಫ್ರಾನ್ಸ್ಗಳ ವಿದೇಶ ಸಚಿವರೂ ಈ ಸ್ಮಾರಕಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲ ಬಾರಿಯಾಗಿದೆ.
ಹಿರೋಶಿಮ ಸ್ಮಾರಕಕ್ಕೆ ಭೇಟಿ ನೀಡುವಾಗ ಪರಮಾಣು ದಾಳಿ ನಡೆಸಿರುವುದಕ್ಕಾಗಿ ಕೆರಿ ಅಮೆರಿಕದ ಪರವಾಗಿ ಕ್ಷಮೆ ಕೋರುವುದಿಲ್ಲ ಎಂಬುದನ್ನು ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ರವಿವಾರ ಸ್ಪಷ್ಟಪಡಿಸಿದ್ದರು.







