ರೋಗ ಬಾರದಂತೆ ಮುನ್ನೆಚ್ಚರಿಕೆ ವಹಿಸುವುದು ಮುಖ್ಯ: ಸೊರಕೆ

ಉಡುಪಿ, ಎ.11: ರೋಗ ಬಂದ ಮೇಲೆ ಚಿಕಿತ್ಸೆ ಪಡೆಯುವುದಕ್ಕಿಂತ, ರೋಗಗಳು ಬಾರದಂತೆ ಮುನ್ನೆಚ್ಚರಿಕೆ ವಹಿಸುವುದು ಉತ್ತಮ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ ಹೇಳಿದ್ದಾರೆ.
ಸೋಮವಾರ ಉಡುಪಿಯ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನಡೆದ ಪೋಲಿಯೊ ಲಸಿಕೆ ನೀಡುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಭಾರತ ಪೋಲಿಯೊ ರೋಗ ಮುಕ್ತ ದೇಶವಾಗಿದೆ. ಆದರೆ ನೆರೆಯ ದೇಶಗಳಿಂದ ಪೋಲಿಯೊ ಹರಡುವ ಸಾಧ್ಯತೆಯಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಮಕ್ಕಳಿಗೆ ಪೋಲಿಯೊ ಲಸಿಕೆ ಹಾಗೂ ಚುಚ್ಚುಮದ್ದು ನೀಡಲಾಗುತ್ತಿದೆ ಎಂದವರು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿನಿಧಿ ಸತೀಶ್ಚಂದ್ರ, ಮಕ್ಕಳಿಗೆ 6ನೆ ಮತ್ತು 14ನೆ ವಾರದಲ್ಲಿ ಚುಚ್ಚುಮದ್ದು ಮೂಲಕ ಹಾಗೂ ಬಾಯಿ ಮೂಲಕ ಪೋಲಿಯೊ ಲಸಿಕೆ ನೀಡಲಿದ್ದು, ಇದರಿಂದ ಪೋಲಿಯೊ ವಿರುದ್ಧ ದುಪ್ಪಟ್ಟು ರಕ್ಷಣೆ ಲಭ್ಯವಾಗಲಿದೆ ಎಂದರು.
ಚುಚ್ಚುಮದ್ದು ಮೂಲಕ ಪೋಲಿಯೊ ಲಸಿಕೆ ನೀಡುವುದು ಬಾಯಿ ಮೂಲಕ ನೀಡುವ ಪೋಲಿಯೊ ಲಸಿಕೆಗೆ ಬದಲಿಯಾಗಿ ಅಲ್ಲ. ಒಂದು ವೇಳೆ ನಮ್ಮ ದೇಶದಲ್ಲಿ ಮತ್ತೆ ಪೋಲಿಯೊ ಕಾಣಿ ಸಿಕೊಂಡರೂ ಈ ಎರಡೂ ಲಸಿಕೆಗಳಿಂದ ಪೋಲಿಯೊದಿಂದ ಉಂಟಾಗುವ ತೊಂದರೆಯನ್ನು ತಡೆಗಟ್ಟಬಹುದಾಗಿದೆ ಎಂದು ಸತೀಶ್ಚಂದ್ರ ಹೇಳಿದರು.
ಜಿಪಂ ಸಿಇಒ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಜಿಲ್ಲಾ ಸರ್ಜನ್ ಡಾ.ಮಹೇಂದ್ರ, ರೋಟರಿ ಕಾರ್ಯದರ್ಶಿ ರಾಮಚಂದ್ರ ಉಪಾಧ್ಯಾಯ, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ಎಂ.ಜಿ.ರಾಮ, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಡಾ. ಕಿಶೋರಿ, ಅಮ ರನಾಥ ಶಾಸ್ತ್ರಿ, ರೋಟರಿಯ ಲಸಿಕಾ ಉಸ್ತುವಾರಿ ಮುಖ್ಯಸ್ಥ ಐ.ಕೆ ಜಯಚಂದ್ರ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರೋಹಿಣಿ ಸ್ವಾಗತಿಸಿದರು. ರೋಟರಿ ಅಧ್ಯಕ್ಷ ಪ್ರಭಾಕರ ಮಲ್ಯ ವಂದಿಸಿದರು.







