ಇಂದು ಸರಕಾರಕ್ಕೆ ರಸಾಯನಶಾಸ್ತ್ರ ಪರೀಕ್ಷೆ

ಬೆಂಗಳೂರು, ಎ.11: ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ದ್ವಿತೀಯ ಪಿಯುಸಿ ರಸಾಯನ ಶಾಸ್ತ್ರ ವಿಷಯದ ಮರು ಪರೀಕ್ಷೆ ಮಂಗಳವಾರ ಬೆಳಗ್ಗೆ 9 ಗಂಟೆಯಿಂದ ನಡೆಯಲಿದೆ. ಎಲ್ಲೆಡೆ ಬಿಗಿ ಭದ್ರತೆ, ತೀವ್ರ ಕಟ್ಟೆಚ್ಚರ ವಹಿಸಲಾಗಿದ್ದು, ಗೊಂದಲಗಳಿಗೆ ಅವಕಾಶವಿಲ್ಲದಂತೆ ಸುಗಮ ರೀತಿಯಲ್ಲಿ ಪರೀಕ್ಷೆ ನಡೆಸಲು ಪದವಿಪೂರ್ವ ಶಿಕ್ಷಣ ಮಂಡಳಿ ಅಗತ್ಯ ಕ್ರಮ ಕೈಗೊಂಡಿದೆ.
ಎರಡು ಬಾರಿ ರಸಾಯನ ಶಾಸ್ತ್ರ ಪ್ರಶ್ನೆ ಪತ್ರಿಕೆ ಖಜಾನೆಯಿಂದಲೇ ಸೋರಿಕೆ ಆಗಿದ್ದ ಹಿನ್ನೆಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರೇ ಖುದ್ದು ಪ್ರಶ್ನೆ ಪತ್ರಿಕೆ ಸಿದ್ಧತೆ, ರವಾನೆ ಸೇರಿ ಪರೀಕ್ಷಾ ಪ್ರಕ್ರಿಯೆಗಳ ಉಸ್ತುವಾರಿಯನ್ನು ವಹಿಸಿಕೊಂಡಿದ್ದಾರೆ.
ಪದವಿ ಪೂರ್ವ ಶಿಕ್ಷಣ ಮಂಡಳಿ ರಸಾಯನಶಾಸ್ತ್ರ ಪರೀಕ್ಷೆಯನ್ನು ಯಾವುದೇ ತೊಂದರೆ ಎದುರಾಗದಂತೆ ನಡೆಸಲು ಸಕಲ ಸಿದ್ಧತೆ ಕೈಗೊಂಡಿದೆ.
ಮೊದಲ ಬಾರಿಗೆ ರಾಜಧಾನಿಯ ಬದಲಾಗಿ ಧಾರವಾಡದಿಂದ ರಾಜ್ಯದ ಬೇರೆ ಜಿಲ್ಲೆಗಳಿಗೆ ಪ್ರಶ್ನೆಪತ್ರಿಕೆ ರವಾನಿಸಲು ಕ್ರಮ ವಹಿಸಲಾಗಿದೆ.
ಮರು ಪರೀಕ್ಷೆ ಮುನ್ನಾದಿನವಾದ ಸೋಮವಾರ ಧಾರವಾಡ ಖಜಾನೆಯಿಂದ ಬಿಗಿ ಪೊಲೀಸ್ ಭದ್ರತೆಯೊಂದಿಗೆ ರಾಜ್ಯದ 30 ಜಿಲ್ಲೆಗಳಿಗೆ ವಿಶೇಷ ವಾಹನಗಳಲ್ಲಿ ಪ್ರಶ್ನೆ ಪತ್ರಿಕೆಗಳನ್ನು ರವಾನಿಸಲಾಗಿದೆ. ಅಲ್ಲಿಂದ ನೇರವಾಗಿ ಪರೀಕ್ಷಾ ಕೇಂದ್ರಗಳಿಗೆ ತಲುಪಲಿವೆ ಎಂದು ತಿಳಿದು ಬಂದಿದೆ.
ಪರೀಕ್ಷಾ ಕೇಂದ್ರಗಳ ಸುತ್ತ ಕಲಂ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿದ್ದು, ಪರೀಕ್ಷಾರ್ಥಿಗಳು, ಪರೀಕ್ಷಾ ಸಿಬ್ಬಂದಿಯನ್ನು ಹೊರತುಪಡಿಸಿ ಅನ್ಯರ ಪ್ರವೇಶ ನಿರ್ಬಂಧಿಸಲಾಗಿದೆ. ಪರೀಕ್ಷಾ ಕೇಂದ್ರಗಳ 200 ಮೀಟರ್ ವ್ಯಾಪ್ತಿಯಲ್ಲಿನ ಜೆರಾಕ್ಸ್ ಅಂಗಡಿಗಳನ್ನು ಮುಚ್ಚಿಸಲಾಗಿದೆ.
ರಸಾಯನ ಶಾಸ್ತ್ರ ಪ್ರಶ್ನೆಪತ್ರಿಕೆಗಳನ್ನು ಪಿಯು ಮಂಡಳಿಯ ಕಾರ್ಯದರ್ಶಿ ಜಾಫರ್, ಧಾರವಾಡ ಜಿಲ್ಲಾಧಿಕಾರಿ ರಾಜೇಂದ್ರ ಚೋಳನ್, ಎಡಿಸಿ ಡಾ.ಬಿ.ಸಿ.ಸತೀಶ್, ಇಲಾಖೆ ಜಂಟಿ ನಿರ್ದೇಶಕ ಈರಣ್ಣ ತುರಮರಿ ಸೇರಿ ಅಧಿಕಾರಿಗಳ ಸಮ್ಮುಖದಲ್ಲೇ ಪ್ರತ್ಯೇಕಗೊಳಿಸಿ ಎಲ್ಲ ಜಿಲ್ಲೆಗಳಿಗೆ ಕಳುಹಿಸಲಾಗಿದೆ. ಈ ಎಲ್ಲ ಪ್ರಕ್ರಿಯೆಗಳನ್ನು ವೀಡಿಯೊ ಚಿತ್ರೀಕರಣ ಮಾಡಲಾಗಿದೆ.
ಪ್ರಶ್ನೆಪತ್ರಿಕೆಗೆ ಬಿಗಿ ಭದ್ರತೆ
ಪಿಯುಸಿ ರಸಾಯನಶಾಸ್ತ್ರ ಪ್ರಶ್ನೆಪತ್ರಿಕೆಗಳನ್ನು ಧಾರವಾಡದ ಜಿಲ್ಲಾ ಖಜಾನೆಯಲ್ಲಿ ಇರಿಸಿದ್ದು, ಬಳಿಕ ಅಲ್ಲಿಂದಲೇ ಬಿಗಿ ಪೊಲೀಸ್ ಭದ್ರತೆಯೊಂದಿಗೆ ರಾಜ್ಯದ 30 ಜಿಲ್ಲೆಗಳ ವಿವಿಧ ಪರೀಕ್ಷಾ ಕೇಂದ್ರಗಳಿಗೆ ವಿಶೇಷ ವಾಹನಗಳಲ್ಲಿ ರವಾನಿಸಲಾಗಿದೆ.







