ಟ್ರಂಪ್ ವಿಡಂಬನೆಯ ನಕಲಿ ಪುಟ ಮುದ್ರಿಸಿದ ‘ಬೋಸ್ಟನ್ ಗ್ಲೋಬ್’

ಬೋಸ್ಟನ್, ಎ. 11: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಆಕಾಂಕ್ಷಿಯಾಗಿರುವ ಡೊನಾಲ್ಡ್ ಟ್ರಂಪ್ ಕುರಿತ ವಿಡಂಬನೆಯನ್ನು ಒಳಗೊಂಡ ನಕಲಿ ಪ್ರಥಮ ಪುಟವೊಂದನ್ನು ‘ಬೋಸ್ಟನ್ ಗ್ಲೋಬ್’ ಮುದ್ರಿಸಿದೆ!
ಒಂದು ವೇಳೆ ಟ್ರಂಪ್ ಅಮೆರಿಕದ ಅಧ್ಯಕ್ಷರಾದರೆ ಯಾವ ‘‘ಅನಾಹುತ’’ ಸಂಭವಿಸಬಹುದು ಎಂಬುದನ್ನು ತೋರಿಸುವ ನಕಲಿ ಸುದ್ದಿಗಳೇ ಈ ಪುಟದಲ್ಲಿ ತುಂಬಿವೆ.
ಪತ್ರಿಕೆಯ ಪ್ರಥಮ ಪುಟ ಎಪ್ರಿಲ್ 9, 2017ರ ದಿನಾಂಕವನ್ನು ತೋರಿಸುತ್ತದೆ. ಟ್ರಂಪ್ ಗಡಿಪಾರಿಗೆ ಕರೆ ನೀಡುವುದು ಅದರ ಪ್ರಮುಖ ಸುದ್ದಿಯಾಗಿದೆ. ಮೆಕ್ಸಿಕೊ ಗಡಿಯಲ್ಲಿ ನಿರ್ಮಿಸಲಾಗುತ್ತಿರುವ ಗೋಡೆಯ ಕಾಮಗಾರಿಯನ್ನು ನಿಲ್ಲಿಸಲಾಗಿದೆ ಎಂದು ಇನ್ನೊಂದು ಸುದ್ದಿ ಹೇಳುತ್ತದೆ.
ಚೀನಾದ ಪ್ರಥಮ ಮಹಿಳೆ ಪೆಂಗ್ ಲಿಯುವನ್‌ರ ಹೆಸರನ್ನು ಟ್ರಂಪ್ ತನ್ನ ನಾಯಿಗೆ ಇಡುವುದು, ಅದರ ಚಿತ್ರವನ್ನು ಟ್ವೀಟ್ ಮಾಡುವುದು ಹಾಗೂ ಅದಕ್ಕೆ ಇತರರಿಂದ ಬೈಗುಳ ಕೇಳುವುದು- ಇದಕ್ಕೆ ಸಂಬಂಧಿಸಿದ ಒಂದು ಸಣ್ಣ ಸುದ್ದಿಯೂ ಈ ನಕಲಿ ಪುಟದಲ್ಲಿದೆ.
ಈ ವ್ಯಕ್ತಿಯ ಹೇಳಿಕೆಗಳ ಆಧಾರದಲ್ಲಿ ಈ ವಿಡಂಬನೆಯನ್ನು ಮಾಡಲಾಗಿದೆ ಎಂದು ಸಂಪಾದಕೀಯದಲ್ಲಿ ಪತ್ರಿಕೆ ಹೇಳಿದೆ.





